ಬೆಂಗಳೂರು,ಫೆ.8- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಐದು ತಿಂಗಳ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಅಭಿಮಾನಿಗಳನ್ನುದ್ದೇಶಿಸಿ ಮಾತನ್ನಾಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಸ್ಪೈನಲ್‌ಕಾರ್ಡ್ ಸಮಸ್ಯೆಯಿಂದ ಬಳಲುತ್ತಿರುವ ನಟ ದರ್ಶನ್ ಹುಟ್ಟುಹಬ್ಬದ ನಿಮಿತ್ತ ಅಭಿಮಾನಿಗಳನ್ನುದ್ದೇಶಿಸಿ ಮಾತನ್ನಾಡಿದ್ದಾರೆ. ಎಲ್ಲಾ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ ಹೇಳಲೇ, ಕೃತಜ್ಞತೆ ಹೇಳಲೇ, ಯಾವುದೇ ಪದ ಬಳಸಿದರೂ ನೀವು ತೋರಿಸಿದಷ್ಟು ಪ್ರೀತಿ, ಅಭಿಮಾನವನ್ನು ಮರುಪಾವತಿಸಲು ಸಾಧ್ಯವಿಲ್ಲ. ನನ್ನ ಹುಟ್ಟುಹಬ್ಬವಿದೆ.
ಪ್ರತಿಯೊಬ್ಬರನ್ನೂ ಭೇಟಿ ಮಾಡಿ ಧನ್ಯವಾದ ಹೇಳಬೇಕು ಎಂಬ ಆಸೆಯಿತ್ತು. ಪ್ರತಿ ಸಾರಿ ಪ್ರತಿಯೊಬ್ಬರಿಗೂ ಕೈ ಕುಲಕಿ ಥ್ಯಾಂಕ್‌್ಸ ಹೇಳುತ್ತಿದ್ದೆ. ಈ ಬಾರಿ ಸಮಸ್ಯೆಯಿದೆ. ಕಾರಣ ಆರೋಗ್ಯ ಹೆದಗೆಟ್ಟಿದೆ. ತುಂಬಾ ಹೊತ್ತು ನಿಲ್ಲಲಾಗುವುದಿಲ್ಲ. ಇಂಜೆಕ್ಷನ್ ತೆಗೆದುಕೊಳ್ಳುವುದರಿಂದ 15-20 ದಿನ ಪರವಾಗಿಲ್ಲ. ಔಷಧಿಯ ಪ್ರಭಾವ ಕಡಿಮೆಯಾಗುತ್ತಿದ್ದಂತೆ ನೋವು ಶುರುವಾಗುತ್ತದೆ. ಆಪರೇಷನ್ ಅನಿವಾರ್ಯ ಎಂದಿದ್ದಾರೆ.
ಈಗ ಇರುವ ಕೆಲಸಗಳನ್ನು ಪೂರ್ಣಗೊಳಿಸಬೇಕು. ನಿರ್ಮಾಪಕರು ನನ್ನನ್ನು ನಂಬಿ ಕೆಲಸ ಕೊಟ್ಟಿದ್ದಾರೆ. ಅವರಿಗೆ ಅನ್ಯಾಯವಾಗಬಾರದು. ಎಲ್ಲಿಯವರೆಗೆ ಸಾಧ್ಯವಾಗುವುದೋ ಅಲ್ಲಿಯವರೆಗೂ ಕಾಲ ದೂಡುತ್ತೇನೆ. ಅನಂತರ ಆಪರೇಷನ್ ಅನಿವಾರ್ಯ ಎಂದು ಹೇಳಿದ್ದಾರೆ.
ಹುಟ್ಟುಹಬ್ಬದ ಕಾರಣಕ್ಕೆ ದೂರದ ಊರಿನಿಂದ ಅಭಿಮಾನಿಗಳು ಬರುತ್ತಾರೆ.
