Wednesday, March 12, 2025
Homeರಾಜ್ಯಮೆಟ್ರೋ ಪ್ರಯಾಣದರ ಮರು ಪರಿಷ್ಕರಣೆ ಮಾಡುವಂತೆ ಬಿಎಂಆರ್‌ಸಿಎಲ್‌ಗೆ ಸೂಚನೆ

ಮೆಟ್ರೋ ಪ್ರಯಾಣದರ ಮರು ಪರಿಷ್ಕರಣೆ ಮಾಡುವಂತೆ ಬಿಎಂಆರ್‌ಸಿಎಲ್‌ಗೆ ಸೂಚನೆ

CM instructs BMRCL to revise metro fares

ಬೆಂಗಳೂರು, ಫೆ.13- ಮೆಟ್ರೋ ಪ್ರಯಾಣದರ ಏರಿಕೆಗೆ ಸಾರ್ವಜನಿಕರ ಆಕ್ರೋಶಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದರ ಮರು ಪರಿಷ್ಕರಣೆ ಮಾಡುವಂತೆ ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಮುಖ್ಯಮಂತ್ರಿಯವರು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ.

ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಅವರಿಗೆ ಸೂಚನೆ ನೀಡಿದ್ದಾರೆ.

ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ.

ಎಚ್ಚೆತ್ತುಕೊಂಡ ಸರ್ಕಾರ :
ಬೆಂಗಳೂರಿನ ಸಾರಿಗೆ ವ್ಯವಸ್ಥೆಗಳಲ್ಲಿ ಮೆಟ್ರೊ ಪ್ರಮುಖ ಭಾಗವಾಗಿದೆ. ದಿನವೊಂದಕ್ಕೆ 8 ರಿಂದ 9 ಲಕ್ಷ ಜನ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದು, ಬಿಎಂಆರ್‌ಸಿಎಲ್ 2.50 ಕೋಟಿ ರೂ.ನಷ್ಟು ಆದಾಯ ಗಳಿಸುತ್ತಿತ್ತು. ಅವೈಜ್ಞಾನಿಕವಾದ ಪ್ರಯಾಣದರ ಏರಿಕೆಯಿಂದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಮೆಟ್ರೊ ಪ್ರಯಾಣದಿಂದ ವಿಮುಖರಾಗಿದ್ದಾರೆ.

ಮೆಟ್ರೊ ಪ್ರಯಾಣದರಕ್ಕೆ ಅನುಗುಣವಾಗಿ ಪೆಟ್ರೋಲ್ ಖರ್ಚಿನಲ್ಲಿ ಸ್ವಂತ ವಾಹನದಲ್ಲೇ ಪ್ರಯಾಣಿಸಬಹುದು ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಹೀಗಾಗಿ ಖಾಸಗಿ ವಾಹನಗಳ ಸಂಖ್ಯೆ ಏಕಾಏಕಿ ಹೆಚ್ಚಾಗಿದ್ದು, ಸಂಚಾರದಟ್ಟಣೆ ತೀವ್ರವಾಗಿದೆ.

ಇತ್ತ ಮೆಟ್ರೊಗೆ ಸುಮಾರು 2 ಲಕ್ಷದಷ್ಟು ಪ್ರಯಾಣಿಕರ ಸಂಖ್ಯೆ ತಗ್ಗಿದ್ದು, 1 ಕೋಟಿ ರೂ.ನಷ್ಟು ದೈನಂದಿನ ಆದಾಯ ಖೋತಾ ಆಗುತ್ತಿದೆ. ಇದನ್ನು ಗಮನಿಸಿದ ಮುಖ್ಯಮಂತ್ರಿಯವರು ಮಧ್ಯ ಪ್ರವೇಶ ಮಾಡಿ ದರ ಪರಿಷ್ಕರಣೆ ಮಾಡುವಂತೆ ಸೂಚನೆ ನೀಡಿದ್ದಾರೆ.

ದೇಶದ ಯಾವುದೇ ಪ್ರಮುಖ ನಗರಗಳ ಮೆಟ್ರೊಗಿಂತಲೂ ಬೆಂಗಳೂರಿನ ನಮ್ಮ ಮೆಟ್ರೊದ ಪ್ರಯಾಣದರ 2-3 ಪಟ್ಟು ಹೆಚ್ಚಾಗಿತ್ತು. ಸಾಮಾನ್ಯವಾಗಿ ಸರಾಸರಿ 45 ರಷ್ಟು ಪ್ರಮಾಣದಲ್ಲಿ ಪ್ರಯಾಣದರ ಹೆಚ್ಚು ಮಾಡುವುದಾಗಿ ಬಿಎಂಆರ್‌ಸಿಎಲ್ ತಿಳಿಸಿದೆ. ಆದರೆ ಕೆಲವೆಡೆ ಪ್ರಯಾಣದರ ದುಪ್ಪಟ್ಟಾಗಿದೆ ಎಂಬ ಆಕ್ರೋಶ ಕೇಳಿಬಂದಿದ್ದವು.

ಹೀಗಾಗಿ ದರ ಪರಿಷ್ಕರಣೆಯಲ್ಲಿ ಅವೈಜ್ಞಾನಿಕ ನಿಯಮ ಪಾಲನೆಯಾಗಿದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಯವರು ಮಧ್ಯ ಪ್ರವೇಶ ಮಾಡಿದ್ದಾರೆ. ಕಳೆದ ಜನವರಿಯಲ್ಲಿ ನಾಲ್ಕು ಸಾರಿಗೆ ನಿಗಮಗಳ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಲಾಗಿತ್ತು. ಕೇವಲ ಒಂದು ತಿಂಗಳ ಅಂತರದಲ್ಲೇ ಮೆಟ್ರೊ ಪ್ರಯಾಣ ದರ ನಾಗರಿಕರಿಗೆ ಮರ್ಮಾಘಾತ ನೀಡಿದೆ.

    RELATED ARTICLES

    Latest News