ನವದೆಹಲಿ,ಫೆ.8- ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭಾರತ ದೇಶದಲ್ಲಿದ್ದಾಗ ನೀಡಿದ ಹೇಳಿಕೆಗಳ ಕುರಿತು ಬಾಂಗ್ಲಾದೇಶ ಭಾರತ ಸರ್ಕಾರಕ್ಕೆ ತನ್ನ ಆಕ್ಷೇಪಣೆ ಸಲ್ಲಿಸಿತ್ತು.
ಇದಾದ ನಂತರ, ಭಾರತದ ವಿದೇಶಾಂಗ ಸಚಿವಾಲಯವು ಇಂದು ಭಾರತದಲ್ಲಿರುವ ಬಾಂಗ್ಲಾದೇಶದ ಹಂಗಾಮಿ ಹೈಕಮಿಷನರ್ ಅವರಿಗೆ ಸಮನ್‌್ಸ ಜಾರಿಗೊಳಿಸಿದೆ. ಶೇಖ್ ಹಸೀನಾ ಅವರ ಹೇಳಿಕೆಗಳನ್ನು ಅವರ ವೈಯಕ್ತಿಕ ವಿಚಾರ ಎಂದಿರುವ ಮೋದಿ ಸರ್ಕಾರ ಅದರಲ್ಲಿ ಭಾರತದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ. ಶೇಖ್ ಹಸೀನಾ ಅವರ ಹೇಳಿಕೆಗಳನ್ನು ಭಾರತ ಸರ್ಕಾರದ ನಿಲುವಿನ ಜೊತೆ ಲಿಂಕ್ ಮಾಡುವುದು ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಸಹಾಯ ಮಾಡುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಭಾರತವು ಬಾಂಗ್ಲಾದೇಶದೊಂದಿಗೆ ಸಕಾರಾತಕ, ರಚನಾತಕ ಮತ್ತು ಪರಸ್ಪರ ಪ್ರಯೋಜನಕಾರಿ ಸಂಬಂಧವನ್ನು ಬಯಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನು ಇತ್ತೀಚಿನ ಉನ್ನತ ಮಟ್ಟದ ಸಭೆಗಳಲ್ಲಿ ಹಲವಾರು ಬಾರಿ ಪುನರುಚ್ಚರಿಸಲಾಗಿದೆ. ಆದರೂ ಬಾಂಗ್ಲಾದೇಶದ ಅಧಿಕಾರಿಗಳು ಭಾರತವನ್ನು ನಕಾರಾತಕವಾಗಿ ಚಿತ್ರಿಸುತ್ತಲೇ ಇರುವುದು ವಿಷಾದಕರ.
ಬಾಂಗ್ಲಾದೇಶ ಆಂತರಿಕ ಆಡಳಿತ ಸಮಸ್ಯೆಗಳಿಗೆ ನಮನ್ನು ಹೊಣೆಗಾರರನ್ನಾಗಿ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.ಪರಸ್ಪರ ಪ್ರಯೋಜನಕಾರಿ ಸಂಬಂಧಕ್ಕಾಗಿ ಭಾರತ ಸರ್ಕಾರ ಪ್ರಯತ್ನಗಳನ್ನು ಮಾಡುತ್ತದೆ. ಬಾಂಗ್ಲಾದೇಶ ಕೂಡ ಆ ವಾತಾವರಣವನ್ನು ಹಾಳು ಮಾಡದೆ ಅದೇ ರೀತಿ ಪ್ರತಿಕ್ರಿಯಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಜೈಸ್ವಾಲ್ ತಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
77 ವರ್ಷದ ಶೇಖ್ ಹಸೀನಾ ಅವರು ಕಳೆದ ವರ್ಷ ಆಗಸ್ಟ್ 5ರಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ನೇತೃತ್ವದ ಬೃಹತ್ ಪ್ರತಿಭಟನೆಯು ಅವರ 16 ವರ್ಷಗಳ ಅವಾಮಿ ಲೀಗ್ ಸರ್ಕಾರವನ್ನು ಪತನಗೊಳಿಸಿತು. ಇದಾದ ನಂತರ ಅವರು ರಾಜೀನಾಮೆ ನೀಡಿ ಬಾಂಗ್ಲಾದೇಶದಿಂದ ಭಾರತಕ್ಕೆ ಪಲಾಯನ ಮಾಡಿದರು. ಅಂದಿನಿಂದ ಅವರಿಗೆ ದೆಹಲಿಯಲ್ಲಿ ಆಶ್ರಯ ನೀಡಲಾಗಿದೆ.
