ಬೆಂಗಳೂರು,ಫೆ.10- ರಾಜ್ಯಕ್ಕೆ ನ್ಯಾಯಯುತವಾದ ತೆರಿಗೆ ಪಾಲು ಕೇಳಲು ನಾಚಿಕೆಗೇಡಿನ ವಿಚಾರ ಎಂದು ಕೇಂದ್ರ ಸಚಿವ ಪಿಯುಷ್ ಘೋಯಲ್ ಹೇಳಿರುವುದು ಖಂಡನೀಯ. ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಅದನ್ನು ಸಹಿಸಿಕೊಂಡಿರಬೇಕು ಎಂದು ಹೇಳುವ ಕೇಂದ್ರ ಸಚಿವರಿಗೆ ನಾಚಿಕೆಯಾಗಬೇಕಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ ಪಾಲು ನಮಗೆ ಕೊಡಿ ಎಂದರೆ ಕೇಂದ್ರ ಸಚಿವರು ನಾಚಿಕೆಯಾಗಬೇಕು ಎನ್ನುವುದು, ಅದೇ ವೇಳೆ ರಾಜ್ಯಸರ್ಕಾರ ದಿವಾಳಿಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳುವುದನ್ನು ನೋಡಿದರೆ ಇದೂ ಒಂದು ವ್ಯವಸ್ಥೆಯೇ ಎನ್ನಿಸುತ್ತಿದೆ ಎಂದು ವಿಷಾದಿಸಿದರು.
ನೇರವಾಗಿ ತೆರಿಗೆ ಪಾಲು ಕೊಡುವುದಿಲ್ಲ ಎಂದು ಕೇಂದ್ರ ಸಚಿವರು ಹೇಳಲಿ. ಅನಂತರ ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಈ ಹಿಂದೆ ಯೋಜನಾ ಆಯೋಗವನ್ನು ಕಾಂಗ್ರೆಸ್ ಅವಧಿಯಲ್ಲಿ ರಚಿಸಲಾಗಿತ್ತು. ಬಿಜೆಪಿ ಸರ್ಕಾರ ಅದನ್ನು ನೀತಿ ಆಯೋಗ ಎಂದು ಬದಲಾವಣೆ ಮಾಡಿಕೊಂಡು ರಾಜ್ಯಗಳ ಪಾಲನ್ನು ವಂಚಿಸುತ್ತಿದೆ. ಇದಕ್ಕಾಗಿ ಮೊದಲು ಕೇಂದ್ರ ಸಚಿವರು ನಾಚಿಕೆಪಟ್ಟುಕೊಳ್ಳಬೇಕಿದೆ ಎಂದು ಕಿಡಿಕಾರಿದರು.
ಜಾತಿಜನಗಣತಿಯನ್ನು ಬಹಿರಂಗಪಡಿಸಲು ರಾಜ್ಯಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಇದಕ್ಕೆ ಸೂಕ್ತ ಸಂದರ್ಭ ಬರಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗಳಾಗುತ್ತಿವೆ. ಸಂಪುಟದಲ್ಲೂ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿ ಮೊದಲು ಮಂಡನೆಯಾಗಬೇಕು. ಅನಂತರ ಅದು ಸಾರ್ವಜನಿಕ ಚರ್ಚೆಗೆ ಮುಕ್ತಗೊಳ್ಳಬೇಕು.
ಈವರೆಗಿನ ಸಂಪುಟ ಸಭೆಯಲ್ಲಿ ಬೇರೆಬೇರೆ ವಿಚಾರಗಳು ಚರ್ಚೆಯಾಗುತ್ತಿವೆ. ಮುಖ್ಯಮಂತ್ರಿ ಅನಾರೋಗ್ಯದ ಹಿನ್ನಲೆಯಲ್ಲಿ ಕೆಲ ಸಭೆಗಳು ಮುಂದೂಡಿಕೆಯಾಗಿವೆ. ಇದೇ 17 ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪವಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಮೆಟ್ರೋ ದರ ಏರಿಕೆಯ ನಿರ್ಧಾರವನ್ನು ಬಿಎಂಆರ್ಸಿಎಲ್ ಕೈಗೊಂಡಿದೆ. ಅದೊಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಖರ್ಚುವೆಚ್ಚಗಳನ್ನು ಆಧರಿಸಿ ದರ ಏರಿಕೆ ಮಾಡಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಅಥವಾ ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ನನಗೆ ಗೊತ್ತಿಲ್ಲ ಎಂದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆಯವರನ್ನು ಭೇಟಿ ಮಾಡಿರುವುದು ಔಪಚಾರಿಕ.
ಅಲ್ಲಿ ರಾಜಕೀಯ ಚರ್ಚೆಯಾಗಿಲ್ಲ. ಒಂದು ವೇಳೆ ಚರ್ಚೆಯಾದರೂ ಅದನ್ನು ನಾನು ಮಾಧ್ಯಮದವರಿಗೆ ಹೇಳುವುದಿಲ್ಲ. ಖರ್ಗೆ ಮತ್ತು ನಾವು ಒಂದೇ ಕುಟುಂಬ. ಅವರು ರಾಜಕೀಯ ಹೊರತಾಗಿ ನನಗೆ ಹಿರಿಯಣ್ಣ. ಹೀಗಾಗಿ ಪದೇಪದೇ ಭೇಟಿ ಮಾಡುತ್ತಿರುತ್ತೇವೆ. ಕುಟುಂಬದ ಅನೇಕ ವಿಚಾರಗಳನ್ನು ಮಾತನಾಡುತ್ತೇವೆ. ಎಲ್ಲವನ್ನೂ ಮಾಧ್ಯಮಗಳಿಗೆ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.ಕೆಪಿಸಿಸಿ ಅಧ್ಯಕ್ಷ ಹಾಗು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಂಭಮೇಳದಲ್ಲಿ ಭಾಗಿಯಾಗಿರುವುದಕ್ಕೆ ಪ್ರತಿಕ್ರಿಯಿಸಲು ಪರಮೇಶ್ವರ್ ನಿರಾಕರಿಸಿದರು.