Saturday, February 8, 2025
Homeರಾಷ್ಟ್ರೀಯ | Nationalಭ್ರಷ್ಟಾಚಾರ ವಿರುದ್ಧ ಹೋರಾಡಿ ಅಧಿಕಾರಕ್ಕೆ ಬಂದಿದ್ದ ಎಎಪಿ ಭ್ರಷ್ಟಾಚಾರದಿಂದಲೇ ಸೋಲು

ಭ್ರಷ್ಟಾಚಾರ ವಿರುದ್ಧ ಹೋರಾಡಿ ಅಧಿಕಾರಕ್ಕೆ ಬಂದಿದ್ದ ಎಎಪಿ ಭ್ರಷ್ಟಾಚಾರದಿಂದಲೇ ಸೋಲು

AAP, which came to power by fighting Corruption, was defeated by corruption itself

ನವದೆಹಲಿ,ಫೆ.8- ಭ್ರಷ್ಟಾಚಾರದ ವಿರುದ್ಧವೇ ಸಮರ ಸಾರಿ ಕಾಂಗ್ರೆಸ್‌‍ ಮತ್ತು ಬಿಜೆಪಿಗೆ ಪರ್ಯಾಯವಾಗಿ ಬೆಳೆದು ನಿಂತು ದೇಶದ ಜನರಲ್ಲಿ ಹೊಸ ಭರವಸೆ ಮೂಡಿಸಿದ್ದ ಆಮ್‌ ಆದಿ ಪಕ್ಷವು ಈಗ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುಪಿಎ ಕಾಲದಲ್ಲಿ ಕೇಳಿಬಂದಿದ್ದ 2ಜಿ, ಕೋಲ್ಗೆಟ್‌, ದೆಹಲಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಅವ್ಯವಹಾರ ಹೀಗೆ ಹತ್ತಾರು ಹಗರಣಗಳಿಂದಾಗಿ ದೇಶದ ಜನ ಬೇಸತ್ತು ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ಎದುರು ನೋಡತ್ತಿದ್ದರು.

ಅದೇ ಕಾಲದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದ ಅಣ್ಣಾ ಹಜಾರೆ ಅವರು ದೆಹಲಿಯ ಜಂತರ್‌ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು. ಆಗತಾನೆ ಎಎಪಿ ಎಂಬ ಹೊಸ ಪಕ್ಷವನ್ನು ಸ್ಥಾಪನೆ ಮಾಡಿದ್ದ ಒಂದು ಕಾಲದ ಐಆರ್‌ಎಸ್‌‍ ನಿವೃತ್ತ ಅಧಿಕಾರಿ ಅರವಿಂದ್‌ ಕ್ರೇಜಿವಾಲ್‌ ನೀಲಿ ಕಂಗಳ ಹುಡುಗನಾಗಿ ಕಂಡಿದ್ದರು.

2013ರ ಚುನಾವಣೆಯಲ್ಲಿ ದೆಹಲಿ ಜನ ಕಾಂಗ್ರೆಸ್‌‍ ಪಕ್ಷವನ್ನು ತಿರಸ್ಕರಿಸಿದರೂ ಯಾವುದೇ ಪಕ್ಷಕ್ಕೂ ಸ್ಪಷ್ಟ ಜನಾದೇಶ ನೀಡಿರಲಿಲ್ಲ. ಆಗತಾನೆ ಉದಯವಾಗಿದ್ದ ಎಎಪಿ ಅಚ್ಚರಿ ಎಂಬಂತೆ 28 ಸ್ಥಾನಗಳನ್ನು ಪಡೆದರೆ ದೊಡ್ಡ ಪಕ್ಷವಾಗಿ ಹೊರಹೊಮಿದ್ದ ಬಿಜೆಪಿ 32 ಸ್ಥಾನಗಳನ್ನು ಪಡೆದಿತ್ತು.

