ನವದೆಹಲಿ,ಫೆ.9- ಪಕ್ಷವು ಹೀನಾಯ ಸೋಲು ಕಂಡ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆತಿಶಿ ಸಿಂಗ್ ಮರ್ಲೆನಾ ಅವರು ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ದೆಹಲಿ ಲೆಫ್ಟಿನೆಂಟ್ ಗೌರ್ನರ್ ಜನರಲ್ ವಿನಯ್ಕುಮಾರ್ ಸೆಕ್ಸೇನ ಅವರನ್ನು ಭೇಟಿಯಾದ ಆತಿಶಿ ಸಿಂಗ್ ತಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ರಾಜೀನಾಮೆಯನ್ನು ಸೆಕ್ಸೇನ ಅಂಗೀಕರಿಸಿದ್ದು, ಮುಂದಿನ ಸರ್ಕಾರ ರಚನೆಯಾಗುವವರೆಗೂ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲು ಸೂಚಿಸಿದ್ದಾರೆ. ನಿನ್ನೆ ಪ್ರಕಟಗೊಂಡ ದೆಹಲಿಯ 70 ಕ್ಷೇತ್ರಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 48, ಎಎಪಿ 22 ಗೆದ್ದರೆ ಕಾಂಗ್ರೆಸ್ ಸತತ ಮೂರನೇ ಬಾರಿಯೂ ಒಂದೂ ಸ್ಥಾನವನ್ನೂ ಗಳಿಸದೆ ಶೂನ್ಯ ಸಂಪಾದನೆ ಮಾಡಿದೆ.
ದೆಹಲಿ ಚುನಾವಣಾ ಫಲಿತಾಂಶದ ನಂತರ, ಬಿಜೆಪಿಯು ರಾಷ್ಟ್ರ ರಾಜಧಾನಿಯಲ್ಲಿ 27 ವರ್ಷಗಳ ನಂತರ ಸರ್ಕಾರ ರಚಿಸಲು ತುದಿಗಾಲಲ್ಲಿ ನಿಂತಿದೆ. ಈಗ ಕೇವಲ ಔಪಚಾರಿಕತೆಯ ಮಾತುಗಳು ಮಾತ್ರ ಬಾಕಿ ಉಳಿದಿದ್ದು, ಶೀಘ್ರದಲ್ಲೇ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಹೊಸ ಸಿಎಂ ಹೆಸರಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯದೆ ಇದೆ.
ಈ ಸಮಯದಲ್ಲಿ, ದೆಹಲಿ ಜನತೆಯ ಮನಸ್ಸಿನಲ್ಲಿ 5 ಪ್ರಮುಖ ಪ್ರಶ್ನೆಗಳಿವೆ. ಅವುಗಳಲ್ಲಿ ಮೊದಲನೆಯದು ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು? ದೆಹಲಿ ಸರ್ಕಾರದ ಸಚಿವ ಸಂಪುಟದಲ್ಲಿ ಯಾವ ನಾಯಕರು ಸ್ಥಾನ ಪಡೆಯುತ್ತಾರೆ? ಪ್ರಮಾಣ ವಚನ ಸ್ವೀಕಾರ ಸಮಾರಂಭ ಯಾವಾಗ? ಈ ಸಮಾರಂಭಕ್ಕೆ ಯಾರೆಲ್ಲಾ ಬರುತ್ತಾರೆ? ಹೀಗೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಮುಂದಿನ ಸಿಎಂ ಯಾರು?:
ಕಳೆದ 25 ವರ್ಷಗಳ ಇತಿಹಾಸವನ್ನು ನೋಡಿದರೆ, ದೆಹಲಿಯ ಮುಖ್ಯಮಂತ್ರಿ ಯಾವಾಗಲೂ ನವದೆಹಲಿ ಸ್ಥಾನವನ್ನು ಗೆದ್ದ ಶಾಸಕರಾಗಿರುತ್ತಾರೆ. ಮೊದಲು ಶೀಲಾ ದೀಕ್ಷಿತ್ ಮತ್ತು ನಂತರ ಅರವಿಂದ್ ಕೇಜ್ರಿವಾಲ್ ಈ ಸ್ಥಾನದಿಂದ ಶಾಸಕರಾಗಿದ್ದರು. ಈ ದೃಷ್ಟಿಕೋನದಿಂದ ನೋಡಿದರೆ, ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಬಹುದು.
ಆದರೆ ನಾವು ಬಿಜೆಪಿಯ ಭವಿಷ್ಯದ ರಾಜಕೀಯ ಯೋಜನೆಗಳನ್ನು ನೋಡಿದರೆ, ಯಾವುದೇ ಪೂರ್ವ ಅಥವಾ ಸಿಖ್ ಮುಖವನ್ನು ದೆಹಲಿಯ ಮುಖ್ಯಮಂತ್ರಿಯನ್ನಾಗಿ ಮಾಡಬಹುದು. ಸಂಸದ ಮನೋಜ್ ತಿವಾರಿ ಅವರನ್ನು ದೆಹಲಿ ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಪ್ರಧಾನಿ ಮೋದಿ ಪೂರ್ವಾಂಚಲ ಮತಬ್ಯಾಂಕ್ ಅನ್ನು ಸೆಳೆಯಲು ಪ್ರಯತ್ನಿಸಬಹುದು. ಆದರೆ ಮುಂಬರುವ ದಿನಗಳಲ್ಲಿ ಪಂಜಾಬ್ನಲ್ಲಿ ಆಮ್ ಆದಿ ಪಕ್ಷದ ಸರ್ಕಾರವನ್ನು ಅಂತ್ಯಗೊಳಿಸಲು ಬಿಜೆಪಿ ಯೋಜಿಸುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ಸಿಖ್ ಮುಖವನ್ನು ಕೂಡ ಮುಖ್ಯಮಂತ್ರಿಯನ್ನಾಗಿ ಮಾಡಬಹುದು.
