ಬೆಂಗಳೂರು,ಫೆ.6- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮತ್ತೆ ಕಿಡಿಕಾರಿರುವ ಮಾಜಿ ಶಾಸಕ ರೇಣುಕಾಚಾರ್ಯ, ಯಡಿಯೂರಪ್ಪನವರ ರಾಜಕೀಯ ಅನುಭವದಷ್ಟು ನಿನಗೆ ವಯಸ್ಸಾಗಿಲ್ಲ. ಅವರ ಬಗ್ಗೆ ಮಾತನಾಡಲು ಏನು ನೈತಿಕತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ಯತ್ನಾಳ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತನಾಡಿದರೆ ಎದುರಾಳಿಗಳು ಸುಮನಿರಬಹುದೆಂಬ ಲೆಕ್ಕಾಚಾರ ಇರಬಹುದು. ಯಡಿಯೂರಪ್ಪನವರ ರಾಜಕೀಯ ಅನುಭವದಷ್ಟು ನಿನಗೆ ವಯಸ್ಸಾಗಿಲ್ಲ. ಅಂಥವರ ಬಗ್ಗೆ ಮಾತನಾಡಿದರೆ ರಾಜಕೀಯವಾಗಿ ಭಸವಾಗುತ್ತೀಯ ಎಂದು ಎಚ್ಚರಿಕೆ ಕೊಟ್ಟರು.
ಯತ್ನಾಳ್ ಬಗ್ಗೆ ವಿಜಯಪುರದ ಹಲವರು ನನಗೆ ಮೆಸೇಜ್ ಮಾಡಿದ್ದಾರೆ. ಯತ್ನಾಳ್ ಬಸ್ ಕಂಡಕ್ಟರ್ ಆಗಿ ಟಿಕೆಟ್ ಹರಿಯುತ್ತಿದ್ದರು. ಯಡಿಯೂರಪ್ಪ ಬಗ್ಗೆ ಇವರೇನು ಮಾತಾಡೋದು ವಯಸ್ಸಾಗಿದೆ ಅಂದಿದ್ದಾರೆ. ಏ ಯತ್ನಾಳ್ ನಿನಗೆ ವಯಸ್ಸಾಗಿಲ್ವಾ? ಯಡಿಯೂರಪ್ಪ ಬಗ್ಗೆ ಮಾತಾಡೋಕ್ಕೆ ನಿನಗೆ ಏನಿದೆ ನೈತಿಕತೆ? ಎಂದು ಪ್ರಶ್ನಿಸಿದ್ದಾರೆ.
ಸೊರಬದಲ್ಲಿ ಒಂದು ದಿನವೂ ಕುಮಾರ್ ಬಂಗಾರಪ್ಪ ಸದಸ್ಯತ್ವ ಅಭಿಯಾನ ನಡೆಸಿಲ್ಲ.ದಿಢೀರನೇ ಈಗ ಕುಮಾರ್ ಬಂಗಾರಪ್ಪನವರು ರಾಷ್ಟ್ರೀಯ ನಾಯಕನಾಗಲು ಹೊರಟಿದ್ದಾರೆ. ಬಿಜೆಪಿಗೆ ಬಂದಿದ್ದಾರಷ್ಟೇ. ಆದರೆ ಅವರು ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹರಿಹರದಲ್ಲಿ ಶಾಸಕ ಬಿ.ಪಿ.ಹರೀಶ್ಗೆ ಟಿಕೆಟ್ ಘೋಷಣೆ ಮಾಡಿಸಿದ್ದೇ ನಾವು.
ಬಿ.ಪಿ.ಹರೀಶ್ ಗೆದ್ದಿದ್ದು ಯಡಿಯೂರಪ್ಪ ಕೃಪಾಕಟಾಕ್ಷದಿಂದ ಈಗ ಅವರು ಯಡಿಯೂರಪ್ಪ ವಿರುದ್ಧವೇ ಮಾತಾಡುತ್ತಿದ್ದಾರೆ. ಅವರ ಬಗ್ಗೆ ಮಾತಾಡುವ ನೈತಿಕತೆ ಇವರಿಗಿಲ್ಲ ಎಂದು ಹೇಳಿದ್ದಾರೆ. ಇನ್ನು ಸಿದ್ದೇಶ್ವರ ಸಂಸ್ಥೆ ಕಟ್ಟಿದ್ದು ಸಂಜಯ ಪಾಟೀಲ್ ಕರಮಣಿ ಎಂಬ ಹಿರಿಯರು. ಸಿದ್ದೇಶ್ವರ್ ಅಲ್ಲ ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.