ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ
ಒಟ್ಟು ವಿಧಾನಸಭಾ ಕ್ಷೇತ್ರಗಳು : 70
ಬಿಜೆಪಿ : 48
ಎಎಪಿ : 22
ಕಾಂಗ್ರೆಸ್ : 00
ಇತರೆ : 00
ನವದೆಹಲಿ,ಫೆ.8- ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಗುಡಿಸಿ ಗುಂಡಾಂತರ ಮಾಡಿದ್ದ ಎಎಪಿಗೆ ಈ ಬಾರಿ ದೆಹಲಿ ಜನ ಮರ್ಮಾಘಾತ ನೀಡುವ ಮೂಲಕ ಮೂರನೇ ಬಾರಿ ಅಧಿಕಾರ ಹಿಡಿಯುವ ಕನಸು ನುಚ್ಚು ನೂರಾಗಿದೆ.ದೆಹಲಿ ವಿಧಾನಸಭೆಯ ಒಟ್ಟು 70 ಕ್ಷೇತ್ರಗಳ ಪೈಕಿ ಬಿಜೆಪಿ 48 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 27 ವರ್ಷಗಳ ನಂತರ ಸ್ವಂತ ಬಲದ ಮೇಲೆ ಅಧಿಕಾರ ಗದ್ದುಗೆ ಹಿಡಿಯುವತ್ತ ದಾಪುಗಾಲು ಇಟ್ಟಿದೆ.
ಅತಿಯಾದ ಭ್ರಷ್ಟಾಚಾರ, ಸಾಲು ಸಾಲು ನಾಯಕರ ಜೈಲುಪಾಲು, ಈಡೇರದ ಭರವಸೆಗಳಿಂದಾಗಿ ಭ್ರಮನಿರಸನಗೊಂಡಿದ್ದ ದೆಹಲಿ ಜನತೆ ಆಡಳಿತಾರೂಢ ಎಎಪಿಗೆ ಕೇವಲ 22 ಸ್ಥಾನಗಳನ್ನು ನೀಡಿದ್ದರೆ, ಈ ಬಾರಿಯೂ ಕಳೆದ ಎರಡು ಚುನಾವಣೆಗಳಂತೆ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ.ಅಚ್ಚರಿ ಎಂಬಂತೆ ದೆಹಲಿ ಮುಖ್ಯಮಂತ್ರಿ ಆತಿಶಿ ಸಿಂಗ್ ಮರ್ಲೇನಾ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ, ಸೌರವ್ ಭಾರದ್ವಾಜ್, ಗೋಪಾಲ್‌ರಾಜ್ ಸೇರಿದಂತೆ ಅನೇಕರು ತೀವ್ರ ಹಿನ್ನಡೆ ಅನುಭವಿಸಿದ್ದಾರೆ.
ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಾರಂಭದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದರೂ ನಂತರದ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.ಕಲ್ಕರಾಜ್ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್ ಬಂಡೂರಿಯು ತೀವ್ರ ಪೈಪೋಟಿ ನೀಡಿದ್ದು, ಕಾಂಗ್ರೆಸ್‌ನ ಅಲ್ಕಾಲಂಬ ಹಿನ್ನಡೆ ಅನುಭವಿಸಿದ್ದಾರೆ. ಎಎಪಿಯ ಮತ್ತೋರ್ವ ಪ್ರಮುಖ ಅಭ್ಯರ್ಥಿಯಾದ ಸೋಮನಾಥ್ ಭಾರತಿ ಅವರು ಮಾಳವಿಯ ನಗರದಲ್ಲಿ ಹಿನ್ನಡೆ ಅನುಭವಿಸಿದ್ದರೆ, ಕರವಾಲ್ ನಗರದಲ್ಲಿ ಕಪಿಲ್ ಮಿಶ್ರ ಗೆಲುವಿನತ್ತ ದಾಪುಗಾಲಿಟ್ಟಿದ್ದರು. ಫಲಿತಾಂಶವು ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿದ್ದು, ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಹಿಡಿಯುವುದು ಖಚಿತವಾಗಿದೆ.