ನಾನು ಮನೆಯ ಮೇಲೆ ನಿಂತು ಕೈಬೀಸಿ ಕಳುಹಿಸುವುದು ಸರಿ ಹೋಗುವುದಿಲ್ಲ. ಅಭಿಮಾನಿಗಳನ್ನು ಶೀಘ್ರವಾಗಿ ಭೇಟಿಯಾಗಬೇಕು. ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಧನ್ಯವಾದ ಹೇಳಬೇಕು. ಈಗ ಸಿಗಲು ಸಾಧ್ಯವಾಗುವುದಿಲ್ಲ. ಕಾಲುಗಳು ಜೋಂಪು ಹಿಡಿಯುತ್ತಿವೆ. ವೈದ್ಯರ ಬಳಿ ಸಲಹೆ ಕೇಳಿ ಅದಕ್ಕೆ ಏನು ಮಾಡಬಹುದು ಎಂದು ತಿಳಿದುಕೊಂಡು ನಂತರ ಅಭಿಮಾನಿಗಳನ್ನು ಭೇಟಿಯಾಗಲಿದ್ದೇನೆ ಎಂದಿದ್ದಾರೆ.
ಯಾವುದೇ ಊಹಾಪೋಹಗಳಿಗೂ ಅಭಿಮಾನಿಗಳು ಕಿವಿಗೊಡಬೇಡಿ. ನಿರ್ಮಾಪಕರಿಗೆ ಹಣ ವಾಪಸ್ ಕೊಟ್ಟಿದ್ದಾರೆ. ಇನ್ನು ಚಿತ್ರಗಳಲ್ಲಿ ನಟಿಸುವುದಿಲ್ಲ ಎಂಬುದಾಗಿ ವದಂತಿ ಹಬ್ಬಿದೆ. ಅದನ್ನು ನಂಬಬೇಡಿ. ಸೂರಪ್ಪ ಬಾಬು ಅವರು ನನಗೆ ಮುಂಗಡ ಹಣ ನೀಡಿದ ವೇಳೆಯಲ್ಲಿ ಸಾಕಷ್ಟು ಬಾಧ್ಯತೆಗಳಿಗೆ ಸಿಲುಕಿದ್ದರು.
ಅವರ ಹಣ ನನ್ನ ಬಳಿ ಉಳಿದುಕೊಂಡರೆ ಅವರ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತವೆ ಎಂಬ ಕಾರಣಕ್ಕೆ ಮುಂಗಡವನ್ನು ವಾಪಸ್ ನೀಡಿದ್ದೇನೆ. ಅವರೆಲ್ಲಾ ಸಮಸ್ಯೆಗಳನ್ನು ತೀರಿಸಿಕೊಳ್ಳಲಿ. ಅಡ್ವಾನ್ಸ್ ಕೊಟ್ಟ ತಕ್ಷಣ ಹಣ ಹೊಂದಿಸುವುದಷ್ಟೇ ಕೆಲಸ ಅಲ್ಲ. ಚಿತ್ರ ಮಾಡಲು ಬೇರೆಬೇರೆ ಕೆಲಸಗಳಿರುತ್ತವೆ. ಮುಂದೆ ಒಳ್ಳೆಯ ಕಥೆ ಸಿಕ್ಕಾಗ ಅವರೊಡನೆ ಸಿನಿಮಾ ಮಾಡುತ್ತೇನೆ. ಇದರ ಹೊರತಾಗಿ ಬೇರಾವ ಕಾರಣಗಳೂ ಇಲ್ಲ ಎಂದರು.
