ಪಾಟ್ನಾ,ಫೆ.14- ಗಂಡ ಮಾಡಿದ್ದ ಸಾಲದ ವಸೂಲಿಗೆ ಬರುತ್ತಿದ್ದ ಲೋನ್ ಏಜೆಂಟ್ನೊಂದಿಗೆ ಪ್ರೀತಿ ಅಂಕುರವಾಗಿ ಪತ್ನಿ ಗಂಡ ಬಿಟ್ಟು ಓಡಿ ಹೋಗಿರುವ ಆತನೊಂದಿಗೆ ವಿವಾಹವಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ವಿಶೇಷವೆಂದರೆ ಲೋನ್ ಏಜೆಂಟ್‌ನ ಕುಟುಂಬ ಈ ಮದುವೆಗೆ ಸಮ್ಮತಿ ಸೂಚಿಸಿದೆ. ಮಹಿಳೆಯ ಕುಟುಂಬ ಇದನ್ನು ವಿರೋಧಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಏನಿದು ಪ್ರಕರಣ..?:
ಬಿಹಾರದ ಜಮುಯಿ ಜಿಲ್ಲೆಯ ನಿವಾಸಿ ನಕುಲ್ ಶರ್ಮಾ ಎಂಬಾತ ಇಂದಿರಾ ಕುಮಾರಿಯನ್ನು 2022ರಲ್ಲಿ ಮದುವೆಯಾಗಿದ್ದು, ಮದುವೆ ಆರಂಭದಲ್ಲಿ ಚೆನ್ನಾಗಿದ್ದ ನಕುಲ್, ನಂತರದ ದಿನಗಳಲ್ಲಿ ಕುಡಿದು ಬಂದು ಗಲಾಟೆ ಮಾಡಲು ಶುರು ಮಾಡಿದ್ದ. ಕುಡಿತದ ದಾಸನಾಗಿದ್ದ ನಕುಲ್ ಒಂದಷ್ಟು ಸಾಲ ಮಾಡಿ, ಹೆಂಡತಿಗೆ ಚಿತ್ರ ಹಿಂಸೆ ನೀಡುತ್ತಿದ್ದ.
ಇತ್ತ ಹಣಕಾಸು ಸಂಸ್ಥೆಯ ಲೋನ್ ಏಜೆಂಟರ್‌ಗಳು ಸಾಲ ವಸೂಲಿಗಾಗಿ ಮನೆಗೆ ಬರಲು ಆರಂಭಿಸಿದ್ದರು. ಹೀಗೆ ಹಣ ವಸೂಲಿಗೆ ಬರುತ್ತಿದ್ದ ಪವನ್ ಕುಮಾರ್ ಎಂಬಾತನೊಂದಿಗೆ ಸಲುಹೆ ಬೆಳೆದು ಪ್ರೇಮಾಂಕುರವಾಗಿದೆ. ಕೊನೆಗೆ ಇಂದಿರಾ ಪತಿಯನ್ನು ಬಿಟ್ಟು ಲೋನ್ ಏಜೆಂಟ್ ನನ್ನು ಮದುವೆಯಾಗಲು ನಿರ್ಧರಿಸಿ ಮನೆ ಬಿಟ್ಟು ಓಡಿ ಹೋಗಿದ್ದಳು.
ವಿಮಾನದ ಮೂಲಕ ಪಶ್ಚಿಮ ಬಂಗಾಳದ ಆಸಾನ್ಸೆಲ್‌ಗೆ ಪರಾರಿಯಾಗಿದ್ದ ಈಕೆ ಫೆಬ್ರವರಿ 11ರಂದು ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ. ಮದುವೆ ನಂತರ ಇಬ್ಬರು ಜಮುಯಿಗೆ ಮರಳಿದ್ದಾರೆ.