ಬೆಂಗಳೂರು,ಫೆ.7- ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ವಹಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದು ಮಾಡಿರುವುದನ್ನು ಸುಪ್ರೀಂಕೋರ್ಟ್ನಲ್ಲಿ ಮೇಲಮನ್ವಿ ಸಲ್ಲಿಸಿ ಪ್ರಶ್ನಿಸುವುದಾಗಿ ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ ಹೋರಾಟವನ್ನು ಕೈಬಿಡುವುದಿಲ್ಲ. ಹೋರಾಟದಲ್ಲಿ ಸೋಲು-ಗೆಲುವು ಸಹಜ. ವಿಚಲಿತರಾಗುವ ಅಗತ್ಯವಿಲ್ಲ. ಹೈಕೋರ್ಟ್ ತೀರ್ಪು ಹಿನ್ನಡೆ ಎಂದು ಭಾವಿಸಬೇಕಿಲ್ಲ ಎಂದರು.
ಸಿಬಿಐ ತನಿಖೆಗೆ ನಿರಾಕರಿಸಿರುವ ಹೈಕೋರ್ಟ್ ತೀರ್ಪಿಗೆ ಯಾವೆಲ್ಲ ಅಂಶಗಳು ಪರಿಗಣಿಸಲ್ಪಟ್ಟಿದೆ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ. ಅನಂತರ ಸುಪ್ರೀಂಕೋರ್ಟ್ಗೆ ಮೇಲನವಿ ಸಲ್ಲಿಸುತ್ತೇವೆ. ಸಿಬಿಐ ತನಿಖೆಗೆ ಪೂರಕವಾದಂತಹ ದಾಖಲಾತಿಗಳು ನನ್ನ ಬಳಿ ಇವೆ ಎಂದು ಹೇಳಿದರು.
ಹೈಕೋರ್ಟ್ ತೀರ್ಪಿನ ಪ್ರತಿ ನಮಗೆ ಸಿಕ್ಕಿಲ್ಲ. ಆರಂಭಿಕ ಹಂತದಲ್ಲಿ ಪೂರ್ಣ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಸಣ್ಣಪುಟ್ಟ ಅಂಶಗಳ ಆಧಾರದ ಮೇಲೆ ಬಹುಶಃ ತೀರ್ಪು ಪ್ರಕಟವಾಗಿರಬಹುದು. ಹೈಕೋರ್ಟ್ ತೀರ್ಪು ನೀಡಿರುವುದು ತನಿಖಾ ಸಂಸ್ಥೆಯನ್ನು ನಿರ್ಧರಿಸುವ ಕುರಿತಂತೆ ಮಾತ್ರ. ತನಿಖೆಯ ವರದಿ ಬಗ್ಗೆಯಾಗಲಿ ಅಥವಾ ಪ್ರಕರಣದ ಬಗ್ಗೆಯಾಗಲಿ ತೀರ್ಮಾನವಾಗಿಲ್ಲ. ನಮ ಹೋರಾಟವನ್ನು ಕಾನೂನು ಪ್ರಕಾರ ಮುಂದುವರೆಸುತ್ತೇವೆ. ನನ್ನ ಉತ್ಸಾಹ ಕುಗ್ಗುವುದಿಲ್ಲ. ಗುರಿ ತಲುಪುವುದು ನಿಶ್ಚಿತ ಎಂದರು.