ಬೆಂಗಳೂರು, ಜ.27- ನರೇಂದ್ರ ಮೋದಿ ಅವರು ಪ್ರಧಾನಿಯಾದಾಗಿನಿಂದಲೂ, ಒಂದಲ್ಲ ಒಂದು ಜನ ವಿರೋಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಭಾವನಾತಕ ರಾಜಕಾರಣದ ಮೂಲಕ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಜನ ಪರವಾದ ಯಾವ ಯೋಜನೆಗಳನ್ನು ರೂಪಿಸಿಲ್ಲ ಎಂದು ಕಷಿ ಸಚಿವ ಚಲುವ ರಾಯಸ್ವಾಮಿ ಆರೋಪಿಸಿದರು.
ಮನ್ರೇಗಾ ಯೋಜನೆ ರದ್ದುಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ರಾಜಭವನ ಚಲೋದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತ್‌ನಿಂದಲೂ ಒಂದು ಕೋಟಿ ರೂಪಾಯಿಗಳವರೆಗೂ ಖರ್ಚು ಮಾಡಲು ಅವಕಾಶ ಇತ್ತು. ಈಗ ರಾಜ್ಯದ ಪಾಲನ್ನು ಶೇ.40ರಷ್ಟು ವೆಚ್ಚ ಭರಿಸಬೇಕು ಎಂದು ನಿಯಮ ರೂಪಿಸಲಾಗಿದೆ. ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಮೊದಲಿದ್ದ ಮನ್ರೇಗಾ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಬಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಕೇಂದ್ರ ಸರ್ಕಾರ ಮನ್ರೇಗಾ ಬದಲಾವಣೆ ಮೂಲಕ ಗ್ರಾಮೀಣ ಜನರಿಗೆ ದೊಡ್ಡ ಪ್ರಮಾಣದ ಅನ್ಯಾಯ ಮಾಡಿದೆ. ಸ್ವಾತಂತ್ರ್ಯ ಭಾರತದಲ್ಲಿ ಜನರಿಗೆ ಸಂವಿಧಾನ ಬದ್ಧವಾದ ಉದ್ಯೋಗದ ಹಕ್ಕನ್ನು ನೀಡಲಾಗಿತ್ತು.
ಮಹಾತ ಗಾಂಧಿ ಅವರ ಕನಸಿನಂತೆ ಗ್ರಾಮೀಣಾಭಿವೃದ್ಧಿಗೆ ಉದ್ಯೋಗ ಖಾತ್ರಿ ಪೂರಕವಾಗಿತ್ತು. ಸ್ಥಳೀಯವಾಗಿ ಕಾಮಗಾರಿಗಳನ್ನು ನಿರ್ಧರಿಸಲಾಗುತ್ತಿತ್ತು. ಸ್ಥಳೀಯವಾಗಿ ಉದ್ಯೋಗ ದೊರೆಯುವುದನ್ನು ತಪ್ಪಿಸಲು ಪ್ರಯತ್ನಿಸಲಾಗಿದೆ . ವಿಬಿ-ಜಿ ರಾಮ್‌ಜಿ ಯೋಜನೆಯನ್ನು ಹಿಂಪಡೆದು, ಮೊದಲಿನಂತೆ ಮನ್ರೇಗಾ ಯೋಜನೆಯನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ವಿಬಿ-ಜಿ ರಾಮ್ ಜಿ ಯೋಜನೆಯಲ್ಲಿ ಎಲ್ಲಾ ಗ್ರಾಮ ಪಂಚಾಯತ್‌ಗಳು ಒಳಪಡುವುದಿಲ್ಲ. ಆಯಾ ಗ್ರಾಮಗಳಿಗೆ ಬೇಕಾದ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗುವುದಿಲ್ಲ. ಶೇ.40ರಷ್ಟು ರಾಜ್ಯದ ಪಾಲು ನೀಡಿದರೂ ಅದು ಪ್ರಯೋಜನವಾಗುವುದಿಲ್ಲ. ಕನಿಷ್ಠ ಕೂಲಿ ನಿರ್ಧರಿಸುವ ಹಕ್ಕನ್ನು ರಾಜ್ಯ ಸರ್ಕಾರಗಳಿಂದ ಮೊಟಕುಗೊಳಿಸಲಾಗಿದೆ ಎಂದು ಆರೋಪಿಸಿದರು.
ಮಹಾತಗಾಂಧಿಯವರ ವಿಚಾರ ಧಾರೆಗಳಿಗೆ ಬಿಜೆಪಿಯವರು ಕೈ ಹಾಕಿದ್ದಾರೆ. ಕಾಂಗ್ರೆಸ್‌ನವರು ಎಚ್ಚೆತ್ತುಕೊಳ್ಳದ್ದಿರೆ, ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಎಚ್ಚರಿಸಿದರು.ಬಿಜೆಪಿ ಜನ ವಿರೋಧಿ ನಿಲುವನ್ನು ಅನುಸರಿಸುತ್ತಿದೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ, ಜನರಿಗೆ ವಿಬಿ-ಜಿ ರಾಮ್ ಜಿ ಮಾರಕವಾಗಿದೆ. ಬೂತ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜನ ಜಾಗತಿ ಮೂಡಿಸಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲಿಂ ಅಹಮದ್ ಮಾತನಾಡಿ, ಕೇಂದ್ರ ಸರ್ಕಾರ ರೂಪಿಸಿರುವ ಬದಲಾವಣೆಯನ್ನು ಖಂಡಿಸುತ್ತೇವೆ. ಈ ಮೂಲಕ ಕೇಂದ್ರ ಸರ್ಕಾರ ದೊಡ್ಡ ಷಡ್ಯಂತ್ರ ನಡೆಸಿದೆ. ಜವಹಾರ್ ಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಹೆಸರಿನ ಯೋಜನೆಗಳನ್ನು ಬದಲಾವಣೆ ಮಾಡಲಾಗಿದೆ. ಈಗ ಮಹಾತಗಾಂಧಿ ಹೆಸರನ್ನು ಬದಲಾವಣೆ ಮಾಡಲಾಗುತ್ತಿದೆ.
ಜನ ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ. ಮನ್ರೇಗಾ ಮೂಲಕ ಜನರಿಗೆ ಸಿಗುತ್ತಿದ್ದ ಅನುಕೂಲಗಳನ್ನು ತಪ್ಪಿಸಲು ಬಿಜೆಪಿ ಯತ್ನಿಸುತ್ತಿದೆ. 12 ವರ್ಷದ ಬಳಿಕ ಯೋಜನೆ ಬದಲಾಯಿಸಲು ಕೇಂದ್ರಕ್ಕೆ ಜ್ಞಾನೋದಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಜನರನ್ನು ಮುರ್ಖರನ್ನಾಗಿಸಿದ್ದಾರೆ. ಆಸ್ಕರ್ ಪಡೆಯಲು ಅರ್ಹರಾದಷ್ಟು ಸುಳ್ಳುಗಳನ್ನೂ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
