ಬೆಂಗಳೂರು, ಫೆ.15 – ಜಮೀನು ವಿಚಾರಕ್ಕೆ ರಕ್ತ ಸಂಬಂಧಿಕರೇ ಜೆಸಿಬಿ ಮಾಲೀಕನನ್ನು ಹೊಡೆದು ಕೊಲೆಮಾಡಿ ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಟ್ಟಸಂದ್ರದ ನಿವಾಸಿ ವೇಣುಗೋಪಾಲರೆಡ್ಡಿ(38) ಕೊಲೆಯಾದ ಜೆಸಿಬಿ ಮಾಲೀಕರು. ಜಮೀನು ವಿಚಾರಕ್ಕೆ ನಿನ್ನೆ ಸಂಜೆ ವೇಣುಗೋಪಾಲರೆಡ್ಡಿ ಜೊತೆ ಸಂಬಂಧಿಕರಾದ ಅಪ್ಪ-ಮಗ ಸೇರಿಕೊಂಡು ಜಗಳವಾಡಿದ್ದಾರೆ.
ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ಕೈ-ಕೈಮಿಲಾಯಿಸುವ ಹಂತಕ್ಕೆ ಹೋಗಿದೆ. ಆ ವೇಳೆ ಅಪ್ಪ-ಮಗ ಕೈಗೆ ಸಿಕ್ಕಿದ ಮಚ್ಚು ಮತ್ತು ಸಲಾಕೆಯಿಂದ ವೇಣುಗೋಪಾಲರೆಡ್ಡಿ ಮೇಲೆ ಮನಬಂದಂತೆ ತಲೆ, ಕೈ-ಕಾಲು ಹಾಗೂ ಇನ್ನಿತರ ದೇಹದ ಭಾಗಗಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸುದ್ದಿ ತಿಳಿದು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಸೆಂಟ್‌ಜಾನ್ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಅಪ್ಪ-ಮಗನಿಗಾಗಿ ಶೋಧ ನಡೆಸುತ್ತಿದ್ದಾರೆ.