ಅಲಾಸ್ಕ ಅಮೆರಿಕ,ಫೆ.8- ಪಶ್ಚಿಮ ಅಲಾಸ್ಕದಲ್ಲಿ ಸಣ್ಣ ವಿಮಾನ ಪತನಗೊಂಡು 10 ಜನ ಸಾವನ್ನಪ್ಪಿದ್ದಾರೆ ಎಂದು ಅಮೆರಿಕಾದ ಕೋಸ್ಟ್‌ಗಾರ್ಡ್ ಹೇಳಿದೆ.ಅಲಾಸ್ಕದ ಪಶ್ಚಿಮ ಕರಾವಳಿಯಲ್ಲಿ ನಿಯಂತ್ರಣ ಕಳೆದುಕೊಂಡು ನಾಪತ್ತೆಯಾದ ವಿಮಾನ ಪತನವಾಗಿರುವ ಸ್ಥಳವನ್ನು ಅಮೆರಿಕದ ಕೋಸ್ಟ್‌ಗಾರ್ಡ್ ನಿನ್ನೆ ಪತ್ತೆ ಮಾಡಿದ್ದು, ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.
ವಿಮಾನವು ನೋಮ್‌ನಿಂದ ಆಗ್ನೇಯಕ್ಕೆ 34 ಮೈಲಿಗಳಷ್ಟು ದೂರದಲ್ಲಿ ಕಂಡುಬಂದಿದೆ ಎಂದು ಹೇಳಿದೆ. ವಿಮಾನದಲ್ಲಿ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳಪೆ ಹವಾಮಾನ ಮತ್ತು ಕಡಿಮೆ ಗೋಚರತೆಯಿಂದಾಗಿ ವಿಮಾನ ನಿಯಂತ್ರಣ ಕಳೆದುಕೊಂಡು ಪತನವಾಗಿದೆ. ಅಗ್ನಿಶಾಮಕ ಸಿಬ್ಬಂದಿ ನೋಮ್‌ನಿಂದ ಟಾಪ್‌ವಾಕ್‌ವರೆಗೆ ತೀವ್ರ ಹುಡುಕಾಟ ನಡೆಸಿತು. ಯುಎಸ್ ಕೋಸ್ಟ್‌ಗಾರ್ಡ್ ವಿಮಾನ ಸಿಬ್ಬಂದಿ ವಾಯು ಪ್ರದೇಶದಲ್ಲಿ ಶೋಧ ಕೈಗೊಂಡರು.
ಅಲಸ್ಕಾ ಸಾರ್ವಜನಿಕ ಸುರಕ್ಷತೆ ಪ್ರಕಾರ ಬೇರಿಂಗ್ ಏರ್ ನಿರ್ವಹಿಸುವ ಟರ್ಬೊಪ್ರಾಪ್ ಸೆಸ್ನಾಕಾರವಾನ್ ಗುರುವಾರ ಮಧ್ಯಾಹ್ನ ಕಾಣೆಯಾಗಿದೆ ಎಂದು ವರದಿಯಾಗಿತ್ತು.
ಸ್ಥಳೀಯ ಕಾಲಮಾನ ಪ್ರಕಾರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ವಿಮಾನದಲ್ಲಿದ್ದ ಪ್ರತಿಯೊಬ್ಬರ ಕುಟುಂಬಗಳಿಗೆ ಸೂಚನೆ ನೀಡಲಾಗಿದೆ.ಜನವರಿಯಲ್ಲಿ ಪ್ಯಾಸೆಂಜರ್ ಜೆಟ್ ಮತ್ತು ಸೇನಾ ಹೆಲಿಕಾಪ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿ 67 ಮಂದಿ ಸಾವನ್ನಪ್ಪಿದ್ದರು.