ಬೆಂಗಳೂರು,ಫೆ.15- ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕೆಲವು ಪುಂಡರು ನಡೆಸಿದ ಕೃತ್ಯವು ಪೂರ್ವ ನಿಯೋಜಿತ ಎಂದು ಗಂಭೀರ ಆರೋಪ ಮಾಡಿರುವ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಪ್ರಚೋದನಕಾರಿ ಭಾಷಣ ಮಾಡಿದ ಮುಲ್ಲಾನನ್ನು ಏಕೆ ಬಂಧಿಸಿಲ್ಲ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಮಾಜಿ ಸಚಿವ ಅಶ್ವತ್ಥನಾರಾಯಣ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆಸಿರುವ ದುಷ್ಕೃತ್ಯ ಏಕಾಏಕಿ ನಡೆದಿಲ್ಲ. ಇದು ಪೂರ್ವನಿಯೋಜಿತ ಕೃತ್ಯ. ಈ ಗಲಭೆಗೆ ಪ್ರಚೋದನಕಾರಿ ಭಾಷಣ ಮಾಡಿದ ಮುಲ್ಲಾನನ್ನು ಬಂಧಿಸದೆ ಇರುವುದು ಹಲವು ಅನುಮಾನಗಳಿಗೆ ಎಡ ಮಾಡಿಕೊಟ್ಟಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಕಲ್ಲು ಹೊಡೆದವರು ಸಣ್ಣ ಮಕ್ಕಳು ಎಂದಿದ್ದಾರೆ. ಅವರೇನು ಬೇಬಿ ಸಿಟ್ಟಿಂಗ್ ನವರಾ? ಕಾಂಗ್ರೆಸ್ ನವರು ಮುಸ್ಲಿಮರ ಭಿಕ್ಷೆಯಲ್ಲಿದ್ದಾರೆ. ಋಣ ತೀರಿಸಲು ಕಾಂಗ್ರೆಸ್ ನವರು ಹೀಗೆ ಮಾಡಿದ್ದಾರೆ. ಮೈಸೂರಿನಲ್ಲಿ ಭಗವಾನ್ ರಾಮನನ್ನು ಬೈಯುತ್ತಾನೆ. ಅವನಿಗೆ ಭಗವಾನ್ ಅಂತಾ ಹೆಸರು ಯಾರು ಇರಿಸಿದರು ಗೊತ್ತಿಲ್ಲ. ಹಿಂದೂಗಳು ಯಾವತ್ತಾದರೂ ಹೋಗಿ ಪೊಲೀಸ್ ಠಾಣೆ ಸುಟ್ಟಿದ್ದಾರಾ? ಮೈಸೂರು ಘಟನೆಯಲ್ಲಿ ಕೊನೆಗೆ ಪೊಲೀಸರೇ ಸಸ್ಪೆಂಡ್ ಆಗುತ್ತಾರೆ. ರಾಜ್ಯದಲ್ಲಿ ಮುಂದೆ ಏನಾದರೂ ಗಲಾಟೆ ಆದರೆ ಕಾಂಗ್ರೆಸ್ ನವರೇ ಕಾರಣ ಎಂದರು.
ಆರ್ ಎಸ್ ಎಸ್ ನವರೇ ವೇಷ ಧರಿಸಿ ಬಂದಿದ್ದರು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಒಂದೇ ದಿನದಲ್ಲಿ ಅಷ್ಟು ಗಡ್ಡ ಬಿಟ್ಟುಕೊಂಡು ಹೇಗೆ ಬರಲು ಸಾಧ್ಯ? ಕಾಂಗ್ರೆಸ್ ನವರು ಏನು ಹುಚ್ಚರಾ? ಸಿಸಿಟಿವಿಯಲ್ಲಿ ಯಾವ ಆರ್ ಎಸ್ ಎಸ್ ನವರು ಬಂದಿದ್ದಾರೆ ಅಂತಾ ಕಾಂಗ್ರೆಸ್ ನವರು ತೋರಿಸಲಿ. ಎಲ್ಲಾ ಕಾಣುತ್ತಿರೋದು ಅದೇ ದಾಡಿಗಳೇ ಎಂದು ಹೇಳಿದರು.
ಆರ್.ಎಸ್ ಎಸ್ ಅವರೇ ಗಲಭೆ ಮಾಡಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಅಷ್ಟೊಂದು ಗಡ್ಡ ಎಲ್ಲಿಂದ ಬರುತ್ತದೆ. ಅಷ್ಟೊಂದು ಪೈಜಾಮ ಹಾಕೊಂಡು ಎಲ್ಲಿ ಬರ್ತಾರೆ…? ಟೋಪಿಗಳು ಎಲ್ಲಿ ಸಿಗುತ್ತವೆ. ಅಷ್ಟು ಬೇಗ ಗಡ್ಡ ಬಂದು ಬೀಡುತ್ತಾ..? ಗಡ್ಡಕ್ಕೆ ಶೇವ್ ಮಾಡಿಕೊಂಡು ಅಷ್ಟೊಂದು ಜನ ಬರಲು ಸಾಧ್ಯವಾ? ಸುಮ್ಮನೆ ಆರೋಪ ಮಾಡುವುದು ಕಾಂಗ್ರೆಸ್ ಕೆಲಸವಾಗಿದೆ ಎಂದು ದೂರಿದರು.
