ಬೆಂಗಳೂರು,ಫೆ.10– ಧಮ್ಮು, ತಾಕತ್ತು ಇದ್ದರೆ ಮೆಟ್ರೋ ದರವನ್ನು ಕಡಿಮೆ ಮಾಡಿಸಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಟ್ರೋ ದರ ಏರಿಕೆಗೆ ರಾಜ್ಯಸರ್ಕಾರ ಹೊಣೆ ಅಲ್ಲ. ಕೇಂದ್ರ ಸರ್ಕಾರದ ದರ ನಿಗದಿ ಸಮಿತಿಯನ್ನು ಕೇಂದ್ರ ಸರ್ಕಾರದ ಕಾಯ್ದೆಯಡಿ ರಚಿಸಲಾಗಿದೆ. ಪ್ರಸ್ತುತ ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಹೇಳಿದರು.
ಮೆಟ್ರೋದರ ಕಡಿಮೆಯಾದರೆ ಅಥವಾ ದರ ಏರಿಕೆಗೆ ತಡೆ ನೀಡಿದರೆ ಅದು ಕೇಂದ್ರ ಸರ್ಕಾರದ ಸಾಧನೆ. ದರ ಹೆಚ್ಚಾದರೆ ರಾಜ್ಯಸರ್ಕಾರ ಹೊಣೆ ಎಂದು ಬಿಜೆಪಿಯವರು ಪ್ರಚಾರ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಜನವರಿಯಲ್ಲಿ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿ.ಸಿ.ಮೋಹನ್ರವರು ಮೆಟ್ರೋ ದರ ಏರಿಕೆಯನ್ನು ಮುಂದೂಡಲು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದೇವೆ.
ನಮ್ಮ ಶಿಫಾರಸನ್ನು ಅವರು ಒಪ್ಪಿದ್ದಾರೆ. ಅದಕ್ಕಾಗಿ ಧನ್ಯವಾದ ಎಂದು ಹೇಳಿದರು. ತಾತ್ಕಾಲಿಕವಾಗಿ ದರ ಏರಿಕೆ ಮುಂದೂಡಿದ್ದಕ್ಕೆ ಧನ್ಯವಾದ ಹೇಳಿದರು. ಈಗ ಹೆಚ್ಚಳ ಮಾಡಿರುವುದಕ್ಕೆ ಏನು ಹೇಳುತ್ತಾರೆ? ದರ ಏರಿಸದೆ ಇದ್ದರೆ ಅದಕ್ಕೆ ಮೋದಿಗೆ ಕೀರ್ತಿ. ಏರಿಕೆಯಾದರೆ ರಾಜ್ಯಸರ್ಕಾರಕ್ಕೆ ಕೆಟ್ಟ ಹೆಸರು. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿ ಸಾರಿಗೆ ಬಸ್ ಪ್ರಯಾಣ ದರವನ್ನು ಶೇ.15 ರಷ್ಟು ಹೆಚ್ಚಿಸಿದಾಗ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿಯವರು ಬಸ್ಸ್ಟ್ಯಾಂಡಿಗೆ ಹೋಗಿ ಜನರಿಗೆ ಗುಲಾಬಿ ಹೂ ಕೊಟ್ಟು ಸಿದ್ದರಾಮಯ್ಯನವರ ಪರವಾಗಿ ಕ್ಷಮೆ ಕೇಳಿದರು. ಈಗ ಅದೇ ಬಿಜೆಪಿ ನಾಯಕರು ಮೆಟ್ರೋ ನಿಲ್ದಾಣಕ್ಕೆ ಹೋಗಿ ಜನರಿಗೆ ಹೂ ನೀಡಿ ಮೋದಿ ಪರವಾಗಿ ಕ್ಷಮೆ ಕೇಳಲಿ. ಬೇಕಿದ್ದರೆ ನಾವೇ ಗುಲಾಬಿ ಹೂ ಖರೀದಿಸಿಕೊಡುತ್ತೇವೆ ಎಂದು ತಿರುಗೇಟು ನೀಡಿದರು.
ಬಸ್ ಪ್ರಯಾಣ ದರ ಏರಿಕೆಯಾದಾಗ ಪ್ರತಿಭಟನೆ ಮಾಡುತ್ತಾರೆ. ಮೋದಿಯವರು ಮೆಟ್ರೋ ದರ ಏರಿಸಿದರೆ ಬಿಜೆಪಿಯವರು ಮನವಿ ಮಾಡುತ್ತೇವೆ ಎಂದು ನಾಟಕವಾಡುತ್ತಾರೆ. ಇಷ್ಟೇನಾ ಇವರ ಧಮು, ತಾಕತ್ತು? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದಿರುವ ಶಕ್ತಿ ಯೋಜನೆಯ ಮಾದರಿಯನ್ನು ಅಧ್ಯಯನ ನಡೆಸಲು ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರದಿಂದ ನಿಯೋಗ ಬಂದಿತ್ತು.
