Thursday, February 6, 2025
Homeರಾಜ್ಯದ್ವೇಷ ಭಾಷಣ ನಿರ್ಬಂಧಕ್ಕೆ ನೂತನ ವಿಧೇಯಕ ತರಲು ಮುಂದಾದ ಕಾಂಗ್ರೆಸ್ ಸರ್ಕಾರ

ದ್ವೇಷ ಭಾಷಣ ನಿರ್ಬಂಧಕ್ಕೆ ನೂತನ ವಿಧೇಯಕ ತರಲು ಮುಂದಾದ ಕಾಂಗ್ರೆಸ್ ಸರ್ಕಾರ

Congress government to bring new bill to ban hate speech

ಬೆಂಗಳೂರು,ಫೆ.6- ಇನ್ನು ಮುಂದೆ ನಿರ್ಧಿಷ್ಟ ಸಮುದಾಯ, ಜಾತಿ ಇಲ್ಲವೇ ಧರ್ಮ, ದ್ವೇಷ ಇಲ್ಲವೇ ಬೆಂಕಿ ಕಾರುವ ಭಾಷಣಗಳನ್ನು ಮಾಡುವವರ ಬಾಯಿಗೆ ಬೀಗ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಏಕೆಂದರೆ ಮಾರ್ಚ್ನಲ್ಲಿ ನಡೆಯಲಿರುವ ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ (ಹೋರಾಟ ತಡೆಗಟ್ಟುವಿಕೆ ಮತ್ತು ಶಿಕ್ಷೆ) ವಿಧೇಯಕ 2025ನ್ನು ವಿಧಾನಮಂಡಲ ಉಭಯ ಸದನಗಳಾದ ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲಿ ಮಂಡಿಸಲಿದೆ.

ಸದನದಲ್ಲಿ ಮಂಡನೆಯಾದ ಬಳಿಕ ರಾಜ್ಯಪಾಲರ ಅಂಕಿತಕ್ಕೆ ಮಸೂದೆಯನ್ನು ಕಳುಹಿಸಿಕೊಡಲಾಗುವುದು. ನಂತರ ಕಾನೂನಾಗಿ ಮಾರ್ಪಡಾಗಲಿದೆ. ಈ ಮಸೂದೆಯನ್ನು ಜಾರ್ಖಂಡ್ನಲ್ಲಿ ಅಲ್ಲಿನ ಮುಖ್ಯಮಂತ್ರಿ ಹೇಮಂತ್ ಸೊರೈನ್ ಅವರು ಜಾರಿಗೆ ತಂದಿದ್ದರು. ಇದೇ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಲು ಸರ್ಕಾರ ಮುಂದಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆಯ ಅಧಿಕಾರಿಗಳು ಜಾರ್ಖಂಡ್ ಕಾನೂನನ್ನು ಅಧ್ಯಯನ ನಡೆಸಿದ್ದು, ಅದರಲ್ಲಿರುವ ಕೆಲವು ಅಂಶಗಳನ್ನು ಅಳವಡಿಸಿಕೊಂಡು ಮಸೂದೆಯನ್ನು ಸಿದ್ಧಪಡಿಸಿದ್ದಾರೆಂದು ತಿಳಿದುಬಂದಿದೆ.

ರಾಜ್ಯದಲ್ಲಿ ಒಂದು ಸಮುದಾಯ, ಜಾತಿ, ಧರ್ಮ ನಿರ್ಧಿಷ್ಟ ಸಮುದಾಯದ ವ್ಯಕ್ತಿಗಳು, ಧಾರ್ಮಿಕ ಮುಖಂಡರು ಸೇರಿದಂತೆ ಮತ್ತಿತರರನ್ನು ಗುರಿಯಾಗಿಟ್ಟುಕೊಂಡು ಕೆಲವು ನಿರ್ಧಿಷ್ಟ ಬಣದವರು ಹಲ್ಲೆ ಮಾಡುವುದು ಜನಾಂಗೀಯ ನಿಂದನೆ, ದ್ವೇಷ ಭಾಷಣ ಮಾಡುವುದು ಸರ್ವೆ ಸಾಮಾನ್ಯವಾಗಿತ್ತು. ಇದನ್ನು ತಡೆಗಟ್ಟಬೇಕೆಂಬ ಬೇಡಿಕೆಯು ಕೆಲವರಿಂದ ಕೇಳಿಬಂದಿತ್ತು.