ರಾಜೌರಿ ಗಾರ್ಡನ್ ಶಾಸಕ ಮಜಿಂದರ್ ಸಿಂಗ್ ಸಿರ್ಸಾ ಅಥವಾ ಕಾಂಗ್ರೆಸ್ನಿಂದ ಬಿಜೆಪಿಗೆ ಸೇರಿದ ಗಾಂಧಿನಗರ ಶಾಸಕ ಅರವಿಂದರ್ ಸಿಂಗ್ ಲವ್ಲಿ ಕೂಡ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.
ಪ್ರಮಾಣವಚನ ಸ್ವೀಕಾರ ಯಾವಾಗ?:
ದೆಹಲಿ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ, ಮುಖ್ಯಮಂತ್ರಿಯ ಹೆಸರಿಗೆ ಭಾರತದ ರಾಷ್ಟ್ರಪತಿಗಳ ಅನುಮೋದನೆ ಅಗತ್ಯವಿದೆ. ಪಕ್ಷವು ಮುಖ್ಯಮಂತ್ರಿ ಹೆಸರನ್ನು ನಿರ್ಧರಿಸಿದ ನಂತರ, ಭಾರತದ ರಾಷ್ಟ್ರಪತಿಗಳು ಲೆಫ್ಟಿನೆಂಟ್ ಗವರ್ನರ್ ಸಲಹೆಯ ಮೇರೆಗೆ ಮುಖ್ಯಮಂತ್ರಿಯನ್ನು ನೇಮಿಸುತ್ತಾರೆ. ಈ ಪ್ರಕ್ರಿಯೆಯು 2 ರಿಂದ 3 ದಿನಗಳನ್ನು ತೆಗೆದುಕೊಳ್ಳಬಹುದು.
ಮತ್ತೊಂದೆಡೆ, ಪ್ರಧಾನಿ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 12-13 ರಂದು ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಅವರೊಂದಿಗಿನ ಮಹತ್ವದ ಸಭೆಗಾಗಿ ಪ್ರಧಾನಿ ಮೋದಿ ಅಮೆರಿಕಕ್ಕೆ ಹೋಗಬೇಕಾಗಿದೆ. ಇದಕ್ಕೂ ಮುನ್ನ ಅವರು ಫ್ರಾನ್‌್ಸಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಅಮೆರಿಕದಿಂದ ಹಿಂದಿರುಗಿದ ನಂತರ ಈ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂದು ಹೇಳಲಾಗಿದೆ.
ದೆಹಲಿ ಸಂಪುಟದಲ್ಲಿ ಯಾರಿಗೆ ಸ್ಥಾನ?:
ದೆಹಲಿ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಹೆಸರನ್ನು ಬಿಜೆಪಿ ಹೈಕಮಾಂಡ್ ಮಾತ್ರ ಅನುಮೋದಿಸುತ್ತದೆ. ಬಿಜೆಪಿ ತನ್ನ ಸಚಿವ ಸಂಪುಟ ಮತ್ತು ಮುಖ್ಯಮಂತ್ರಿ ಮುಖದ ಮೂಲಕ ದೆಹಲಿ ಮತ್ತು ದೇಶದ ರಾಜಕೀಯದಲ್ಲಿ ಜಾತಿ ಮತ್ತು ರಾಜಕೀಯ ತಂತ್ರದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಬಹುದು. ಯಾವುದೇ ಹೊಸ ಹೆಸರನ್ನು ಸಿಎಂ ಮಾಡಬಹುದು. ಆದರೆ, ಮುಖ್ಯಮಂತ್ರಿಯಾಗಲು ಸಾಧ್ಯವಾಗದ ದೆಹಲಿಯ ಎಲ್ಲಾ ದೊಡ್ಡ ವ್ಯಕ್ತಿಗಳಿಗೆ ಕನಿಷ್ಠ ಸಂಪುಟದಲ್ಲಿ ಸ್ಥಾನ ನೀಡಬಹುದು.
ಯಾರೆಲ್ಲಾ ಭಾಗಿ:ದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ಸರ್ಕಾರದ ಪ್ರಮಾಣವಚನ ಸಮಾರಂಭದಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಎಂಬುದು ಕೂಡ ಪ್ರಶ್ನೆಯಾಗಿದೆ. ಪ್ರಮಾಣವಚನ ಸಮಾರಂಭಕ್ಕೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಹಾಜರಾಗುವುದು ಖಚಿತ ಎಂದು ಹೇಳಲಾಗಿದೆ. ಈ ಕಾರ್ಯಕ್ರಮಕ್ಕೆ ಬಿಜೆಪಿ ಆಡಳಿತವಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಹ ಆಹ್ವಾನಿಸಬಹುದು.ಕೇಜ್ರಿವಾಲ್ ಅವರನ್ನು ಸಹ ಆಹ್ವಾನಿಸುವ ಸಾಧ್ಯತೆ ಇದೆ.