Friday, February 28, 2025
Homeರಾಷ್ಟ್ರೀಯ | Nationalಬಜೆಟ್‌ನಲ್ಲಿ ವಿಶೇಷಚೇತನರಿಗೆ ಸಿಗುತ್ತಾ ಸಿಹಿಸುದ್ದಿ..?

ಬಜೆಟ್‌ನಲ್ಲಿ ವಿಶೇಷಚೇತನರಿಗೆ ಸಿಗುತ್ತಾ ಸಿಹಿಸುದ್ದಿ..?

Will the specially-abled get any sweet news in the budget?

ವಿಶೇಷ ವರದಿ: ಮಹಾಂತೇಶ್‌ ಬ್ರಹ್ಮ
ಬೆಂಗಳೂರು,ಫೆ.11– ಪ್ರಸಕ್ತ 2025-26ನೇ ಸಾಲಿನ ರಾಜ್ಯ ಬಜೆಟ್‌‍ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ಧತೆ ಆರಂಭಿಸಿದ್ದು, 4.1 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗುವ ನಿರೀಕ್ಷೆ ಇದೆ. ಕಳೆದ ಗುರುವಾರದಿಂದ ಪ್ರಾರಂಭಿಸಿ 5 ದಿನಗಳ ಕಾಲ ವಿವಿಧ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಗಳನ್ನು ನಡೆಸಿದ್ದಾರೆ.

ತಮ ಅಧಿಕೃತ ನಿವಾಸ ಕಾವೇರಿಯಲ್ಲಿ ಬಜೆಟ್‌ ಪೂರ್ವ ಸಭೆಗಳು ನಡೆದಿದ್ದು ಸಿದ್ದರಾಮಯ್ಯನವರು ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳು ವಿವಿಧ ಇಲಾಖೆಗಳ ಬಜೆಟ್‌ ಪ್ರಸ್ತಾವನೆಗಳನ್ನು ಪರಿಶೀಲಿಸಿದ್ದಾರೆ.

ಮಾರ್ಚ್‌ 14 ರಂದು ರಾಜಕೀಯ ಜೀವನದಲ್ಲಿ ದಾಖಲೆಯ 16ನೇ ಬಜೆಟ್‌ ಅನ್ನು ಮಂಡಿಸಲಿರುವ ಸಿದ್ದರಾಮಯ್ಯನವರು ವಿಕಲಚೇತನರ ಮಾಸಾಶನವನ್ನು ಹೆಚ್ಚಳ ಮಾಡಲೇಬೇಕೆಂದು ಈಗಾಗಲೇ ರಾಜ್ಯಾದ್ಯಂತ ವಿಕಲಚೇತನರು ಬೇಡಿಕೆ ಪಟ್ಟಿ ಸಲ್ಲಿಸಿದ್ದಾರೆ. ಪಕ್ಕದ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಪ್ರತಿ ತಿಂಗಳು 3,000 ರೂ., ದೆಹಲಿಯಲ್ಲಿ 2,500 ರೂ. ಗೋವಾ ರಾಜ್ಯದಲ್ಲಿ 2,500 ರೂ,. ಹರಿಯಾಣದಲ್ಲಿ 2,250 ರೂ.ಗಳನ್ನು ಪ್ರತಿ ತಿಂಗಳು ವಿಕಲಚೇತನರಿಗೆ ಮಾಸಾಶನವಾಗಿ ನೀಡಲಾಗುತ್ತಿದೆ.

ಆದರೆ ಭಾರತ ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲಿ ಎರಡನೇ ಸ್ಥಾನ ಪಡೆದಿರುವ ಕರ್ನಾಟಕದಲ್ಲಿ ಮಾತ್ರ ಶೇ.45 ರಿಂದ 75 ರವರೆಗೆ ಅಂಗವಿಕಲತೆಯುಳ್ಳ ವಿಕಲಚೇತನರಿಗೆ 800 ರೂ.ಗಳು ಮತ್ತು ಶೇ.75 ಕ್ಕಿಂತ ಹೆಚ್ಚು ಅಂಗವಿಕಲತೆಯುಳ್ಳ ವಿಕಲಚೇತನರಿಗೆ ಕರ್ನಾಟಕ ಸರ್ಕಾರವು 1,400 ರೂ.ಗಳನ್ನು ಮಾಸಾಶನ ನೀಡುತ್ತಿದೆ.