ಈ ಮೊದಲು ಈ ಕಾನೂನನ್ನು ಜಾರಿಗೆ ತರಬೇಕೆಂಬ ಒತ್ತಡ ಜನಪ್ರತಿಧಿನಿಗಳಿಂದ ಮತ್ತು ಸಾರ್ವಜನಿಕರಿಂದಲೂ ಇತ್ತು. ಆದರೆ ಕೆಲವು ಬಲಪಂಥೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಸೂದೆ ಮೂಲೆಗುಂಪಾಗಿತ್ತು. ಇದೀಗ ಬರುವ ಜಂಟಿ ಅಧಿವೇಶನದ ವೇಳೆ ಮಸೂದೆಯನ್ನು ಮಂಡಿಸಲು ಸರ್ಕಾರ ಸಿದ್ದತೆ ನಡೆಸಿದ್ದು, ಬಜೆಟ್ ಅಧಿವೇಶನದಲ್ಲಿ ಅಂಗೀಕಾರ ಪಡೆಯಲು ಮುಂದಾಗಿದೆ.

ದ್ವೇಷ ಭಾಷಣವು ದೇಶದ ಸಂರಚನೆಗೆ ಜಾತ್ಯತೀತ ಹಾನಿ ಮಾಡುವಷ್ಟು ಸಮರ್ಥವಾಗಿರುವ ಗಂಭೀರ ಅಪರಾಧ ಎಂದು ಸುಪ್ರಿಂ ಕೋರ್ಟ್ ಇತ್ತೀಚೆಗಷ್ಟೇ ವ್ಯಾಖ್ಯಾನಿಸಿತ್ತು. ಜತೆಗೆ ಯಾವುದೇ ದೂರು ದಾಖಲಾಗದೆ ಇದ್ದರೂ ದ್ವೇಷ ಭಾಷಣ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿತ್ತು.

ಇದರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಮಸೂದೆಯನ್ನು ಜಾರಿ ಮಾಡಲು ನಿರ್ಧರಿಸಿದ್ದು, ಇದಕ್ಕಾಗಿ ಬಿಗಿಯಾದ ಕಾನೂನನ್ನು ಜಾರಿ ಮಾಡಲು ಮುಂದಾಗಿದೆ. ಸರ್ಕಾರ ಜಾರಿ ಮಾಡಲು ಮುಂದಾಗಿರುವ ನೂತನ ಮಸೂದೆಯಲ್ಲಿ ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ ಸ್ಥಳ, ಭಾಷೆ, ರೆಸಿಡೆನ್‌್ಸ, ಅಂಗವೈಕಲ್ಯ, ಬುಡಕಟ್ಟುವಿನ ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ವ್ಯಕ್ತಿ ಅಥವಾ ಗುಂಪನ್ನು ಮೂರು ವರ್ಷಗಳ ಕಾಲ ಶಿಕ್ಷೆಗೆ ಗುರಿಪಡಿಸಲಿದೆ ಅಥವಾ 5 ಸಾವಿರ ರೂ. ದಂಡ ಮತ್ತು ಈ ಎರಡನ್ನೂ ವಿಧಿಸುವ ಅವಕಾಶ ಕಾನೂನಿನಲ್ಲಿದೆ.

