ಹೂವಿನಹಡಗಲಿ,ಫೆ.15- ತುಂಬಿದಕೊಡ ತುಳುಕೀತಲೇ ಪರಾಕ್ ಇದು ನಾಡಿನ ಸುಪ್ರಸಿದ್ದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪ್ರಸಕ್ತ ವರ್ಷದ ದೈವವಾಣಿ ಕಾರ್ಣಿಕರ ನುಡಿ. ಮೈಲಾರ ಸುಕ್ಷೇತ್ರದ ಡೆಂಕನಮರಡಿಯಲ್ಲಿ ರಾಜ್ಯ-ಹೊರ ರಾಜ್ಯದ ಹಲವೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಭವಿಷ್ಯವಾಣಿ ಅನುರಣಿಸಿತು. ಕಳೆದ 11 ದಿನಗಳ ಉಪವಾಸ ವ್ರತ ಆಚರಿಸಿದ ಗೊರವಪ್ಪ ಅವರನ್ನು ಡೆಂಕನಮರಡಿಯ ಸಿಂಹಾಸನ ಕಟ್ಟೆಯಿಂದ ಕಾರ್ಣಿಕದ ಸ್ಥಳಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು.
ದೇಗುಲದ ವಂಶಪಾರಂಪರ್ಯ ಧರ್ಮಕರ್ತ ಗುರುವೆಂಕಪ್ಪಯ್ಯ ಒಡೆಯರ್, ಅಶ್ವಾರೂಢರಾಗಿ ಡೆಂಕನಮರಡಿಗೆ ಬರುತ್ತಿದ್ದಂತೆಯೇ ಏಳು ಕೋಟಿ ಏಳು ಕೋಟಿಗೋ ಛಾಂಗ್ಲಲೋ… ಎಂಬ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಧರ್ಮಕರ್ತ ವೆಂಕಪ್ಪಯ್ಯ ಒಡೆರ್ಯ ಅವರಿಂದ ಭಂಡಾರದ ಆಶೀರ್ವಾದ ಪಡೆದ ಗೊರವಪ್ಪ, ಸಂಪ್ರದಾಯ ಮತ್ತು ಪರಂಪರೆಯ ಸಂಕೇತವಾಗಿರುವ 15 ಅಡಿ ಎತ್ತರದ ಬಿಲ್ಲನ್ನು ಏರಿ, ಕೆಲ ಕ್ಷ ಣ ಆಕಾಶದತ್ತ ಶೂನ್ಯವನ್ನು ದಿಟ್ಟಿಸಿ ಸದ್ದಲೇ… ಎಂದಾಗ ಇಡೀ ಭಕ್ತ ಸಮೂಹದಲ್ಲಿ ನಿಶಬ್ದ ವಾತಾವರಣ ಮೂಡಿತು. ಈ ಸಂದರ್ಭದಲ್ಲಿ ತುಂಬಿದಕೊಡ ತುಳುಕೀತಲೇ ಪರಾಕ್ ಬಿ ಎಂಬ ದೈವವಾಣಿ (ಕಾರ್ಣಿಕ) ನುಡಿದ ಗೊರವಪ್ಪನವರು ಕೆಳಕ್ಕೆ ಬಿದ್ದರು.
ಪ್ರಸಕ್ತ ಕಾರ್ಣಿಕ ನುಡಿಯ ಕುರಿತು ಜಾತ್ರೆಗೆ ಆಗಮಿಸಿದ್ದ ಭಕ್ತರು, ನಾನಾ ರೀತಿಯಲ್ಲಿ ವಿಶ್ಲೇಷಿಸಿದರು. ಈ ದೈವವಾಣಿ ಕೃಷಿ, ಸಾಮಾಜಿಕ ಬದುಕಿನ ಮೇಲೆ ಭವಿಷ್ಯವನ್ನು ಸೂಚಿಸುತ್ತದೆ. ಮಳೆ, ಬೆಳೆ ಉತ್ತಮವಾಗಿದ್ದರೂ ಕೊನೆಯ ಹಂತದಲ್ಲಿ ರೈತರಿಗೆ ಹಾನಿ ಆಗಬಹುದು. ರೈತರಿಗೆ ಸಂಕಷ್ಟ ಹೆಚ್ಚಬಹುದು. ಸಾವು ನೋವುಗಳು ಹೆಚ್ಚುವ ಸಾಧ್ಯತೆ ಇದ್ದು, ಪ್ರಮುಖವಾಗಿ ಗರ್ಭಿಣಿಯರು ಎಚ್ಚರದಿಂದ ಇರಬೇಕು ಎಂದು ಕಾರ್ಣಿಕ ನುಡಿ ಆಲಿಸಲು ಆಗಮಿಸಿದ್ದ ಹಿರಿಯರು ವಿಶ್ಲೇಷಣೆ ಮಾಡುತ್ತಿದ್ದರು.
ಕಾರ್ಣಿಕೋತ್ಸವದಲ್ಲಿ ಕಾಗಿಲೆನ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹಿರೇಹಡಗಲಿ ಸ್ವಾಲಸ್ವಾಮೀಜಿ, ಶಾಸಕ ಕೃಷ್ಣನಾಯ್ಕ, ಸಂಸದ ತುಕರಾಮ್, ದೇವಸ್ಥಾನ ಧರ್ಮದರ್ಶಿ ವೆಂಕಪ್ಪ ಒಡೆಯರ್, ಆನಂದ ಗಡ್ಡದೇವರ ಮತ್, ಜಿಲ್ಲಾಧಿಕಾರಿ ಎಂ.ದಿವಾಕರ್, ಎಸ್ಪಿ ಶೂಹರಿಶ್ ಬಾಬು, ದಾವಣಗೆರೆ ವಿಭಾಗ ಐಜಿಪಿ ಲೋಕೇಶ್, ತಹಸೀಲ್ದಾರ್ ಸಂತೋಷ್ ಕುಮಾರ್, ತಾ.ಪಂ ಇಒ ಉಮೇಶ್, ಧಾರ್ಮಿಕ ದತ್ತಿ ಇಲಾಖೆ ಇಒ ಹನುಮಂತಪ್ಪ, ಪ್ರಕಾಶ್ ರಾವ್, ಸೋಮಣ್ಣ ಜಗೀನ್ ಸೇರಿದಂತೆ ಲಂಕ್ಷಾಂತರ ಭಕ್ತರು ಕಾರ್ಣಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.