ಬೆಂಗಳೂರು,ಫೆ.15- ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಉದ್ದೇಶಪೂರಕವಾದ ವಿಧ್ವಂಸಕ ದ್ರೋಹವನ್ನು ಮರೆಮಾಚಲು ಕೇಂದ್ರ ಸಚಿವರುಗಳು ಸುಳ್ಳು ಮಾಹಿತಿಗಳನ್ನು ಬಿತ್ತುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.ಕೇಂದ್ರ ಸರ್ಕಾರದ ತೆರಿಗೆ ಅನ್ಯಾಯದ ಜೊತೆಗೆ ಜಲಜೀವನ್ ಮಿಷನ್ ಯೋಜನೆಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ಬಗ್ಗೆಯೂ ಸವಿಸ್ತಾರವಾದ ವಿವರಣೆ ನೀಡಿದ್ದಾರೆ.
ಕೇಂದ್ರ ಸಚಿವ ವಿ.ಸೋಮಣ್ಣ ಕೇಂದ್ರ ಸರ್ಕಾರದ ಲೋಪಗಳನ್ನು ಮುಚ್ಚಿಕೊಳ್ಳಲು ಸುಳ್ಳು ಆರೋಪ ಮಾಡುತ್ತಿದ್ದಾರೆ.ವಾಸ್ತವಾಂಶದಲ್ಲಿ ಕೇಂದ್ರ ಸರ್ಕಾರ ತನ್ನ ಬದ್ಧತೆಯಲ್ಲಿ ಅರ್ಧದಷ್ಟು ಅನುದಾನವನ್ನೂ ಕೂಡ ಜಲಜೀವನ್ ಮಿಷನ್‌ಗೆ ಬಿಡುಗಡೆ ಮಾಡಿಲ್ಲ ಎಂದು ದೂರಿದ್ದಾರೆ.ಜಲಜೀವನ್ ಮಿಷನ್ ಯೋಜನೆಗಾಗಿ ಕೇಂದ್ರ ಸರ್ಕಾರದ 26.119 ಕೋಟಿ ರೂ. ರಾಜ್ಯ ಸರ್ಕಾರದ 23,142 ಕೋಟಿ ರೂ. ಸೇರಿ ಒಟ್ಟು 49,562 ಕೋಟಿ ರೂ.ಗಳು ನಿಗದಿಯಾಗಿದೆ. ಅದರಲ್ಲಿ ಈವರೆಗೂ ಕೇಂದ್ರ ಸರ್ಕಾರ 11,760 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಕೇಂದ್ರದ ಪಾಲಿನ ಪೈಕಿ ಶೇ.45 ರಷ್ಟು ಮಾತ್ರ ಎಂದು ವಿವರಿಸಿದ್ದಾರೆ.
ರಾಜ್ಯಸರ್ಕಾರ 20,442 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. 23,142 ಕೋಟಿ ರೂ.ಗಳ ಪಾಲಿನಲ್ಲಿ ಈಗ ಬಿಡುಗಡೆಯಾಗಿರುವ ಹಣ ಶೇ.83.3ರಷ್ಟಾಗುತ್ತದೆ. ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಯೋಜನೆಯನ್ನು ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ ರಾಜ್ಯಸರ್ಕಾರ ಅತೀ ಹೆಚ್ಚು ಖರ್ಚು ಮಾಡುತ್ತಿದೆ. ಹಣ ನೀಡದೇ ಕೇಂದ್ರಸರ್ಕಾರ ಈ ಯೋಜನೆಗೆ ಅನ್ಯಾಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.
ಕೇಂದ್ರ ಬಿಡುಗಡೆ ಮಾಡಿದ ಪ್ರತಿ ರೂಪಾಯಿ ಹಣವನ್ನು ಕರ್ನಾಟಕ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡುತ್ತಿದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಅನುದಾನವನ್ನು ತಡೆಹಿಡಿಯುತ್ತಿದ್ದು ರಾಜ್ಯಕ್ಕೆ ಹಕ್ಕಿನ ಪಾಲನ್ನು ನೀಡಲು ನಿರಾಕರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2024-25ನೇ ಸಾಲಿನ ಹಣಕಾಸು ವರ್ಷದಲ್ಲೂ ಈ ನಿರ್ಲಕ್ಷ್ಯ ಮುಂದುವರೆದಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನಿಗದಿ ಮಾಡಿದ್ದು 3,804 ಕೋಟಿ ರೂ.. ಬಿಡುಗಡೆ ಮಾಡಿದ್ದು 570 ಕೋಟಿ ರೂ. ಹಲವಾರು ಪತ್ರ ಬರೆದು ಮನವಿ ಮಾಡಿದರೂ ಉಳಿದ ಹಣ ಬಿಡುಗಡೆಯಾಗಿಲ್ಲ. ಇದಕ್ಕೆ ಪ್ರತಿಯಾಗಿ ಕರ್ನಾಟಕ ತನ್ನ ಬಜೆಟ್‌ನಿಂದ 7,652 ಕೋಟಿ ರೂ.ಗಳ ಅನುದಾನದ ಪೈಕಿ 4,977 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ.
ಇದು ಕರ್ನಾಟಕಕ್ಕೆ ಮಾತ್ರ ಆಗುತ್ತಿರುವ ಅನ್ಯಾಯವಲ್ಲ, ಬಿಜೆಪಿ ರಾಷ್ಟ್ರಮಟ್ಟದಲ್ಲಿ ವೈಫಲ್ಯವಾಗಿದೆ. ದೇಶಾದ್ಯಂತ ಜಲಜೀವನ್ ಮಿಷನ್‌ಗಾಗಿ 70,163 ಕೋಟಿ ರೂ. ನಿಗದಿಯಾಗಿತ್ತು. ಯೋಜನೆಯನ್ನು ಪುನರ್ ಪರಿಶೀಲನೆ ಮಾಡಿ 22,694 ಕೋಟಿ ರೂ.ಗಳನ್ನು ಕಡಿತ ಮಾಡಲಾಗಿದೆ.
ಮೋದಿ ಸರ್ಕಾರ ಜಲಜೀವನ್ ಮಿಷನ್ ಯೋಜನೆಯನ್ನು ಯೋಜನಾಬದ್ಧವಾಗಿ ನಾಶ ಮಾಡುತ್ತಿದೆ. ಆದರೆ ಸೋಮಣ್ಣ ಅವರಂತಹ ಸಚಿವರು ನಾಚಿಕೆ ಬಿಟ್ಟು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಬಗ್ಗೆ ಮಾತನಾಡುವ ಸೋಮಣ್ಣ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮೊದಲು ಪ್ರಶ್ನೆ ಮಾಡಿ ನಮ್ಮ ರಾಜ್ಯಕ್ಕೆ ಹಣ ನೀಡುವ ವಿಚಾರದಲ್ಲಿ ಏಕೆ ವಂಚನೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸುವಂತೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಿಜೆಪಿಯ ವಿಧ್ವಂಸಕತೆಯ ಹೊರತಾಗಿಯೂ ನಾಡಿನ ಪ್ರತಿಯೊಂದು ಮನೆಗೂ ಸುರಕ್ಷಿತ ಕುಡಿಯುವ ನೀರನ್ನು ಪೂರೈಸುವ ಬದ್ದತೆಯನ್ನು ಖಾತ್ರಿ ಪಡಿಸುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಮಲತಾಯಿ ಧೋರಣೆಯನ್ನು ಮುಂದುವರೆಸುತ್ತಲೇ ಇದೆ ಎಂದು ಹೇಳಿದರು.