ಅದೇ ರೀತಿ ಧಾರ್ಮಿಕ, ಜನಾಂಗೀಯ, ಜಾತಿ, ಸಮುದಾಯ, ಲಿಂಗ, ಹುಟ್ಟಿನ ಸ್ಥಳ, ಭಾಷೆ, ಅಂಗವೈಕಲ್ಯ, ಬುಡಕಟ್ಟಿನ ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವಂತೆ ಉದ್ದೇಶಪೂರ್ವಕವಾಗಿ ಪ್ರಕಟಿಸುವವರು, ಪ್ರಚಾರ ಮಾಡುವವರು ಅಥವಾ ಸಮರ್ಥಿಸುವವರು, ವಕಾಲತ್ತು ವಹಿಸುವವರನ್ನೂ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

ಧಾರ್ಮಿಕ ಸೌಹಾರ್ದತೆಗೆ ಧಕ್ಕೆ, ಕೋಮು ಸೌಹಾರ್ದವನ್ನು ಹಾಳುಗೆಡವುದು, ಸಾರ್ವಜನಿಕರಲ್ಲಿ ದ್ವೇಷ ಭಾವನೆ ಮೂಡಿಸಿರುವುದು, ಸುಳ್ಳು, ಪ್ರಚೋದಕ ಮತ್ತು ವಿಡಿಯೋ ತುಣುಕುಗಳನ್ನು ಬದಲಿಸಿ ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿಕಟ್ಟುವುದು ಸೇರಿದಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟು ಮಾಡಿರುವಂತಹ ಗುರುತರ ಆರೋಪ ಮತ್ತು ಹಲವು ಗಂಭೀರ ಅಪರಾಧಗಳನ್ನು ಎಸಗಿರುವುದು ಸಾಬೀತಾಗಿರುವ ಪ್ರಕರಣಗಳೂ ಸೇರಿದಂತೆ ಕಳೆದ ಒಂದೇ ವರ್ಷದಲ್ಲಿ ಒಟ್ಟು 330 ಪ್ರಕರಣಗಳನ್ನು ಹಿಂದಿನ ಬಿಜೆಪಿ ಸರ್ಕಾರವು ಅಭಿಯೋಜನೆಯಿಂದಲೇ ಹಿಂಪಡೆದಿತ್ತು.

ಹೆಚ್ಚಿನ ಪ್ರಕರಣಗಳಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಉತ್ತರ ಕನ್ನಡ ಹಿಂದೂ ಬಳಗ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಆರೋಪಿಗಳಾಗಿದ್ದಾರೆ. ಕಾವೇರಿ ನೀರಿನ ಗಲಾಟೆ, ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಹಿಂಪಡೆದಿದ್ದಾರಾದರೂ ಬೆರಳಣಿಕೆಯಷ್ಟಿದ್ದವು.

ಹಿನ್ನೆಲೆ:
ದ್ವೇಷ ಭಾಷಣವು ವಿಭಿನ್ನ ಅರ್ಥಗಳನ್ನು ಹೊಂದಿರುವ ಪದವಾಗಿದ್ದು, ಒಂದೇ, ಸ್ಥಿರವಾದ ವ್ಯಾಖ್ಯಾನವನ್ನು ಹೊಂದಿಲ್ಲ. ಇದನ್ನು ಜನಾಂಗ, ಧರ್ಮ, ಲಿಂಗ ಅಥವಾ ಲೈಂಗಿಕ ದೃಷ್ಟಿಕೋನದಂತಹ ಯಾವುದನ್ನಾದರೂ ಆಧರಿಸಿ ವ್ಯಕ್ತಿ ಅಥವಾ ಗುಂಪಿನ ಕಡೆಗೆ ದ್ವೇಷವನ್ನು ವ್ಯಕ್ತಪಡಿಸುವ ಅಥವಾ ಹಿಂಸೆಯನ್ನು ಪ್ರೋತ್ಸಾಹಿಸುವ ಸಾರ್ವಜನಿಕ ಭಾಷಣ ಎಂದು ವ್ಯಾಖ್ಯಾನಿಸುತ್ತದೆ.