ಚುನಾವಣೆಗೂ ಮುನ್ನವೇ ದೆಹಲಿ ಜನತೆಗೆ ಉಚಿತ ಕೊಡುಗೆಗಳನ್ನು ಘೋಷಣೆ ಮಾಡಿದ್ದ ಎಎಪಿಗೆ ಮತದಾರ ಸೊಪ್ಪು ಹಾಕಿಲ್ಲ. ಆ ಪಕ್ಷದ ಮೇಲೆ ಕೇಳಿಬಂದಿದ್ದ ಭ್ರಷ್ಟಾಚಾರದ ಆರೋಪಗಳೇ ಮುಳುವಾಗಿರುವುದು ಫಲಿತಾಂಶದಿಂದ ಗೋಚರವಾಗಿದೆ. ಪ್ರಾರಂಭದಿಂದಲೇ ಮುನ್ನಡೆ ಸಾಧಿಸಿದ ಬಿಜೆಪಿ ಕೊನೆಯ ಕ್ಷಣದವರೆಗೂ ಅದೇ ಮುನ್ನಡೆಯನ್ನು ಕಾಯ್ದುಕೊಂಡಿತು.
ಲೋಕಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಈ ಬಾರಿ ದೆಹಲಿಯಲ್ಲಿ ಅಧಿಕಾರ ಹಿಡಿಯಲೇಬೇಕೆಂದು ಕಳೆದ ಒಂದು ವರ್ಷದಿಂದ ಹೆಣೆದ ತಂತ್ರ ಕೈಹಿಡಿದಿದೆ. ಸುಮಾರು 50 ಸಾವಿರಕ್ಕೂ ಹೆಚ್ಚು ಆರ್‌ಎಸ್‌ಎಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ನಡೆಸಿದ ವ್ಯವಸ್ಥಿತ ಪ್ರಚಾರ, ಆಮ್ ಆದಿಯಂತೆ ದೆಹಲಿ ಜನತೆಗೆ ಬಿಜೆಪಿ ಘೋಷಣೆ ಮಾಡಿದ ಭರವಸೆಗಳು, ಪ್ರಧಾನಿ ನರೇಂದ್ರಮೋದಿ, ಗೃಹಸಚಿವ ಅಮಿತ್ ಷಾ ಅವರ ವ್ಯವಸ್ಥಿತ ಪ್ರಚಾರವು ಬಿಜೆಪಿ ಕೈ ಹಿಡಿದಿದೆ.
ದೆಹಲಿಯ ಉತ್ತರದೆಹಲಿ, ಈಶಾನ್ಯ ದೆಹಲಿ, ವಾಯುವ್ಯ ದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ, ಆಗ್ನೇಯ ದೆಹಲಿ, ನೈರುತ್ಯ ದೆಹಲಿ, ಹೊಸ ದೆಹಲಿ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.ವಿಶೇಷವಾಗಿ ಬಿಹಾರಿ, ಪೂರ್ವಾಂಚಲ, ಪಂಜಾಬಿ ಸೇರಿದಂತೆ ಬಹುತೇಕ ಎಲ್ಲಾ ವಲಸಿಗರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ಕೇಂದ್ರದ ಮಾಜಿ ಸಚಿವೆ ಸುಷಾ ಸ್ವರಾಜ್ 1998ರಲ್ಲಿ ಅಧಿಕಾರ ನಡೆಸಿದ್ದರು. 27 ವರ್ಷಗಳ ನಂತರ ಬಿಜೆಪಿ ಯಾವುದೇ ಪಕ್ಷದ ಬೆಂಬಲವಿಲ್ಲದೆ ಅಧಿಕಾರ ಹಿಡಿಯುವತ್ತ ಹೆಜ್ಜೆ ಇಟ್ಟಿದೆ.
.