ನನ್ನ ಪ್ರಾಣಸ್ನೇಹಿತೆ ರಕ್ಷಿತ. ಅವರ ಬ್ಯಾನರ್‌ನಲ್ಲಿ ಒಂದು ಚಿತ್ರ ಮಾಡಿಯೇ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಜನ ಕೊಟ್ಟಿರುವ ಪ್ರೀತಿಯನ್ನು ತೀರಿಸಲು ಸಾಧ್ಯವಿಲ್ಲ. ಈಗ ಪರಿಸ್ಥಿತಿ ಜಾಸ್ತಿ ತಿರುಗಿ ಹೋಗಿದೆ. ನಾನು ಮತ್ತೆ ನೇರವಾಗಿ ನಿಲ್ಲಲು ನಿಮ ಬೆಂಬಲ ಅಮೂಲ್ಯವಾಗಿದೆ. ಇದಕ್ಕಾಗಿ ನನ್ನನ್ನು ನಂಬಿರುವ ಎಲ್ಲಾ ಅಭಿಮಾನಿಗಳಿಗೆ ಚಿರ ಋಣಿ ಎಂದರು.
ಈ ಸಂದರ್ಭದಲ್ಲಿ ನಾಯಕನಟ ಧನ್ವೀರ್, ಬುಲ್‌ಬುಲ್ ರಚಿತಾರಾಂ, ಪ್ರಾಣ ಸ್ನೇಹಿತೆ ರಕ್ಷಿತಾ ಅವರಿಗೆ ಅನಂತ ಧನ್ಯವಾದಗಳು. ಧನ್ಯವಾದ ಎಂಬುದು ತುಂಬಾ ಚಿಕ್ಕದಾಗುತ್ತದೆ ಎಂದು ಹೇಳಿದರು.
ದರ್ಶನ್ ಬೇರೆ ಭಾಷೆಗೆ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ. ಅದು ಸುಳ್ಳು. ಇಲ್ಲೇ ಇಷ್ಟೊಂದು ಅಭಿಮಾನ, ಪ್ರೀತಿ ತೋರಿಸಿದ್ದೀರ, ಸುಮನೆ ಎಲ್ಲಿಗೆ ಹೋಗಲಿ, ಸಾಯುವವರೆಗೂ ನಾನು ಇಲ್ಲೇ. ಕಾವೇರಿ ಹುಟ್ಟಿದ ಕೊಡಗಿನಲ್ಲೇ ನಾನು ಹುಟ್ಟಿದ್ದು. ಕಾವೇರಿ ಎಲ್ಲೆಲ್ಲೋ ಹರಿದು ಮೇಕೆದಾಟು ಬಿಟ್ಟು ಮುಂದೆ ಹರಿಯುತ್ತಾಳೆ. ಆದರೆ ನನ್ನ ಸೀಮಿತ ಇರುವುದು ಮೇಕೆದಾಟುವಿನವರೆಗೆ ಮಾತ್ರ. ನನ್ನ ಚಿತ್ರಗಳು ಡಬ್ಬಾಗಿ ಬೇರೆಲ್ಲೇ ಹೋದರೂ ಅದು ಬೇರೆ ವಿಚಾರ. ಆದರೆ ನಾನು ಚಲನಚಿತ್ರಗಳಲ್ಲಿ ಮಾತ್ರ ನಟಿಸುತ್ತೇನೆ ಎಂದಿದ್ದಾರೆ.
ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು, ಕೆಲವು ಪ್ರೊಡೆಕ್ಷನ್ ಹೌಸ್‌ಗಳು ಒಳ್ಳೆಯ ಹಾಡುಗಳನ್ನು ಮಾಡಿದ್ದಾರೆ. ಇದಕ್ಕಾಗಿ ಋಣಿ. ಹುಟ್ಟುಹಬ್ಬಕ್ಕೆ ನಾನು ಸಿಗಲಿಲ್ಲ ಎಂಬ ಕಾರಣಕ್ಕೆ ಇದೊಂದು ಬಾರಿ ನನ್ನನ್ನು ಕ್ಷಮಿಸಿ ಎಂದು ಆರೂವರೆ ನಿಮಿಷದ ವಿಡಿಯೋದಲ್ಲಿ ದರ್ಶನ್ ಕೇಳಿಕೊಂಡಿದ್ದಾರೆ.