ಸಿದ್ಲಿಂಗು ಭಾಗ ಎರಡರಲ್ಲಿ ನಟ ಯೋಗಿ ಅವರಿಗೆ ಲವ್ ಪಾಠ ಹೇಳಿಕೊಡಲು ಟೀಚರ್ ಆಗಿ ಬಂದಿರುವುದು ನಟಿ ಸೋನು ಗೌಡ. ಈ ಸಿನಿಮಾದಲ್ಲಿ ಅಭಿನಯಿಸಿರುವುದಕ್ಕೆ ತುಂಬಾ ಖುಷಿಯಲ್ಲಿರುವ ಅವರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ತನ್ನ ಪಾತ್ರ ಮತ್ತು ಸಿನಿಮಾದ ಕುರಿತು ಒಂದಿಷ್ಟು ಮಾಹಿತಿಯನ್ನು ಈ ಸಂಜೆ ಪತ್ರಿಕೆಯೊಂದಿಗೆ ಹಂಚಿಕೊಂಡರು.
ಬೇರೆ ಎಲ್ಲಾ ಸಿನಿಮಗಳಿಗಿಂತಲೂ ಈ ಚಿತ್ರದಲ್ಲಿ ನನ್ನ ಲುಕ್ ಡಿಫರೆಂಟ್ ಆಗಿದೆ ಎಂದು ಮಾತು ಆರಂಭಿಸಿದ ಇವರು, ನಂದು ಟೀಚರ್ ಪಾತ್ರ, ಪಾತ್ರಕ್ಕೆ ತುಂಬಾ ತೂಕ ಇದೆ. ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ಮ್ಯಾನರಿಸಂನಿಂದ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಇರುತ್ತದೆ. ಅದು ಈ ಚಿತ್ರದಲ್ಲಾಗಿದೆ. ವಿಜಯ ಪ್ರಸಾದ್ ಸಿನಿಮಾಗಳಲ್ಲಿ ಡೈಲಾಗ್ ಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತದೆ ಅದೇ ರೀತಿ ನನ್ನ ಪಾತ್ರಕ್ಕೆ ಒಳ್ಳೆಯ ಡೈಲಾಗ್‌ಗಳಿವೆ ಎಂದರು.
ಮೊದಲ ಭಾಗದಲ್ಲಿ ಮಂಗಳ ಮೇಡಂ ಸಿದ್ಲಿಂಗು ಪಾತ್ರಕ್ಕೆ ಬೆಂಬಲವಾಗಿ ನಿಂತಿರ್ತಾಳೆ. ಇಬ್ಬರು ಪಾತ್ರಗಳು ಮೇಡ್ ಫಾರ್ ಈಚ್ ಅದರ್ ಅನ್ನೋ ರೀತಿ ಇವೆ. ಭಾಗ ಎರಡರಲ್ಲಿ ಮಂಗಳ ಮೇಡಂ ಬದಲಾಗಿ ನಿವೇದಿತ ಟೀಚರ್ ಎಂಟ್ರಿ ಆಗ್ತಾಳೆ. ಎಂಟ್ರಿ ಕೊಟ್ಟಾದ ಮೇಲೆ ಸಿದ್ದಿಂಗು ಲೈಫಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಎನ್ನುವುದು ಸಿನಿಮಾದ ಹೈಲೈಟ್. ನನ್ನ ಪಾತ್ರ ತುಂಬಾ ಪ್ರಾಮುಖ್ಯತೆಯನ್ನು ಹೊಂದಿದ್ದು, ಇದನ್ನು ನೋಡಿದ ಯೋಗಿ ಮತ್ತು ಅವರ ಪತ್ನಿ ನನ್ನ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ನನ್ನನ್ನು ಸಾಮಾನ್ಯವಾಗಿ ಇಂತಿ ನಿನ್ನ ಪ್ರೀತಿಯ, ಕಿರಿಗೂರಿನ ಗಯ್ಯಾಳಿಗಳು, ಗುಲ್ಬು ಹೀಗೆ ಆನೇಕ ಚಿತ್ರಗಳ ಮೂಲಕ ಸೋನು ಗೌಡ ಅವರನ್ನು ಗುರುತಿಸುತ್ತಾರೆ. ಆದರೆ ಸಿದ್ದಿಂಗು ಬಂದ ಮೇಲೆ ಎಲ್ಲರೂ ಸಿದ್ದಿಂಗು ಸೋನು ಎನ್ನುತ್ತಾರೆ. ಅಷ್ಟರಮಟ್ಟಿಗೆ ಕಥೆಯಲ್ಲಿ ನನ್ನ ಪಾತ್ರದ ಪ್ರಾಮುಖ್ಯತೆ ಇದೆ ಎಂದು ಸಿನಿಮಾದ ಮಾಹಿತಿ ಕೊಡುತ್ತಾರೆ.
ಕಥೆಯನ್ನು ಒಪ್ಪಿಕೊಂಡು ಮಾಡಿದ ಸಿನಿಮಾ ಇದು. ನಾನು ಬೇಕಾಬಿಟ್ಟಿ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ, ಅದರಿಂದ ಶ್ರಮ ಮತ್ತು ಸಮಯ ಎರಡು ವ್ಯರ್ಥ. ಯೋಚಿಸಿ ಪಾತ್ರ ಮಾಡಲು ಒಪ್ಪಿಕೊಳ್ಳುತ್ತೇನೆ. ಕೆಲವೊಮ್ಮೆ ಮುಲಾಜಿಗೆ ಕಟ್ಟು ಬೀಳಬೇಕಾಗುತ್ತದೆ. ಅದನ್ನು ಹೊರತುಪಡಿಸಿ ಕಥೆಗೆ ಪ್ರಾಮುಖ್ಯತೆ ಕೊಟ್ಟು ಸಿನಿಮಾ ಒಪ್ಪಿಕೊಳ್ಳುತ್ತೇನೆ. ಒಂದಿಷ್ಟು ಚಿತ್ರಗಳು ಕೈಯಲ್ಲಿ ಇವೆ. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರುವ ಆಸೆ ನನ್ನದು ಎನ್ನುತ್ತಾರೆ ಸೋನು ಗೌಡ.