Saturday, February 8, 2025
Homeಬೆಂಗಳೂರುಅನ್ಯ ಘಟಕಗಳಿಗೆ ಸಿಬ್ಬಂದಿ ನಿಯೋಜನೆಗೆ ತಾತ್ಕಾಲಿಕ ತಡೆ : ದಯಾನಂದ

ಅನ್ಯ ಘಟಕಗಳಿಗೆ ಸಿಬ್ಬಂದಿ ನಿಯೋಜನೆಗೆ ತಾತ್ಕಾಲಿಕ ತಡೆ : ದಯಾನಂದ

Temporary ban on staff deployment to other units: Dayananda

ಬೆಂಗಳೂರು,ಫೆ.8- ನಗರದಿಂದ ಅನ್ಯ ಘಟಕಗಳಿಗೆ ಸಿಬ್ಬಂದಿಗಳನ್ನು ನಿಯೋಜನೆ ಮೇರೆಗೆ ಕಳುಹಿಸುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದರು.

ಥಣಿಸಂದ್ರದ ಸಿಎಆರ್ ಉತ್ತರ ಕವಾಯತು ಮೈದಾನದಲ್ಲಿ ನಿನ್ನೆ ಏರ್ಪಡಿಸಲಾಗಿದ್ದ ಮಾಸಿಕ ಕವಾಯತಿನಲ್ಲಿ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ನಗರದಲ್ಲಿ ಶೇ.25ರಿಂದ 30 ರಷ್ಟು ಸಿಬ್ಬಂದಿ ಕೊರತೆ ಇದೆ. ಹಾಗಾಗಿ ಅನ್ಯ ಘಟಕಗಳಿಗೆ ನಿಯೋಜನೆ ಮೇರೆಗೆ ಸಿಬ್ಬಂದಿಗಳನ್ನು ಕಳುಹಿಸಿದರೆ ಇಲ್ಲಿರುವ ಸಿಬ್ಬಂದಿಗಳ ಮೇಲೆ ಹೆಚ್ಚಿನ ಹೊರೆಯಾಗಲಿದೆ. ಆದ್ದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಅನ್ಯ ಘಟಕಗಳಿಗೆ ಸಿಬ್ಬಂದಿಗಳನ್ನು ಕಳುಹಿಸಿದರೆ ನಮ ಕೆಲಸ ಕಾರ್ಯಗಳಿಗೆ ತೊಂದರೆಯಾಗಲಿದೆ. ಸದ್ಯಕ್ಕೆ ಯಾರೂ ಸಹ ನಿಯೋಜನೆ ಮೇಲೆ ಅನ್ಯ ಘಟಕಗಳಿಗೆ ಹೋಗ ಬಯಸಲು ಪ್ರಯತ್ನ ಮಾಡಬೇಡಿ ಎಂದರು.ಈಗಾಗಲೇ ಸಿಬ್ಬಂದಿಗಳ ನೇಮಕಾತಿ ನಡೆದಿದೆ. ಅವರುಗಳು ಬಂದ ನಂತರ ಆಯಾ ಸ್ಥಳಗಳಿಗೆ ನಿಯೋಜನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ಎಚ್ಚರಿಕೆ: ವರ್ಗಾವಣೆಗಾಗಿ ಕೆಲವು ಸಿಬ್ಬಂದಿಗಳು ನೇರವಾಗಿ ಆಯುಕ್ತರ ಕಚೇರಿಗೆ ಬರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಿದ್ದರೂ ಸಹ ಬರುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಯಾರೂ ಸಹ ನೇರವಾಗಿ ಆಯುಕ್ತರ ಕಚೇರಿಗೆ ಬರಬೇಡಿ ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

ಅನ್ಯ ವ್ಯಕ್ತಿಗಳ ಜೊತೆ, ಇಲ್ಲವೇ ಖುದ್ದಾಗಿ ಆಯುಕ್ತರ ಕಚೇರಿಗೆ ಬಂದು ಬೆಳಗ್ಗೆಯಿಂದ ಸಂಜೆಯವರೆಗೂ ಕಾದು ಕುಳಿತುಕೊಳ್ಳುತ್ತಿರುವುದು ಸಹ ನನ್ನ ಗಮನಕ್ಕೆ ಬಂದಿದೆ. ನಿಮ ಯಾವುದೇ ವೈಯಕ್ತಿಕ ಸಮಸ್ಯೆ ಅಥವಾ ಮಕ್ಕಳ ವಿದ್ಯಾಭ್ಯಾಸ, ತಂದೆ-ತಾಯಿಯ ಸಮಸ್ಯೆ, ಆರೋಗ್ಯ ಸಮಸ್ಯೆ ಸೇರಿದಂತೆ ನಿಮ ಯಾವುದೇ ತೊಂದರೆ ಇದ್ದರೂ ಸಂಬಂಧಪಟ್ಟ ಡಿಸಿಪಿ ಅವರ ಮೂಲಕ ಅಹವಾಲು ಕಳುಹಿಸಿ ಕೊಡಿ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಆಯುಕ್ತರು ತಿಳಿಸಿದ್ದಾರೆ.

ಪೊಲೀಸ್ ಠಾಣೆಗೆ ಬರುವ ದೂರುದಾರರು, ನೊಂದವರು, ಅಮಾಯಕರ ಬಗ್ಗೆ ಸಿಬ್ಬಂದಿ ಕಾಳಜಿ ವಹಿಸಿ ಅವರ ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ನ್ಯಾಯ ಒದಗಿಸಿಕೊಡಿ ಎಂದು ಸಿಬ್ಬಂದಿಗಳಿಗೆ ಆಯುಕ್ತರು ತಾಕೀತು ಮಾಡಿದರು.

ಈ ವಾರದಲ್ಲಿ ಏರ್ಶೋ, ಗ್ಲೋಬಲ್ ಇನ್ವೆಸ್ಟ್ಮೆಂಟ್ ಕಾರ್ಯಕ್ರಮಗಳು ನಗರದಲ್ಲಿ ನಡೆಯಲಿವೆ. ಆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಬೇಕು. ಈ ನಿಟ್ಟಿನಲ್ಲಿ ಸಂಚಾರ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕೆಂದು ಅವರು ಹೇಳಿದರು.

RELATED ARTICLES

Latest News