ಇದು ನಮ ಸರ್ಕಾರದ ಸಾಮರ್ಥ್ಯ. ಬಿಜೆಪಿಯವರು ಕೇವಲ ಟೀಕೆ ಮಾಡುವುದಕ್ಕಷ್ಟೇ ಸೀಮಿತ ಎಂದರು. ರಾಜ್ಯಸರ್ಕಾರ ಆರ್ಥಿಕ ಶಕ್ತಿ ಕೇಂದ್ರವಾಗಿದೆ. ಕೇಂದ್ರ ಸಚಿವ ಪೀಯೂಷ್ ಗೋಯಲ್ ಬಿಹಾರ, ಉ.ಪ್ರದೇಶಕ್ಕೆ ಹೋಗಿ ನೀವು ನೀಡುವ ತೆರಿಗೆಗೆ ಮಾತ್ರ ನಾವು ಆದಾಯ ವಾಪಸ್ ನೀಡುತ್ತೇವೆ ಎಂದು ಹೇಳಲಿ.
ಬಿಹಾರ, ಮಧ್ಯಪ್ರದೇಶ, ಉ.ಪ್ರದೇಶದಿಂದ ಕೆಲಸ ಅರಸಿ ಕರ್ನಾಟಕಕ್ಕೆ ಜನ ಬರುತ್ತಾರೆಯೇ ಹೊರತು ಇಲ್ಲಿಂದ ಅಲ್ಲಿಗೆ ಹೋಗುವುದಿಲ್ಲ. ಕನ್ನಡಿಗರ ಬೆವರಿನ ದುಡಿಮೆಯಲ್ಲಿ ಪಾಲು ಕೇಳಿದರೆ ಕೇಂದ್ರ ಸಚಿವರು ಅವಹೇಳನಕಾರಿಯಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು. ಹಿಂದಿನ ಬಿಜೆಪಿ ಸರ್ಕಾರದಲ್ಲಾದ ಭ್ರಷ್ಟಾಚಾರದ ಬಗ್ಗೆ ಸಿಎಜಿ ವರದಿಯಿದೆ.
ಬಿಲ್ ಪಾವತಿ ಮಾಡದೇ ಇದ್ದರೆ ವಿಷ ಕುಡಿಯುತ್ತೇವೆ ಎಂದು ಸರ್ಕಾರವನ್ನು ಬ್ಲಾಕ್ಮೇಲ್ ಮಾಡುವುದು ಸರಿಯಲ್ಲ. ವಾಸ್ತವವಾಗಿ ಪ್ರತಿಭಟನೆ ಮಾಡಬೇಕಾಗಿರುವುದು ಬಿಜೆಪಿ ಕಚೇರಿ ಎದುರು. ನಮ ಸರ್ಕಾರ ನಿಯಮಾನುಸಾರ ಕ್ರಮ ಕೈಗೊಳ್ಳುತ್ತಿದೆ. ಇದನ್ನು ತಪ್ಪಿಸಲು ಆತಹತ್ಯೆಯ ಬ್ಲಾಕ್ಮೇಲ್ ಮಾಡಲಾಗುತ್ತಿದೆ. ಬಿಜೆಪಿಯವರ ಭ್ರಷ್ಟಾಚಾರದಿಂದಾಗಿ ಗುತ್ತಿಗೆದಾರರು ಸಂಕಷ್ಟ ಅನುಭವಿಸುವಂತಾಗಿದೆ ಎಂದರು.
ಬಿಜೆಪಿಯವರು ಯಾವ ಕಾನೂನಿನಡಿ ಬಿಲ್ ಪಾವತಿಸಬೇಕು ಎಂದು ನಮಗೆ ಹೇಳಲಿ. ಅದರಂತೆ ನಾವು ನಡೆದುಕೊಳ್ಳುತ್ತೇವೆ. ಬಿಜೆಪಿ ಸರ್ಕಾರ 430 ಕೋಟಿ ರೂ. ಖರ್ಚು ಮಾಡಿರುವ ಬಗ್ಗೆ ಲೆಕ್ಕ ಪರಿಶೋಧಕರ ಆಕ್ಷೇಪಣೆಗೆ ಗುರಿಯಾಗಿದೆ. ಆ ಹಣವನ್ನು ಯಥಾರೀತಿ ನೀಡಲು ಸಾಧ್ಯವೇ? ಎಂದರು.