ಬೆಂಗಳೂರು,ಫೆ.13- ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್ ಪಡೆದಿರುವ ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ನೀಡಿರುವ ಗಡುವು ಇಂದು ಸಂಜೆ ಮುಕ್ತಾಯವಾಗಲಿದ್ದು, ಅವರ ಉತ್ತರ ಏನೆಂಬುದು ಕುತೂಹಲಕ್ಕೆ ಕಾರಣವಾಗಿದೆ.
ನಾನು ನೋಟಿಸ್ ಉತ್ತರಿಸುವುದಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಆಗೊಂದು ವೇಳೆ ಅದು ನಿಜವಾದರೆ ಕೇಂದ್ರ ಬಿಜೆಪಿ ವರಿಷ್ಟರ ನಡೆಯ ಬಗ್ಗೆಯೂ ಸಾಕಷ್ಟು ಕುತೂಹಲ ಕೆರಳಿಸಲಿದೆ.
ಕಳದೆ ಸೋಮವಾರ ಯತ್ನಾಳ್‌ಗೆ ಬಿಜೆಪಿ ಕೇಂದ್ರ ಬಿಜೆಪಿ ಚುನಾವಣಾ ಶಿಸ್ತು ಸಮಿತಿ ಕಾರ್ಯದರ್ಶಿ ಓಂಪಾಠಕ್ ಅವರು, ಯತ್ನಾಳ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿ 12 ಗಂಟೆಯೊಳಗೆ ಉತ್ತರಿಸಬೇಕು. ಒಂದು ವೇಳೆ ಸಮರ್ಪಕ ಉತ್ತರ ನೀಡದಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳಲು ವರಿಷ್ಠರಿಗೆ ಸೂಚಿಸಿ ಎಚ್ಚರಿಕೆ ಕೊಟ್ಟಿದ್ದರು.
ಮೊದಲಿನಿಂದಲೂ ಯತ್ನಾಳ್ ಅವರು ಪಕ್ಷದ ಕೆಲ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಹೀಗಾಗಿ ಬಿಜೆಪಿ ಹೈಕಮಾಂಡ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಯಡಿಯೂರಪ್ಪ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ವಿವರಣೆಯನ್ನು ಹೈಕಮಾಂಡ್ ಕೇಳಲಾಗಿದೆ. ಖುದ್ದು ಹಾಜರಾಗಿ, ವಿವರಣೆ ನೀಡುವಂತೆ ನೋಟಿಸ್‌ನಲ್ಲಿ ಸೂಚನೆ ನೀಡಲಾಗಿತ್ತು.
ಈ ಹಿಂದೆಯೂ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಬಸವನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಟೀಕೆಗಳನ್ನು ಮಾಡುತ್ತಾ ಬಂದ ಯತ್ನಾಳ್ ಅವರ ವಿರುದ್ಧ ಕಳೆದ ವರ್ಷ ಡಿಸೆಂಬರ್ ನಲ್ಲಿಯೂ ಶಿಸ್ತುಪಾಲನಾ ಸಮಿತಿ ಮೊದಲ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಇದೀಗ ಮತ್ತೆ ಬಿಜೆಪಿ ಶಿಸ್ತು ಸಮಿತಿ ಎರಡನೇ ಶೋಕಸ್ ನೋಟಿಸ್ ನೀಡಿತ್ತು.
ಅದಕ್ಕೂ ಮುನ್ನವೂ ಜಾರಿಗೊಳಿಸಲಾಗಿದ್ದ ನೋಟಿಸ್‌ಗೆ ಯತ್ನಾಳ್ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ, ಅದಕ್ಕಾಗಿ ಈಗ ಮತ್ತೊಂದು ನೋಟಿಸ್ ಜಾರಿಗೊಳಿಸಲಾಗಿದೆ. ಈಗ ಯತ್ನಾಳ್ ಅವರು ಏನು ಮಾಡುತ್ತಾರೆ. ಶಿಸ್ತುಪಾಲನಾ ಸಮಿತಿಯ ಮುಂದೆ ಹಾಜರಾಗುತ್ತಾರೋ ಅಥವಾ ದೂರ ಉಳಿಯುತ್ತಾರೋ, ಹಾಗೊಂದು ವೇಳೆ ದೂರ ಉಳಿದರೆ ಬಿಜೆಪಿ ಹೈಕಮಾಂಡ್ ಯಾವ ಕ್ರಮ ಕೈಗೊಳ್ಳಲಿದೆ ಎಂಬಿತ್ಯಾದಿ ಕುತೂಹಲ ಮೂಡಿವೆ.
ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳು ತೀವ್ರಗೊಂಡಿವೆ. ಇತ್ತೀಚೆಗೆ, ಇಬ್ಬರೂ ನಾಯಕರು ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಇಟ್ಟಿದ್ದಾರೆ. ಅಸಲಿಗೆ ಯತ್ನಾಳ್ ಅವರು ಕರ್ನಾಟಕ ಬಿಜೆಪಿ ಮೇಲೆ ಯಡಿಯೂರಪ್ಪ ಹಾಗೂ ಅವರ ಪುತ್ರರ ಹಿಡಿತವನ್ನು ಸಡಿಲಿಸುವ ಇರಾದೆ ಹೋದಿದ್ದಾರೆ.