ಢಾಕಾದಲ್ಲಿ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಮನೆಯ ಮೇಲೆ ಇತ್ತೀಚೆಗೆ ನಡೆದ ಹಿಂಸಾಚಾರ, ದಾಳಿಗೆ ಶೇಖ್ ಹಸೀನಾ ಭಾವನಾತಕವಾಗಿ ಪ್ರತಿಕ್ರಿಯಿಸಿದ್ದರು. ಇದಾದ ನಂತರ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಯಿತು. ಈ ದಾಳಿಯನ್ನು ಖಂಡಿಸಿದ ಶೇಖ್ ಹಸೀನಾ, ಅವರು ಕಟ್ಟಡವನ್ನು ಕೆಡವಬಹುದು, ಆದರೆ ಇತಿಹಾಸವನ್ನು ಅಲ್ಲ. ಇತಿಹಾಸವು ತನ್ನ ಸೇಡು ತೀರಿಸಿಕೊಳ್ಳುತ್ತದೆ ಎಂಬುದನ್ನು ಅವರು ನೆನಪಿನಲ್ಲಿಡಬೇಕು ಎಂದು ಹೇಳಿದ್ದರು.
ಇಂದು ನಮ ತಂದೆಯ ಮನೆಯನ್ನು ಕೆಡವಲಾಗುತ್ತಿದೆ. ಆ ಮನೆ ಯಾವ ಅಪರಾಧ ಮಾಡಿದೆ? ಅವರು ಮನೆಯ ಬಗ್ಗೆ ಏಕೆ ಭಯಪಡುತ್ತಿದ್ದರು? ನಾನು ದೇಶದ ಜನರಿಂದ ನ್ಯಾಯವನ್ನು ಕೇಳುತ್ತೇನೆ. ನಾನು ನಿಮಗಾಗಿ ಏನನ್ನೂ ಮಾಡಲಿಲ್ಲವೇ? ಎಂದು ಅವರು ಪ್ರಶ್ನಿಸಿದ್ದರು.
ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಢಾಕಾದಲ್ಲಿರುವ ಭಾರತದ ಹಂಗಾಮಿ ಹೈಕಮಿಷನರ್ ಅವರನ್ನು ಕರೆಸಿ, ಭಾರತದಲ್ಲಿರುವ ಶೇಖ್ ಹಸೀನಾ ನೀಡಿದ ಹೇಳಿಕೆಗಳ ವಿರುದ್ಧ ಬಲವಾದ ಪ್ರತಿಭಟನೆಯನ್ನು ಸಲ್ಲಿಸಿತು. ಶೇಖ್ ಹಸೀನಾ ಸುಳ್ಳು, ಕಲ್ಪಿತ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದನ್ನು ತಡೆಯಲು ಬಾಂಗ್ಲಾದೇಶ ಭಾರತವನ್ನು ವಿನಂತಿಸಿತು. ಶೇಖ್ ಹಸೀನಾ ಅವರ ಇಂತಹ ಚಟುವಟಿಕೆಗಳನ್ನು ಬಾಂಗ್ಲಾದೇಶದ ವಿರುದ್ಧದ ಪ್ರತಿಕೂಲ ಕೃತ್ಯವೆಂದು ಪರಿಗಣಿಸಲಾಗಿದೆ ಎಂದು ಅದು ಹೇಳಿತ್ತು.