ಬೆಂಗಳೂರು,ಫೆ.6- ಹಣಕಾಸು ವಿಚಾರದಲ್ಲಿ ದಂಪತಿ ಮಧ್ಯೆಯಿದ್ದ ಇಗೋ ಹಾಗೂ ಆಗಾಗ್ಗೆ ದುಡಿಮೆಯ ಬಗ್ಗೆ ಪತ್ನಿ ಹಿಯಾಳಿಸುತ್ತಿದ್ದುದರಿಂದ ಬೇಸರಗೊಂಡು ಆಕೆಯನ್ನು ಕೊಲೆಮಾಡಿದ್ದಾಗಿ ಆರೋಪಿ ಪತಿ ವೈಯಾಲಿಕಾವಲ್ ಠಾಣೆ ಪೊಲೀಸರ ಮುಂದೆ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.
ಮಲ್ಲೇಶ್ವರದ 18ನೇ ಅಡ್ಡ ರಸ್ತೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುವ ಶರತ್(43) ಮತ್ತು ಚೇತನಾ(42) ದಂಪತಿ ನಡುವೆ ಹಣಕಾಸು ವಿಚಾರಕ್ಕೆ ಪ್ರತಿನಿತ್ಯ ಜಗಳವಾಗುತ್ತಿತ್ತು ಎನ್ನಲಾಗಿದೆ.
ಖಾಸಗಿ ಕಾಲೇಜೊಂದರಲ್ಲಿ ಚೇತನಾ ಉಪನ್ಯಾಸಕಿ ವೃತ್ತಿ ಮಾಡುತ್ತಿದ್ದಳು. ಶರತ್ ಖಾಸಗಿ ಕಂಪನಿಯೊಂದರ ಉದ್ಯೋಗಿ ಇವರುಗಳ ವೇತನ ಅಜಗಜಾಂತರವಾಗಿತ್ತು. ಹಾಗಾಗಿ ಚೇತನಾ ಅವರು ಎಷ್ಟು ದುಡಿದರೂ ಅಷ್ಟೇ ಎಂದು ಪತಿಯನ್ನು ಹಿಯಾಳಿಸುತ್ತಿದ್ದರೂ ಇದರಿಂದ ಶರತ್ ನೊಂದಿದ್ದರು.
ಕಳೆದ ಎರಡು ದಿನಗಳಿಂದ ಚೇತನಾ ಅವರಿಗೆ ಜ್ವರ ಬಂದಿದ್ದು, ಇದೇ ಸೂಕ್ತ ಸಮಯವೆಂದು ನಿರ್ಧರಿಸಿ ಫೆ.3ರಂದು ಜ್ವರದ ಮಾತ್ರೆ ಬದಲಾಗಿ ನಿದ್ದೆ ಮಾತ್ರೆ ನೀಡಿದ್ದ. ಅದರಿಂದ ಗಾಢ ನಿದ್ರೆಯಲ್ಲಿದ್ದ ಪತ್ನಿಯನ್ನು ಕತ್ತುಹಿಸುಕಿ ಕೊಲೆ ಮಾಡಿ ನಂತರ ಮಂಚದಿಂದ ಬಿದ್ದು ಸತ್ತಿದ್ದಾರೆಂದು ಕಥೆಕಟ್ಟಿದ್ದ.
ಆದರೆ ವೈದ್ಯಕೀಯ ಪರೀಕ್ಷೆ ವರದಿಯಿಂದ ಕೊಲೆ ಮಾಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಆರೋಪಿಯ ಶರತ್ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.