ಬೆಂಗಳೂರು,ಫೆ.8- ಎರಡನೇ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆ ಫೆ.17ರೊಳಗೆ ಸಿದ್ಧಗೊಳ್ಳಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಪರ್ಯಾಯವಾಗಿ ಮತ್ತೊಂದು ವಿಮಾನನಿಲ್ದಾಣ ಅಭಿವೃದ್ಧಿಪಡಿಸುವ ಉದ್ದೇಶವಿದೆ.
ಈಗಾಗಲೇ 2 ಸ್ಥಳಗಳನ್ನು ಗುರುತಿಸಲಾಗಿದ್ದು, ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮುನ್ನ ಅಥವಾ ನಂತರ ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ಸ್ಥಳ ನಿಗದಿಯನ್ನು ಅಂತಿಮಗೊಳಿಸಲಾಗುವುದು. ವಿಮಾನನಿಲ್ದಾಣಕ್ಕೆ ಸುಮಾರು 10 ಸಾವಿರ ಕೋಟಿ ಜಮೀನು ಸ್ವಾಧೀನಕ್ಕೆ ಬೇಕಾಗಬಹುದು.
2033ರವರೆಗೆ ವಿಮಾನನಿಲ್ದಾಣದ ಮತ್ತೊಂದು ವಿಮಾನನಿಲ್ದಾಣ ನಿರ್ಮಿಸುವಂತಿಲ್ಲ ಎಂಬ ಷರತ್ತು ಇದೆ. ಆದರೆ ಹೊಸ ವಿಮಾನನಿಲ್ದಾಣ ಅಭಿವೃದ್ಧಿಯಾಗಲು ಇನ್ನೂ ಏಳೆಂಟು ವರ್ಷ ಬೇಕಾಗಿದೆ. ಅದಕ್ಕಾಗಿ ಈಗಿನಿಂದಲೇ ಪ್ರಕ್ರಿಯೆ ಆರಂಭಿಸಿದ್ದೇವೆ.
ಇದು ರಾಜಕೀಯ ನಿರ್ಧಾರವಲ್ಲ. ರಾಜ್ಯದ ಜನತೆ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಮೆರಿಟ್ ಆಧಾರದ ಮೇಲೆ ನಿಲ್ದಾಣದ ಸ್ಥಳ ಗುರುತಿಸಲಾಗುವುದು. ಸ್ಥಳ ಗುರುತಿಸಿದ ಮೇಲೆ ಯಾವ ಮಾನದಂಡದ ಮೇಲೆ ಗುರುತಿಸಲಾಗುವುದು ಎಂಬುದು ಗೊತ್ತಾಗಲಿದೆ. ಇದರ ಕ್ರೆಡಿಟ್ನ್ನು ನಾನೇ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತುಮಕೂರು ಭಾಗದಲ್ಲಿ ವಿಮಾನನಿಲ್ದಾಣ ನಿರ್ಮಾಣ ಮಾಡಬೇಕೆಂಬ ವಿಚಾರವನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ಪ್ರಸ್ತಾಪಿಸಿದರೆ ಅದರಲ್ಲಿ ತಪ್ಪಿಲ್ಲ, ಅದು ಅವರ ಹಕ್ಕು. ವಿಮಾನನಿಲ್ದಾಣ ಪ್ರಾರಂಭ ಮಾಡಿದರೆ ಅದಕ್ಕೆ ಹೂಡಿಕೆದಾರರು ಬರಬೇಕಲ್ಲವೇ? ಎಂದು ಪ್ರಶ್ನಿಸಿದರು.