ಸರಳ ಬಹುಮತಕ್ಕೆ 36 ಸ್ಥಾನಗಳು ಬಿಜೆಪಿಗೆ ಸಿಗಲಿಲ್ಲ. ಅಂತಿಮವಾಗಿ ಕಾಂಗ್ರೆಸ್‌‍ ಹಾಗೂ ಎಎಪಿ ಮೈತ್ರಿ ಮಾಡಿಕೊಂಡು ಸರ್ಕಾ ರಚನೆ ಮಾಡಿದರು. ಏಕಾಏಕಿ ತಮ ನಿರ್ಧಾರವನ್ನು ಬದಲಾಯಿಸಿದ ಅರವಿಂದ್‌ ಕ್ರೇಜಿವಾಲ್‌ ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಿ ವಿಧಾನಸಭೆಯನ್ನೇ ವಿಸರ್ಜನೆ ಮಾಡುವಂತೆ ಲೆಫ್ಟಿನೆಂಟ್‌ ಗೌರ್ನರ್‌ ಜನರಲ್‌ಗೆ ಮನವಿ ಮಾಡಿದ್ದರು.

ಈ ವೇಳೆ ಸರ್ಕಾರ ರಚನೆ ಮಾಡಲು ಬಿಜೆಪಿ ಮೀನಾಮೇಷ ಎಣಿಸಿತ್ತು. ಅಂತಿಮವಾಗಿ 2015ರಲ್ಲಿ ಗೆದ್ದೇ ತೀರುತ್ತೇವೆ ಎಂದು ಅತಿಯಾದ ಆತವಿಶ್ವಾಸದಲ್ಲಿದ್ದ ಕಮಲ ಪಕ್ಷಕ್ಕೆ ಮರ್ಮಾಘಾತವಾಗುವಂಥ ಫಲಿತಾಂಶ ಹೊರಬಿದ್ದಿತ್ತು. ಏಕೆಂದರೆ 70 ವಿಧಾನಸಭಾ ಕ್ಷೇತ್ರಗಳಲ್ಲಿ ಇಡೀ ದೇಶದ ಜನರೇ ನಂಬಲು ಅಸಾಧ್ಯ ಎಂಬಂತೆ 68 ಕ್ಷೇತ್ರಗಳನ್ನು ಗೆದ್ದು ಕೇಜ್ರಿವಾಲ್‌ ಇತಿಹಾಸ ಸೃಷ್ಟಿ ಮಾಡಿದ್ದರು.

2020ರಲ್ಲೂ ಎಎಪಿ 70 ಕ್ಷೇತ್ರಗಳ ಪೈಕಿ 62 ಕ್ಷೇತ್ರಗಳನ್ನು ಗೆದ್ದು ಪುನಃ 2ನೇ ಬಾರಿಗೆ ಜಯ ಸಾಧಿಸಿತ್ತು. ಮೂರನೇ ಬಾರಿ ನಾವೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಆಮ್‌ ಆದಿಗೆ ದೆಹಲಿ ಜನ ಸರಿಯಾದ ಪಾಠ ಕಲಿಸಿದ್ದಾರೆ.

ಮುಂದಿನ 2029ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍-ಬಿಜೆಪಿಗೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬರಲು ಹವಣಿಸುತ್ತಿದ್ದ ಎಎಪಿಗೆ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಸದ್ಯ ಪಂಜಾಬ್‌ನಲ್ಲಿ ಆಮ್‌ ಆದಿ ಅಧಿಕಾರದಲ್ಲಿದೆ. ದೆಹಲಿಯಲ್ಲಿ ಗೆದ್ದಿರುವ ಶಾಸಕರನ್ನು ಬಿಜೆಪಿ ತನ್ನತ್ತ ಮುಂದಿನ ದಿನಗಳಲ್ಲಿ ಸೆಳೆದೆ ಸೆಳೆಯುತ್ತದೆ ಎಂಬ ಭೀತಿಯೂ ಎದುರಾಗಿದೆ.
ತನಗೆ ಪರ್ಯಾಯವಾಗಿ ರಾಷ್ಟ್ರ ಮಟ್ಟದಲ್ಲಿ ಬೆಳೆಯಲು ನಿಂತಿದ್ದ ಕೇಜ್ರಿವಾಲ್‌ಗೆ ಫಲಿತಾಂಶದ ಮೂಲಕವೇ ತಕ್ಕ ಪಾಠ ಕಲಿಸಬೇಕೆಂದು ಪ್ರಧಾನಿ ನರೇಂದ್ರಮೋದಿ ಅವರು ಕರೆ ನೀಡಿದ್ದರು
ಮುಂದಿನ ದಿನಗಳಲ್ಲಿ ಎಎಪಿ ರಾಷ್ಟ್ರ ಮಟ್ಟದಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.

RELATED ARTICLES

Latest News