ಬೆಂಗಳೂರು,ಫೆ.8- ಕನ್ನಡದ ಹಾಸ್ಯನಟ ದಿವಂಗತ ದಿನೇಶ್ ಅವರ ಪುತ್ರ ಗಿರಿ ದಿನೇಶ್(45) ಅವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.ಆರೋಗ್ಯವಾಗಿಯೇ ಇದ್ದ ಇವರಿಗೆ ನಿನ್ನೆ ಸಂಜೆ ಪೂಜೆ ಮಾಡುವ ಸಮಯದಲ್ಲಿ ಹಠಾತ್ ಹೃದಯಾಘಾತವಾಗಿದೆ.
ಕುಸಿದು ಬಿದಿದ್ದು, ಕೂಡಲೇ ಆಸ್ಪತ್ರೆಗೆ ಕೊಂಡಯ್ಯಲಾಯಿತಾದರೂ ಆಸ್ಪತ್ರೆಗೆ ಹೋಗುವ ಮುನ್ನವೇ ಕೊನೆಯುಸಿರೆಳದಿದ್ದಾರೆ. ಗಿರಿ ದಿನೇಶ್ ದಿವಂಗತ ಹಾಸ್ಯನಟ ದಿನೇಶ್ ಅವರ ಪುತ್ರರಾಗಿದ್ದು, ನವಗ್ರಹ ಸಿನಿಮಾದಲ್ಲಿ ಗಿರಿ ದಿನೇಶ್ ಅವರು ಶೆಟ್ಟಿ ಪಾತ್ರಕ್ಕೆ ಜೀವ ತುಂಬಿದ್ದರು. ಈ ಚಿತ್ರದಲ್ಲಿ ಅವರ ಹಾಸ್ಯಭರಿತ ಅಭಿನಯವನ್ನು ಎಲ್ಲರೂ ಒಪ್ಪಿಕೊಂಡಿದ್ದರು.
ನವಗ್ರಹ ಸಿನಿಮಾ ಆದಮೇಲೆ ವಜ್ರ ಹಾಗೂ ಚಮ್ಕಾಯ್ಸಿ ಚಿಂದಿ ವುಡಾಯಿಸಿ, ಚಿತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಅದಾದ ಮೇಲೆ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಅಂದಿನಿಂದ ಕ್ಯಾಮರಾದಿಂದ ದೂರ ಉಳಿದಿದ್ದರು. ಚಿತ್ರರಂಗದಲ್ಲಿ ಹೆಚ್ಚು ಕಾಣಿಸಿಕೊಳ್ಳದ ಗಿರಿ ದಿನೇಶ್ ಚಿರನಿದ್ರೆಗೆ ಜಾರಿದ್ದು, ಕನ್ನಡ ಚಿತ್ರರಂಗದ ಕಲಾವಿದರು, ನಟನಟಿಯರು ಸಂತಾಪ ಸೂಚಿಸಿದ್ದಾರೆ.