ಯತ್ನಾಳ್ ಹಾಗೂ ರೆಬೆಲ್ ತಂಡದ ಅಣತಿಯಿಂತೆ ಬಿಜೆಪಿ ಹೈಕಮಾಂಡ್ ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಸದ್ಯದಲ್ಲೇ ಚುನಾವಣೆ ನಡೆಸುವುದಾಗಿ ಹೇಳಿದೆ. ರಾಜ್ಯಧ್ಯಕ್ಷ ಚುನಾವಣೆಗೆ ಯತ್ನಾಳ್ ಬಣದ ಒಬ್ಬರು ನಿಲ್ಲುವುದು ಪಕ್ಕಾ ಆಗಿದೆ. ಅತ್ತ, ವಿಜಯೇಂದ್ರ ಹಾಗೂ ಅವರ ಆಪ್ತರ ಬಣದಲ್ಲಿ ಒಬ್ಬರು (ಪ್ರಾಯಶಃ ವಿಜಯೇಂದ್ರ ನಿಂತರೂ ಅಚ್ಚರಿಯಿಲ್ಲ) ಚುನಾವಣೆಗೆ ನಿಲ್ಲಬಹುದು, ಆದರೆ, ಯಾರೇ ನಿಂತರೂ ತಮ್ಮ ಅಭ್ಯರ್ಥಿಯ ಗೆಲ್ಲುತ್ತಾರೆ ಎಂದು ಯತ್ನಾಳ್ ತಿಳಿಸಿದ್ದಾರೆ.
ವಕ್ಫ್ ವಿವಾದದಲ್ಲೂ ಬಣ ರಾಜಕೀಯ
ವಕ್ಫ್ ಆಸ್ತಿ ವಿವಾದದ ಕುರಿತು, ಯತ್ನಾಳ್ ಅವರು ವಿಜಯೇಂದ್ರ ಅವರ ಅನುಮತಿ ಇಲ್ಲದೆ ಪ್ರತ್ಯೇಕ ಹೋರಾಟ ಆರಂಭಿಸಿದ್ದು, ಇದರಿಂದ ಪಕ್ಷದೊಳಗಿನ ಒಗ್ಗಟ್ಟಿನ ಪ್ರಶ್ನೆ ಎದುರಾಗಿದೆ. ಯತ್ನಾಳ್ ಅವರ ಈ ಕ್ರಮಕ್ಕೆ ಸ್ವಕ್ಷೇತ್ರ ವಿಜಯಪುರದಲ್ಲಿಯೇ ವಿರೋಧ ವ್ಯಕ್ತವಾಗಿದೆ. ಇದೇ ವೇಳೆ ಯತ್ನಾಳ್ ಬಣದ ನಾಯಕರು ವಕ್ಸ್ ವಿವಾದದ 2ನೇ ಹಂತದ ಹೋರಾಟಕ್ಕೆ ಸಿದ್ಧತೆ ನಡೆಸಿದ್ದು, ಈ ಕುರಿತು ಗೌಪ್ಯ ಸಭೆಗಳನ್ನು ನಡೆಸಿದ್ದಾರೆ. ಇದು ಪಕ್ಷದ ಅಂತರಿಕ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ಬೆಳವಣಿಗೆಗಳು ಕರ್ನಾಟಕ ಬಿಜೆಪಿ ಪಕ್ಷದ ಆಂತರಿಕ ಒಗ್ಗಟ್ಟಿಗೆ ಸವಾಲುಗಳನ್ನು ಉಂಟುಮಾಡುತ್ತಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳ ಮೇಲೆ ಗಮನ ಹರಿಸಲಾಗಿದೆ.
ಇದಕ್ಕೂ ಮುನ್ನ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಯಾವುದೇ ಪ್ರತಿಭಟನೆ ನಡೆಸಿದರೂ ಅದರಲ್ಲಿ ಯತ್ನಾಳ್ ಬಣ ಪಾಲ್ಗೊಳ್ಳದೇ ತಾವೇ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲು ಮುಂದಾಗುವ ಮೂಲಕ ವಿಜಯೇಂದ್ರ ಅವರ ನಾಯಕತ್ವಕ್ಕೆ ಸಡ್ಡು ಹೊಡೆದಿದೆ.
ಸಿದ್ದರಾಮಯ್ಯನವರ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ನಾಯಕತ್ವದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ನಾಯಕರು ಪಾದಯಾತ್ರೆ ನಡೆಸಿದ್ದಾಗ ಅದರಲ್ಲಿ ಯತ್ನಾಳ್ ಭಾಗವಹಿಸಿರಲಿಲ್ಲ. ಅವರ ಜೊತೆಗೆ ಬಿಜೆಪಿಯ ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ, ಅರವಿಂದ ಲಿಂಬಾವಳಿ ಮುಂತಾದ ನಾಯಕರು ಇದ್ದಾರೆ.