ಮಾಜಿ ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಮುಚ್ಚುವ ಭಾಗ್ಯ ಜಾರಿ ಮಾಡುತ್ತಿದೆ. ಮನೆ ಹಾಳು ಸರ್ಕಾರ ಮಾರಿ ಕಣ್ಣು ಹೋರಿ ಮೇಲೆ ಅನ್ನುವ ಹಾಗೆ ಸಿದ್ದರಾಮಯ್ಯ ಕಣ್ಣು ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದೆ ಎಂದು ಕಿಡಿಕಾರಿದರು.
ಮಂಡ್ಯ ವಿಶ್ವವಿದ್ಯಾಲಯ ಮುಚ್ಚಿ ಜಲಕ್ರೀಡೆ ಮಾಡಲು ಹೊರಟ್ಟಿದ್ದಾರೆ. ಅದಕ್ಕೆ ಒಂದು ಸಾವಿರ ಕೊಡಲು ಸಿದ್ಧರಿದ್ದಾರೆ. ರೈತರ ಮಕ್ಕಳು ಓದಲು ಹೋಗುತ್ತಾರೆ. ಮೈಸೂರು. ಬೆಂಗಳೂರು ಕಡೆ ವಿದ್ಯಾರ್ಥಿಗಳು ಹೋಗುತ್ತಿದ್ದರು. ಹೀಗಾಗಿ ಮಂಡ್ಯದಲ್ಲಿ ವಿವಿ ಮಾಡಲಾಗಿತ್ತು. ಇದೀಗ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಲು ಸರ್ಕಾರ ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಿಷತ್ ಪ್ರತಿಪಕ್ಷ ನಾಯಕ ಛಲವಾಧಿ ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿ ಅವಧಿಯಲ್ಲಿ ವಿವಿ ಆಗಿದೆ ಎಂದು ಮುಚ್ಚಲು ಹೊರಟಿದ್ದಾರೆ. ಅಂಬೇಡ್ಕರ್ ಸಂವಿಧಾನ ಪ್ರಕಾರ ಪ್ರತಿಯೊಬ್ಬರಿಗೂ ಶಿಕ್ಷಣ ಮುಖ್ಯ. ಆದರೆ ಯುವಕರ ಶಿಕ್ಷಣದಲ್ಲಿ ವಂಚಿತ ಮಾಡಲು ಹೋಗಿದ್ದಾರೆ. ಸರ್ಕಾರ ಇರೋದು ರಿಯಲ್ ಎಸ್ಟೇಟ್ ಮಾಡಲು. ಇದಕ್ಕೆ ಶಿಕ್ಷಣ, ಆರೋಗ್ಯ ಇದ್ಯಾವುದು ಮುಖ್ಯ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಡವರಿಗೆ ಜನೌಷಧಿ ತೆರೆಯಲು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಇದನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಅವಶ್ಯಕತೆ ಇರುವ ಕಡೆ ಮತ್ತಷ್ಟು ವಿವಿಗಳನ್ನ ತೆಗೆಯಿ ಅದನ್ನ ಬಿಟ್ಟು ವಿವಿಗಳನ್ನು ಮುಚ್ಚಲು ಹೋಗಬೇಡಿ. ನಾವು ಕಟ್ಟುವುದು, ಕಾಂಗ್ರೆಸ್ ಡೆಮಾಲಿಸ್ ಮಾಡುವುದು. ಇದೊಂದು ರೀತಿ ಡೆಮಾಲಿಸ್ ಸರ್ಕಾರವಾಗಿದೆ ಎಂದು ಕಿಡಿಕಾರಿದರು.
ವ್ಯಾಪರ ಆಗುತ್ತಿಲ್ಲ, ಆದಾಯ ಬರುತ್ತಿಲ್ಲ ಎಂದು ವಿವಿಗಳನ್ನ ಮುಚ್ಚಲು ಹೋಗಿದ್ದಾರೆ. ಹಾಗಾದರೆ ನಿಮ್ಮ ಆದ್ಯತೆ ಏನು?. ಇದು ರಿಯಲ್ ಎಸ್ಟೇಟ್ ಸರ್ಕಾರ. ನಾಲ್ಕು ಲಕ್ಷ ಕೋಟ್ ಬಜೆಟ್ ಮಂಡನೆ ಮಾಡೋರಿಗೆ 342 ಕೋಟಿ ಭಾರ ಆಗುತ್ತದೆಯೇ ಎಂದು ಪ್ರಶ್ನಿಸಿದರು.