ಬೆಂಗಳೂರು,ಫೆ.7- ಅಪ್ರಾಪ್ತಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಪೋಸ್ಕೋ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಹೀಗಾಗಿ ಯಡಿಯೂರಪ್ಪನವರು ತಾತ್ಕಾಲಿಕವಾಗಿ ಬಂಧನದ ಭೀತಿಯಿಂದ ಪಾರಾಗಿದ್ದಾರೆ. ಆದರೆ ಅವರ ಮೇಲೆ ದಾಖಲಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದುವರೆಸಲಿದೆ. ತಾಂತ್ರಿಕ ಕಾರಣಕ್ಕೆ ಈ ಪ್ರಕರಣವನ್ನು ಹೈಕೋರ್ಟ್ ಪೋಸ್ಕೋ ಕೋರ್ಟ್ಗೆ ಮರಳಿಸಿದೆ. ಹೀಗಾಗಿ ಬಿಎಸ್ವೈ ವಿಚಾರಣೆಯನ್ನು ಎದುರಿಸಲೇಬೇಕು.
ವಾದ-ಪ್ರತಿವಾದ ಆಲಿಸಿ ಇಂದಿಗೆ ತೀರ್ಪು ಕಾಯ್ದಿರಿಸಿದ್ದ ಧಾರವಾಡ ಹೈಕೋರ್ಟ್ನ ಏಕಸದಸ್ಯ ಪೀಠದ ನ್ಯಾ.ನಾಗಪ್ರಸನ್ನ ಅವರು ಯಡಿಯೂರಪ್ಪ ಮೇಲೆ ದಾಖಲಾಗಿರುವ ಪೋಸ್ಕೋ ಪ್ರಕರಣವನ್ನು ರದ್ದುಪಡಿಸಬೇಕೆಂಬ ಅರ್ಜಿದಾರರ ಮೇಲನವಿಯನ್ನು ವಜಾಗೊಳಿಸಿ ನಿರೀಕ್ಷಣಾ ಜಾಮೀನು ಮಾತ್ರ ಮಂಜೂರು ಮಾಡಿದರು.
ತನಿಖೆಯು ಮುಂದುವರೆಯಲಿದೆ ಎಂದು ಹೇಳಿರುವ ನ್ಯಾಯಾಲಯ ವಿಚಾರಣೆಗೆ ತನಿಖಾಧಿಕಾರಿಗಳು ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಅರ್ಜಿದಾರರ ಪರ ವಕೀಲರಿಗೆ ಸೂಚನೆ ಕೊಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ :
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 2024ರ ಮಾರ್ಚ್ 3ರಂದು ಬಿಎಸ್ವೈ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಆರೋಪದ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತು.
ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆ ಪರಿಗಣಿಸಿ ಸರ್ಕಾರವು ಸಿಐಡಿಗೆ ವರ್ಗಾವಣೆ ಮಾಡಿತ್ತು. ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಅದರಂತೆ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿ ತಮ ಹೇಳಿಕೆಗಳನ್ನು ನೀಡಿದ್ದರು. ಈ ನಡುವೆ ತಮ ವಿರುದ್ಧದ ಪ್ರಕರಣ ರದ್ದು ಮತ್ತು ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಯಡಿಯೂರಪ್ಪ ಹೈಕೋರ್ಟ್ಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ವಿಚಾರಣೆಗೆ ಖುದ್ದು ಹಾಜರಾಗುವುದರಿಂದ ಯಡಿಯೂರಪ್ಪ ಅವರಿಗೆ ವಿನಾಯಿತಿ ನೀಡಿ, 2024ರ ಜು.12ರಂದು ಹೈಕೋರ್ಟ್ ಮತ್ತೊಂದು ಆದೇಶ ಮಾಡಿತ್ತು. ಅಂತಿಮವಾಗಿ 2025ರ ಜ.17ರಂದು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.