ಬೆಂಗಳೂರು,ಜ.27- ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಪೌರಾಯುಕ್ತೆ ಅಮೃತಗೌಡಗೆ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ನಿಂದಿಸಿದ ಪ್ರಕರಣ ವಿಧಾನಪರಿಷತ್‌ನಲ್ಲಿ ಪ್ರತಿಧ್ವನಿಸಿತು. ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯೆ ಭಾರತಿ ಶೆಟ್ಟಿ ಅವರು ವಿಷಯ ಪ್ರಸ್ತಾಪಿಸಿ ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂದರೆ ಅವರು ಯಾವ ರೀತಿ ಕರ್ತವ್ಯ ನಿರ್ವಹಿಸುತ್ತಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವವರ ಮೇಲೆ ಸೂಕ್ತ ಕ್ರಮ ಏಕೆ ಇಲ್ಲ ಎಂದು ಪ್ರಶ್ನಿಸಿದರು.
ಪ್ರಕರಣ ನಡೆದು ಹಲವು ದಿನಗಳ ನಂತರವೂ ಸರ್ಕಾರವಾಗಲೀ, ಸಂಬಂಧಪಟ್ಟ ಇಲಾಖೆಯವರು ದೂರನ್ನೇ ದಾಖಲಿಸಲಿಲ್ಲ. ಫೋನ್ ಮೂಲಕ ಅಧಿಕಾರಿಗೆ ಬೆಂಕಿ ಹಚ್ಚುತ್ತೇನೆ. ಕರ್ತವ್ಯ ನಿರ್ವಹಿಸಲು ಬಿಡುವುದಿಲ್ಲ.
ನನ್ನ ಬಗ್ಗೆ ನಿನಗೆ ತಿಳಿದಿಲ್ಲ ಎಂದು ಧಮ್ಕಿ ಹಾಕುತ್ತಾರೆ. ಹಾಗಾದರೆ ಮಹಿಳೆ ನಿರ್ಭೀತವಾಗಿ ಕೆಲಸ ಮಾಡಲು ಸಾಧ್ಯವಿಲ್ಲವೇ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಹೈಕೋರ್ಟ್ ಮಧ್ಯಪ್ರವೇಶಿಸಿ ಪೊಲೀಸರಿಗೆ ಈ ಪ್ರಕರಣದಲ್ಲಿ ಮಹಿಳೆಗೆ ನಿಂದನೆ ಮಾಡಿದವರ ಮೇಲೆ ಸೆಕ್ಷನ್ 79 ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದೆ. ಅಲ್ಲದೆ ಅವರ ಮೇಲೆ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಆದೇಶ ನೀಡಿತ್ತು.
ಕೊನೆಗೆ ಸೆಷೆನ್‌್ಸ ನ್ಯಾಯಾಲಯವು ಜಾಮೀನು ಮಂಜೂರು ಮಾಡಲು ನಿರಾಕರಿಸಿತು. ಇದರಲ್ಲಿ ಸರ್ಕಾರದ ಪಕ್ಷಪಾತ ಧೋರಣೆ ಕಾಣುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನಾನು ಯಾವುದೇ ಪಕ್ಷದವರ ವಿರುದ್ಧ ಆರೋಪ ಮಾಡುತ್ತಿಲ್ಲ. ಇಲ್ಲಿ ಮಹಿಳೆಗೆ ಭಯಭೀತಿ ಇಲ್ಲದೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದರೆ ಅವರಿಗೆ ರಕ್ಷಣೆ ಕೊಡುವವರು ಯಾರು?, ಸರ್ಕಾರಕ್ಕೆ ಇದರ ಬಗ್ಗೆ ಅರಿವು ಇಲ್ಲವೇ ಎಂದು ಭಾರತಿ ಶೆಟ್ಟಿ ಪ್ರಶ್ನಿಸಿದರು.
ಈ ಹಂತದಲ್ಲಿ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಅವರು, ಇದಕ್ಕೂ ಮುನ್ನ ರಾಜ್ಯದ ವಿವಿಧೆಡೆ ಮಹಿಳೆಯರ ಮೇಲೆ ನಡೆದಿರುವ ಪ್ರಕರಣಗಳ ಬಗ್ಗೆಯೂ ಮಾತನಾಡಿ ಎಂದಾಗ ಗದ್ದಲ ಉಂಟಾಯಿತು.
ಈ ವೇಳೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಾತನಾಡಿ, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಚಿಕ್ಕಬಳ್ಳಾಪುರ ಎಸ್ಪಿಯವರು ಆರೋಪಿಯನ್ನು ಬಂಧಿಸಲು 3 ತಂಡಗಳನ್ನು ರಚಿಸಿದ್ದರು. ಈಗಾಗಲೇ ಬಂಧಿಸಿ ಕರೆ ತಂದಿದ್ದಾರೆ. ಅವರ ವಿರುದ್ಧ ಕಠಿಣವಾದ ಕ್ರಮವನ್ನು ಜರುಗಿಸುತ್ತೇವೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಪ್ರಕರಣವು ನ್ಯಾಯಾಲಯಲ್ಲಿ ಇರುವುದರಿಂದ ಇದರ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂದು ಸಚಿವರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಮಾಡಿದರು. ಹೀಗಾಗಿ ಚರ್ಚೆಗೆ ಅವಕಾಶ ಕೊಡಲಿಲ್ಲ.
