ಪ್ರಯಾಗರಾಜ್,ಫೆ.10- ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
ನಂತರ ಅಕ್ಷಯವತ್ ಮತ್ತು ಬಡೇ ಹನುಮಾನ್ ದೇವಾಲಯದಲ್ಲಿ ರಾಷ್ಟ್ರಪತಿಗಳು ಪ್ರಾರ್ಥನೆ ಸಲ್ಲಿಸಿದರು. ಅವರೊಂದಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಇದ್ದರು.
ಇಂದು ಪ್ರಯಾಗರಾಜ್ಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ಅವರು ಸ್ವಾಗತಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 13ರಂದು ಪ್ರಾರಂಭವಾದ ಮಹಾಕುಂಭವು ವಿಶ್ವದ ಅತಿದೊಡ್ಡ ಆಧ್ಯಾತಿಕ ಮತ್ತು ಸಾಂಸ್ಕೃತಿಕ ಸಭೆಯಾಗಿದ್ದು, ಜಗತ್ತಿನಾದ್ಯಂತ ಭಕ್ತರನ್ನು ಆಕರ್ಷಿಸುತ್ತದೆ. ಈವರೆಗೂ 42 ಕೋಟಿಗೂ ಹೆಚ್ಚು ಭಕ್ತರು ಗಂಗಾ ಮತ್ತು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಮಹಾಕುಂಭದ ಆಡಳಿತ ಬಿಡುಗಡೆ ಮಾಡಿದ ಅಂಕಿ- ಅಂಶಗಳು ತಿಳಿಸಿವೆ.
ಸಂಚಾರ ದಟ್ಟಣೆ:
ನಿಲ್ದಾಣದ ಹೊರಗೆ ವಿಪರೀತ ಜನಸಂದಣಿಯಿಂದಾಗಿ ಪ್ರಯಾಗರಾಜ್ನ ಸಂಗಮ್ ರೈಲು ನಿಲ್ದಾಣವನ್ನು ಮುಚ್ಚಲಾಗಿದೆ. ಲಖನೌ – ಪ್ರಯಾಗ್ರಾಜ್ ಹೆದ್ದಾರಿಯಲ್ಲಿ ಫಾಫಮೌಗೆ ಐದು ಗಂಟೆಗಳ ಕಾಲ ಜಾಮ್ನಲ್ಲಿ ಸಿಲುಕಿಕೊಂಡಿದ್ದೆ. ಹೇಗಾದರೂ ತನ್ನ ವಾಹನವನ್ನು ಬೇಲಾ ಕಚ್ಚರ್ನಲ್ಲಿ ನಿಲ್ಲಿಸಿ ಅಲ್ಲಿಂದ ಸಂಗಮ್ಘಾಟ್ಗೆ ಕಾಲ್ನಡಿಗೆಯಲ್ಲಿ ಹೊರಟೆ ಎಂದು ರಾಯ್ ಬರೇಲಿ ರಾಮ್ ಕೃಪಾಲ್ ತಿಳಿಸಿದ್ದಾರೆ.
ಎಲ್ಲರೂ ವಾಹನ ಸಮೇತ ಬರುತ್ತಿರುವುದರಿಂದ ಹೀಗಾಗಿದೆ:
ಸಂಚಾರ ವಿಭಾಗದ ಎಡಿಜಿಪಿ ಕುಲದೀಪ್ ಸಿಂಗ್ ಮಾತನಾಡಿ, ವಾಹನಗಳ ಸಂಖ್ಯೆ ತುಂಬಾ ಹೆಚ್ಚಿದ್ದು, ಪ್ರಯಾಣಿಕರು ಮಹಾ ಕುಂಭಮೇಳದ ಪ್ರದೇಶಕ್ಕೆ ಸಾಧ್ಯವಾದಷ್ಟು ಹತ್ತಿರ ಬರಲು ಪ್ರಯತ್ನಿಸುತ್ತಿದ್ದಾರೆ. ಇದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಹೇಳಿದ್ದಾರೆ. ಮೌನಿ ಅಮಾವಾಸ್ಯೆಯಂದು ಬಂದಿದ್ದ ಜನಸ್ತೋಮವೇ ಈಗಲೂ ಹರಿದು ಬರುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.
ಸಂಗಮ್ ನಿಲ್ದಾಣ ಮುಚ್ಚಲು ನಿರ್ಧಾರ:
ಏತನಧ್ಯೆ ಲಖನೌದ ಉತ್ತರ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕುಲದೀಪ್ ತಿವಾರಿ ಮಾತನಾಡಿ, ಪ್ರಯಾಗ್ರಾಜ್ ಸಂಗಮ್ ನಿಲ್ದಾಣದ ಹೊರಗೆ ಹೆಚ್ಚಿನ ಜನಸಂದಣಿ ಇದೆ. ಈ ಕಾರಣದಿಂದ ಪ್ರಯಾಣಿಕರು ನಿಲ್ದಾಣದಿಂದ ಹೊರಬರಲು ಕಷ್ಟಪಡುತ್ತಿದ್ದಾರೆ. ಈ ದಟ್ಟಣೆ ಕಡಿಮೆ ಮಾಡಲು, ಪ್ರಯಾಗ್ರಾಜ್ ಸಂಗಮ್ ನಿಲ್ದಾಣವನ್ನು ಮುಚ್ಚಲು ನಿರ್ಧರಿಸಲಾಗಿದೆ.