ಸಾಮಾನ್ಯವಾಗಿ ಜನಾಂಗ, ಬಣ್ಣ, ರಾಷ್ಟ್ರೀಯ ಮೂಲ, ಲಿಂಗ, ಅಂಗವೈಕಲ್ಯ, ಧರ್ಮ ಅಥವಾ ಲೈಂಗಿಕ ದೃಷ್ಟಿಕೋನದಂತಹ ಗುಂಪಿನ ಗುಣಲಕ್ಷಣಗಳ ಕಾರಣದಿಂದಾಗಿ ವ್ಯಕ್ತಿ ಅಥವಾ ಗುಂಪಿನ ಬಗ್ಗೆ ದ್ವೇಷ ಅಥವಾ ಅವಹೇಳನದ ಸಂವಹನವನ್ನು ಒಳಗೊಂಡಿರುತ್ತದೆ ಎಂದು ಭಾವಿಸಲಾಗಿದೆ.
ದ್ವೇಷ ಅಥವಾ ಅವಮಾನ ಏನನ್ನು ಒಳಗೊಂಡಿದೆ ಎಂಬುದಕ್ಕೆ ಒಂದೇ ವ್ಯಾಖ್ಯಾನವಿಲ್ಲ. ವಾಕ್ ಸ್ವಾತಂತ್ರ್ಯ , ದ್ವೇಷ ಭಾಷಣ ಮತ್ತು ದ್ವೇಷ ಭಾಷಣ ಶಾಸನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ.

ಕೆಲವು ದೇಶಗಳ ಕಾನೂನುಗಳು ದ್ವೇಷ ಭಾಷಣವನ್ನು ಭಾಷಣ, ಸನ್ನೆಗಳು, ನಡವಳಿಕೆ, ಬರವಣಿಗೆ ಅಥವಾ ಪ್ರದರ್ಶನಗಳು ಎಂದು ವಿವರಿಸುತ್ತವೆ, ಅದು ಗುಂಪಿನಲ್ಲಿನ ಸದಸ್ಯತ್ವದ ಆಧಾರದ ಮೇಲೆ ಒಂದು ಗುಂಪು ಅಥವಾ ವ್ಯಕ್ತಿಗಳ ವಿರುದ್ಧ ಹಿಂಸೆ ಅಥವಾ ಪೂರ್ವಗ್ರಹ ಪೀಡಿತ ಕ್ರಮಗಳನ್ನು ಪ್ರಚೋದಿಸುತ್ತದೆ ಅಥವಾ ಗುಂಪಿನಲ್ಲಿನ ಸದಸ್ಯತ್ವದ ಆಧಾರದ ಮೇಲೆ ಒಂದು ಗುಂಪು ಅಥವಾ ವ್ಯಕ್ತಿಗಳನ್ನು ಅವಹೇಳನ ಮಾಡುತ್ತದೆ ಅಥವಾ ಬೆದರಿಸುತ್ತದೆ.

ಕಾನೂನು ಕೆಲವು ಗುಣಲಕ್ಷಣಗಳ ಆಧಾರದ ಮೇಲೆ ಸಂರಕ್ಷಿತ ಗುಂಪುಗಳನ್ನು ಗುರುತಿಸಬಹುದು. ಸಾಮಾನ್ಯವಾಗಿ ದ್ವೇಷ ಭಾಷಣ ಎಂದು ಲೇಬಲ್ ಮಾಡಲಾದ ವಸ್ತುವನ್ನು ಸಾಂವಿಧಾನಿಕವಾಗಿ ರಕ್ಷಿಸಲಾಗಿದೆ. ನಾಗರಿಕ ಕಾನೂನು , ಕ್ರಿಮಿನಲ್ ಕಾನೂನು ಅಥವಾ ಎರಡರಡಿ ಪರಿಹಾರ ಪಡೆಯಬಹುದು.

ಜನಾಂಗ ಹತ್ಯೆಯಂತಹ ಸಾಮೂಹಿಕ ದೌರ್ಜನ್ಯಗಳಿಗೆ ದ್ವೇಷ ಭಾಷಣವು ಪೂರ್ವಾಪೇಕ್ಷಿತಗಳಲ್ಲಿ ಒಂದಾಗಿದೆ ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ . ನರಮೇಧಕ್ಕೆ ಪ್ರಚೋದನೆಯು ದ್ವೇಷ ಭಾಷಣದ ತೀವ್ರ ರೂಪವಾಗಿದ್ದು, ರುವಾಂಡಾದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯಂತಹ ಅಂತರರಾಷ್ಟ್ರೀಯ ನ್ಯಾಯಾಲಯಗಳ ತೀರ್ಪುಗಳಲ್ಲಿದೆ.

RELATED ARTICLES

Latest News