Friday, November 22, 2024
Homeರಾಜ್ಯಬರ ಪರಿಹಾರಕ್ಕಾಗಿ ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ಜೆಡಿಎಸ್ ಸಹಕಾರ ಕೇಳಿದ ಸಿಎಂ

ಬರ ಪರಿಹಾರಕ್ಕಾಗಿ ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ಜೆಡಿಎಸ್ ಸಹಕಾರ ಕೇಳಿದ ಸಿಎಂ

ಬೆಂಗಳೂರು, ನ.5- ರಾಜ್ಯದ ಬರ ನಿರ್ವಹಣೆಗೆ ಹೆಚ್ಚಿನ ನೆರವು ಪಡೆದುಕೊಳ್ಳಲು ಕೇಂದ್ರದ ಬಳಿ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಲು ಸಹಕಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ನಾಯಕರಲ್ಲಿ ಮನವಿ ಮಾಡಿದ್ದಾರೆ. ಜಾತ್ಯತೀತ ಜನತಾ ದಳ ನಾಡಿನ ಬರಪರಿಸ್ಥಿತಿಯ ವೀಕ್ಷಣೆಗೆ ರೈತ ಸಾಂತ್ವನ ಯಾತ್ರೆ ಕೈಗೊಳ್ಳುವುದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದು ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಮಾಡಬೇಕಾದ ಕೆಲಸ. ಈ ಯಾತ್ರೆಯ ನಂತರ ಅವರು ಕೊಡುವ ವರದಿಯನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ ಎಂದು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ತಿಳಿಸಿದ್ದಾರೆ.

ರೈತ ಸಾಂತ್ವನ ಯಾತ್ರೆಯ ನಂತರ ತಮ್ಮ ಅನುಭವವನ್ನು ರಾಜ್ಯ ಸರ್ಕಾರದ ಜೊತೆಯಲ್ಲಿ ಮಾತ್ರವಲ್ಲ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ಜೊತೆಯಲ್ಲಿಯೂ ಹಂಚಿಕೊಂಡರೆ ರಾಜ್ಯಕ್ಕೆ ಅನುಕೂಲವಾಗಬಹುದು. ಒಂದು ಪ್ರಾದೇಶಿಕ ಪಕ್ಷದ ಮುಖ್ಯಸ್ಥರಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಅವರಿಗೆ ಬರಪರಿಹಾರದ ವಿಷಯದಲ್ಲಿ ನಿರಂತರವಾಗಿ ಕರ್ನಾಟಕ ರಾಜ್ಯಕ್ಕೆ ಕೆಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿವರ ಖಂಡಿತ ತಿಳಿದಿದೆ ಎಂದು ಭಾವಿಸುವೆ ಎಂದಿದ್ದಾರೆ.

ಹಿಂಗಾರು ಚೇತರಿಕೆ : ರಾಜ್ಯದಲ್ಲಿ 10 ದಿನ ಮಳೆ ಸಾಧ್ಯತೆ

ಹೊಸ ಬೆಳವಣಿಗೆಯಲ್ಲಿ ಕುಮಾರಸ್ವಾಮಿಯವರು ಅವರು ಈಗ ಕೇಂದ್ರದಲ್ಲಿ ಅಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಜೊತೆ ತಮ್ಮ ಪಕ್ಷದ ಮೈತ್ರಿಗೆ ಮುಂದಾಗಿದ್ದಾರೆ. ರಾಜ್ಯದ ಬಿಜೆಪಿ ನಾಯಕರನ್ನು ದೂರ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಕುಟುಂಬದ ಸದಸ್ಯರ ಜೊತೆ ಆತ್ಮೀಯವಾಗಿ ಸಂಬಂಧ ಇಟ್ಟುಕೊಂಡಿದ್ದಾರೆ. ಈ ಸೌಹಾರ್ದ ಸಂಬಂಧವನ್ನು ಬಳಸಿಕೊಂಡು ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಟ್ಟರೆ ಕನ್ನಡಿಗರು ಋಣಿಯಾಗಿರುತ್ತಾರೆ ಎಂದಿದ್ದಾರೆ.

ಬರಪರಿಹಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲು ನಮ್ಮ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯಲು ಸಿದ್ಧ ಇದೆ. ತಮ್ಮದೇ ಪಕ್ಷಕ್ಕೆ ಸೇರಿರುವ ಪ್ರಧಾನಮಂತ್ರಿಯವರನ್ನು ಭೇಟಿ ಮಾಡುವ ಧೈರ್ಯ ರಾಜ್ಯದ ಬಿಜೆಪಿ ನಾಯಕರಲ್ಲಿ ಇಲ್ಲ, ಕೇಂದ್ರದ ಬಿಜೆಪಿ ನಾಯಕರು ಕೂಡಾ ರಾಜ್ಯದ ಬಿಜೆಪಿ ನಾಯಕರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಈ ವಿಷಯದಲ್ಲಿ ಸನ್ಮಾನ್ಯ ಹೆಚ್.ಡಿ.ದೇವೇಗೌಡರು ಮತ್ತು ಅವರ ಪಕ್ಷ ಹೆಚ್ಚಿನ ಮುತುವರ್ಜಿ ವಹಿಸಿದರೆ ಇದು ಸಾಧ್ಯವಾಗಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

RELATED ARTICLES

Latest News