ಬೆಂಗಳೂರು,ಜ.27- ಏಳು ಕೋಟಿ ಹಣ ದರೋಡೆ ಪ್ರಕರಣ ಮಾಸುವ ಮುನ್ನವೇ ಎಟಿಎಂ ಗೆ ಹಣ ತುಂಬುವ ಏಜೆನ್ಸಿಯೊಂದರ ಆರು ಮಂದಿ ಸಿಬ್ಬಂದಿ 1.38 ಕೋಟಿ ಹಣವನ್ನು ಎಟಿಎಂ ಗಳಿಗೆ ತುಂಬದೆ ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.ಈ ಬಗ್ಗೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಆರು ಮಂದಿ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.
ಒಂದು ಪ್ರಕರಣದಲ್ಲಿ ಮಿಥುನ್ ಎಂಬುವವರು ಏಜೆನ್ಸಿ ಸಿಬ್ಬಂದಿಗಳಾದ ಪ್ರವೀಣ್,ಧನಶೇಕ್, ರಾಮಕ್ಕ ಮತ್ತು ಹರೀಶ್‌ಕುಮಾರ್ ಎಂಬುವವರ ವಿರುದ್ಧ ದೂರು ನೀಡಿದರೆ, ಮತ್ತೊಂದು ಪ್ರಕರಣದಲ್ಲಿ ನಾಗಾರ್ಜುನ್ ಎಂಬುವವರು ಹರೀಶ್‌ಕುಮಾರ್, ಪ್ರವೀಣ್‌ಕುಮಾರ್
ಮತ್ತು ವರುಣ್ ವಿರುದ್ಧ ದೂರು ನೀಡಿದ್ದಾರೆ.
ವಿಶೇಷವೆಂದರೆ ಈ ಎರಡು ಎಫ್‌ಐಆರ್‌ಗಳಲ್ಲಿಯೂ ಆರೋಪಿ ಹರೀಶ್‌ಕುಮಾರ್ ಹೆಸರಿದೆ.
ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಟಾಚಿ ಪೇಮೆಂಟ್ ಸರ್ವಿಸ್ ಪ್ರೈ.ಲಿ ಎಂಬ ಎಟಿಎಂಗೆ ಹಣ ತುಂಬುವ ಸಂಸ್ಥೆ ಇದೆ. ಈ ಸಂಸ್ಥೆಯವರು ಎಸ್‌ಬಿಐ, ಆಕ್ಸಿಸ್ ಬ್ಯಾಂಕ್ ಮತ್ತು ಇತರೆ ಬ್ಯಾಂಕ್‌ಗಳೊಂದಿಗೆ ಎಟಿಎಂ ಗಳಿಗೆ ಹಣ ಡೆಪಾಜಿಟ್ ಮಾಡುವ ಕೆಲಸ ನಿರ್ವಹಿಸುತ್ತಾರೆ.
ಈ ಕಂಪನಿಯವರು ಕೋರಮಂಗಲದ ಆಕ್ಸಿಸ್ ಬ್ಯಾಂಕ್‌ನಿಂದ ಹಣ ಪಡೆದು ಆ ಹಣವನ್ನು ಎಲ್ಲಾ ಎಟಿಎಂಗಳಿಗೆ ಡೆಪಾಜಿಟ್ ಮಾಡುತ್ತಾರೆ.
ಈ ಕಂಪನಿಯ ಮೂವರು ಸಿಬ್ಬಂದಿಗಳು ಕಂಪನಿಗೆ ಮೋಸ ಮಾಡುವ ಉದ್ದೇಶದಿಂದ ಬ್ಯಾಂಕ್‌ನಿಂದ ಎಟಿಎಂಗಳಿಗೆ ಹಣ ಡೆಪಾಜಿಟ್ ಮಾಡಲು ಪಡೆದ ಹಣವನ್ನು ಎಟಿಎಂಗಳಿಗೆ ತುಂಬದೇ 80,49,800 ರೂ. ಹಣವನ್ನು ಮೋಸದಿಂದ ತೆಗೆದುಕೊಂಡು ನಂಬಿಕೆ ದ್ರೋಹ ವೆಸಗಿದ್ದಾರೆ.
2024 ಏಪ್ರಿಲ್ 19 ರಿಂದ 2025 ಆಗಸ್ಟ್ 22 ರ ನಡುವೆ ಹಂತ ಹಂತವಾಗಿ ಈ ಭಾರಿ ಮೊತ್ತದ ಹಣ ದುರುಪಯೋಗವಾಗಿರುವ ಬಗ್ಗೆ ತಡವಾಗಿ ಕಂಪನಿಯವರ ಗಮನಕ್ಕೆ ಬಂದಿದ್ದು, ನಾಗಾರ್ಜುನ್ ಎಂಬುವವರು ಮೂವರು ಕಂಪನಿ ಸಿಬ್ಬಂದಿ ವಿರುದ್ಧ ದೂರು ನೀಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಇದೇ ಕಂಪನಿಯ ನಾಲ್ವರು ಸಿಬ್ಬಂದಿಗಳು ಎಟಿಎಂಗಳಿಗೆ ಹಣ ಡೆಪಾಜಿಟ್ ಮಾಡದೆ ನಂಬಿಕೆ ದ್ರೋಹವೆಸಗಿ 2024 ಫೆ.23 ರಿಂದ ಕಳೆದ ಜ.19 ರ ವರೆಗೆ 57,96,400 ರೂ. ಹಣ ಮೋಸದಿಂದ ತೆಗೆದುಕೊಂಡು ನಂಬಿಕೆ ದ್ರೋಹವೆಸಗಿರುವುದು ಗೊತ್ತಾಗಿದೆ.
ಈ ಬಗ್ಗೆ ಮಿಥುನ್ ಎಂಬುವವರು ನಾಲ್ವರು ಸಿಬ್ಬಂದಿಗಳ ವಿರುದ್ಧ ಜ.19 ರಂದು ದೂರು ನೀಡಿದ್ದಾರೆ. ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಹಣ ದುರುಪಯೋಗ ಪಡಿಸಿಕೊಂಡು ತಲೆಮರೆಸಿಕೊಂಡಿರುವ ಆರು ಮಂದಿ ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಈ ಏಜೆನ್ಸಿಯ ಆರು ಮಂದಿ ಸಿಬ್ಬಂದಿ ಯಾವ ರೀತಿ ಹಂತ ಹಂತವಾಗಿ ಎಟಿಎಂ ಗೆ ತುಂಬುವ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