ಪ್ರತಿ ವರ್ಷಕ್ಕೊಮೆ ವಿಕಲಚೇತನರ ಮಾಸಾಶನವನ್ನು ಪರಿಷ್ಕರಣೆ ಮಾಡಿ ಹೆಚ್ಚಳ ಮಾಡಬೇಕೆಂಬ ನಿಯಮವಿದ್ದರೂ ಕಳೆದ 11 ವರ್ಷಗಳಿಂದ ಸರಿಯಾದ ರೀತಿಯಲ್ಲಿ ಪರಿಷ್ಕರಣೆ ಮಾಡಲು ತಲೆ ಕೆಡಿಸಿಕೊಳ್ಳದ ಸರ್ಕಾರಗಳ ನಡೆ ಅಮಾನವೀಯ ಮತ್ತು ಅಸಾಂವಿಧಾನಿಕ ಎಂಬ ಆಕೋಶದ ಮಾತುಗಳು ಕೇಳಿ ಬಂದಿವೆ.

ಸಾಮಾಜಿಕ ಭದ್ರತಾ ಯೋಜನೆಯ ಅನುದಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲಿರುತ್ತದೆ ಎಂಬುದು ಬಹಳಷ್ಟು ಜನರಿಗೆ ತಿಳಿದೇ ಇಲ್ಲ. 1,400 ರೂ.ಗಳು ನೀಡುವ ಮಾಸಾಶನದಲ್ಲಿ 1,100 ರೂ.ಗಳು ರಾಜ್ಯ ಸರ್ಕಾರ ನೀಡಿದರೆ 300 ರೂ.ಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ. 800 ರೂ.ಗಳು ನೀಡುವ ಮಾಸಾಶನದಲ್ಲಿ ಪೂರ್ಣ ಪ್ರಮಾಣದ ಹಣವನ್ನು ರಾಜ್ಯ ಸರ್ಕಾರವೇ ನೀಡುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲಿರುವುದಿಲ್ಲ.

ಪ್ರಸ್ತುತ ನೀಡುತ್ತಿರುವ ಮಾಸಾಶನದಲ್ಲಿ ವಿಕಲಚೇತನರು ಜೀವನ ನಿರ್ವಹಣೆ ಮಾಡಲು ಅಸಾಧ್ಯವೆಂದೇ ಹೇಳಬಹುದು. ಯಾಕೆಂದರೆ ಈಗಿನ ದುಬಾರಿ ಬೆಲೆಯಲ್ಲಿ ಕನಿಷ್ಟ ಮಟ್ಟದ ಜೀವನ ನಡೆಸಲು ಒಬ್ಬ ವಿಕಲಚೇತನ ಫಲಾನುಭವಿಗೆ ಪ್ರತಿ ದಿನ 200 ರೂ.ಗಳು ಬೇಕೇಬೇಕು. ಅಂದರೆ ತಿಂಗಳಿಗೆ 6 ಸಾವಿರ ರೂ.ಗಳ ಅಗತ್ಯವಿದೆ.

ಅಂಗವಿಕಲರ ಹಕ್ಕುಗಳ ಕಾಯ್ದೆ-2016 ರ ಪ್ರಕಾರ ವಿಕಲಚೇತನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಪ್ರತಿ ಸರ್ಕಾರದ ಜವಾಬ್ದಾರಿ ಮತ್ತು ಮಾನವೀಯ ದೃಷ್ಟಿಯಿಂದ ಅವರ ಸಂವಿಧಾನಾತಕ ಬೇಡಿಕೆಗಳನ್ನು ಈಡೇರಿಸುವುದು ಹಾಗೂ ಆರ್ಥಿಕ ಭದ್ರತೆಯನ್ನು ಒದಗಿಸುವುದು ಮುಖ್ಯಮಂತ್ರಿಯವರ ಕರ್ತವ್ಯ.

ಆದ್ದರಿಂದ ವಿಶೇಷ ಚೇತನರು ಗೌರವಯುತವಾಗಿ ಸಮಾಜದಲ್ಲಿ ಜೀವನ ನಿರ್ವಹಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡುತ್ತಿರುವ ಮಾಸಾಶನ (ಮಾಸಿಕ ಪಿಂಚಣಿ)ವನ್ನು 4,500 ರೂ.ಗಳಿಗೆ ಹೆಚ್ಚಳ ಮಾಡುವುದರ ಮುಖಾಂತರ ಮುಂಬರುವ ಆಯ-ವ್ಯಯ (ಬಜೆಟ್‌‍)ನಲ್ಲಿ ಘೋಷಣೆ ಮಾಡಲೇಬೇಕೆಂಬ ಕೂಗು ಕೇಳಿ ಬಂದಿದೆ . ವಿಶೇಷ ಚೇತನರ ಕೂಗಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾವ ರೀತಿ ಮಾರ್ದನಿಸುತ್ತಾರೆ ಎಂಬುದು ಮಾರ್ಚ್‌ 14 ರ ಬಜೆಟ್‌ ಮಂಡಿಸುವವರೆಗೂ ಕಾದು ನೋಡಬೇಕಿದೆ.

RELATED ARTICLES

Latest News