ಬೆಂಗಳೂರು,ಫೆ.11- ಮನುಸ್ಮೃತಿ ಮಾನವೀಯತೆಯ ವಿರುದ್ಧವಿದೆ. ಹೀಗಾಗಿ ಅದರ ವಿರುದ್ಧ ಎಲ್ಲರೂ ಮಾತನಾಡುತ್ತಾರೆ. ಮೊದಲು ಮನುಸತಿಯಲ್ಲಿರುವ ಲೋಪಗಳನ್ನು ತಿದ್ದಿಕೊಳ್ಳಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣ್ಣ ಬಸವಣ್ಣ ಶ್ರೇಷ್ಠ ಬ್ರಾಹಣರಾಗಿದ್ದರು. ಹಿಂದೂ ಧರ್ಮದ ಕೆಲವೊಂದು ಅನಿಷ್ಠ ಪದ್ಧತಿ ಹಾಗೂ ಮೂಢನಂಬಿಕೆಯ ಬಗ್ಗೆ ಹೋರಾಟ ಮಾಡಿದರು. ಇದು ತಪ್ಪಾ? ಎಂದು ಪ್ರಶ್ನಿಸಿದರು.
ರಾಹುಲ್ಗಾಂಧಿ ಮನುಸ್ಮೃತಿಯ ಬಗ್ಗೆ ಮಾತನಾಡಿರುವ ಬಗ್ಗೆ ಅವರನ್ನು ಹಿಂದೂ ಧರ್ಮದಿಂದ ಉಚ್ಚಾಟನೆ ಮಾಡಬೇಕೆಂದು ಹಿಂದೂ ಸಂಸತ್ ಪ್ರಸ್ತಾಪಿಸಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಹುಲ್ ಗಾಂಧಿ ಹಿಂದೂ ಅಲ್ಲವೇ?, ಹಿಂದೂ ಸಂಸತ್ನ ಪ್ರಸ್ತಾವನೆ ರಾಜಕೀಯ ಪ್ರೇರಿತ ಇದಕ್ಕೆ ಯಾವುದೇ ಬೆಲೆ ಇಲ್ಲ ಎಂದರು.
ರಾಹುಲ್ ಗಾಂಧಿ ಕಾಶಿಯಿಂದ ಹಿಡಿದು ಎಲ್ಲಾ ದೇವಸ್ಥಾನಗಳಿಗೂ ಭೇಟಿ ನೀಡುತ್ತಾರೆ. ಹಿಂದೂಗಳ ಮೇಲೆ ಅವರಿಗೆ ಅಪಾರ ಗೌರವವಿದೆ. ಪ್ರಿಯಾಂಕ ಗಾಂಧಿ ಕೂಡ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಆದರೆ ಎಲ್ಲವನ್ನೂ ಸಾರ್ವಜನಿಕವಾಗಿ ಪ್ರಚಾರಕ್ಕೆ ಬಳಸಿಕೊಳ್ಳುವುದಿಲ್ಲ. ಕೆಲವರು ರಾಜಕೀಯವಾಗಿ ಧರ್ಮಾಚರಣೆ ಮಾಡುತ್ತಾರೆ ಎಂದು ಕಿಡಿಕಾರಿದರು.
ತೆರಿಗೆ ವಸೂಲಿಗೆ ಸಮಾನಾಂತರವಾಗಿ ರಾಜ್ಯಸರ್ಕಾರಗಳು ಪಾಲು ಕೇಳುವುದು ಅಪಮಾನಕಾರಿ ಎಂದು ಕೇಂದ್ರ ಸಚಿವ ಪೀಯುಷ್ ಗೋಯಲ್ ಹೇಳಿಕೆ ವೈಯಕ್ತಿಕ. ರಾಜ್ಯಸರ್ಕಾರ ಕೇಂದ್ರಕ್ಕೆ ನಾಲ್ಕೂವರೆ ಲಕ್ಷ ಕೋಟಿ ತೆರಿಗೆ ಪಾವತಿಸುತ್ತಿದೆ. ದಕ್ಷಿಣ ಭಾಗದಲ್ಲಿ ಎಲ್ಲಾ ರಾಜ್ಯಗಳು ಉತ್ತಮ ಅಭಿವೃದ್ಧಿ ಕಂಡಿವೆ. ಕುಟುಂಬ ಕಲ್ಯಾಣ ಯೋಜನೆಯ ಅಳವಡಿಕೆ ಸೇರಿದಂತೆ ನಾನಾ ಕ್ರಮಗಳಿಂದಾಗಿ ರಾಜ್ಯಗಳ ಪ್ರಗತಿ ಉತ್ತಮವಾಗಿದೆ. ಅಂದ ಮಾತ್ರಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡುವುದು ಸಮರ್ಥನೀಯವಲ್ಲ ಎಂದರು.
ಕೆಲವರು ರಾಜ್ಯಗಳಲ್ಲಿ ಜನಪರವಾದ ಉತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸದೆ ಹಿಂದೆ ಉಳಿದಿದೆ. ನಾವು ತೆರಿಗೆಯ ಎಲ್ಲಾ ಪಾಲನ್ನೂ ಕೊಡಿ ಎಂದು ಕೇಳುವುದಿಲ್ಲ. ಹಕ್ಕಿನ ಪ್ರತಿಪಾದನೆ ಮಾಡುತ್ತಿದ್ದೇವೆ. ಇದು ಸ್ವಾಭಾವಿಕ ಎಂದು ಹೇಳಿದರು.ದೆಹಲಿಯಲ್ಲಿ ದಲಿತ ಸಮುದಾಯದ ಸಚಿವರು ಪ್ರತ್ಯೇಕ ಸಭೆ ನಡೆಸುತ್ತಾರೆ ಎಂಬುದು ಕೇವಲ ವದಂತಿ. ಆ ರೀತಿಯಾದ ಯಾವುದೇ ಬೆಳವಣಿಗೆಯಿಲ್ಲ ಎಂದು ತಿಳಿಸಿದರು.