ಹೆಚ್ಚಿನ ಸಂಖ್ಯೆಯ ಭಕ್ತರನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಆದೇಶದವರೆಗೆ ಪ್ರಯಾಗರಾಜ್ ಜಂಕ್ಷನ್ ನಿಲ್ದಾಣದಲ್ಲಿ ಉತ್ತರ ಮಧ್ಯ ರೈಲ್ವೆ ಏಕ ದಿಕ್ಕಿನ ಸಂಚಾರ ವ್ಯವಸ್ಥೆ ಜಾರಿಗೆ ತರಲಾಗಿದೆ.
ಸಂಚಾರ ದಟ್ಟಣೆ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಪ್ರಯಾಗ್ರಾಜ್ ಮಹಾಕುಂಭದಲ್ಲಿ ಸಿಲುಕಿರುವ ಕೋಟ್ಯಂತರ ಭಕ್ತರಿಗೆ ತುರ್ತು ವ್ಯವಸ್ಥೆ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.
ಎಲ್ಲೆಡೆ ಟ್ರಾಫಿಕ್ಜಾಮ್ನಲ್ಲಿ ಹಸಿವು, ಬಾಯಾರಿಕೆ, ಸಂಕಷ್ಟ ಮತ್ತು ದಣಿದ ಯಾತ್ರಾರ್ಥಿಗಳನ್ನು ಮಾನವೀಯ ದೃಷ್ಟಿಕೋನದಿಂದ ನೋಡಬೇಕು. ನವಾಬ್ಗಂಜ್ನಲ್ಲಿ ಈಗಾಗಲೇ ಲಕ್ನೋ ಕಡೆಗೆ ಪ್ರಯಾಗರಾಜ್ಗೆ ಪ್ರವೇಶಿಸುವ ಮೊದಲು 30 ಕಿಲೋಮೀಟರ್ ಟ್ರಾಫಿಕ್ಜಾಮ್, ರೀವಾರಸ್ತೆಯ 16 ಕಿಮೀ ಮೊದಲು ಗೌಹಾನಿಯಾದಲ್ಲಿ ಜಾಮ್, ಮತ್ತು ವಾರಣಾಸಿ ಕಡೆಗೆ 12ರಿಂದ 15 ಕಿಮೀ ಜಾಮ್ ಆಗಿದೆ. ರೈಲಿನ ಇಂಜಿನ್ಗೂ ಜನರು ಪ್ರವೇಶಿಸಿದ ಸುದ್ದಿ ಎಲ್ಲೆಡೆ ಪ್ರಕಟವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯ ಜೀವನ ಕಷ್ಟಕರವಾಗಿದೆ.
ಇಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭಕ್ತ ಮಹಾಸಾಗರವೇ ಹರಿದು ಬಂದಿದ್ದು, ಕುಂಭಮೇಳದ ಮಾರ್ಗಗಳಲ್ಲಿ ಕಿಲೋಮೀಟರ್ಗಟ್ಟಲೆ ತೀವ್ರ ದಟ್ಟಣೆ ಉಂಟಾಗಿದೆ. ಈ ನಡುವೆ ಸಂಚಾರ ಈ ದಟ್ಟಣೆಯಿಂದಾಗಿ ಸಿಕ್ಕಿಬಿದ್ದಿರುವ ಭಕ್ತರಿಗೆ ತುರ್ತು ವ್ಯವಸ್ಥೆ ಮಾಡುವಂತೆ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಉತ್ತರಪ್ರದೇಶ ಸರ್ಕಾರ ಸರಿಯಾದ ವ್ಯವಸ್ಥೆ ಮಾಡಲು ವಿಫಲವಾಗಿದೆ. ದುರಹಂಕಾರದಿಂದ ತುಂಬಿದ ಸುಳ್ಳು ಜಾಹೀರಾತುಗಳಲ್ಲಿ ಮಾತ್ರ ಅದು ಗೋಚರಿಸುತ್ತದೆ. ಆದರೆ, ವಾಸ್ತವದಲ್ಲಿ ಅದು ನೆಲದ ಮೇಲೆ ಕಾಣೆಯಾಗಿದೆ ಎಂದು ಯಾದವ್ ಟೀಕಾ ಪ್ರಹಾರ ನಡೆಸಿದ್ದಾರೆ.