ಹಾವೇರಿ,ಫೆ.16- ಆಕಸ್ಮಿಕವಾಗಿ ದನದ ಕೊಟ್ಟಿಗೆಗೆ ಬೆಂಕಿ ಬಿದ್ದು ಆರು ಹಸುಗಳು, ಎರಡು ಕರುಗಳು ಸಜೀವವಾಗಿ ದಹನವಾಗಿರುವ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಕರೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ನಾಗಪ್ಪ ಹಸುಂಡಿ, ಹನುಮಂತಪ್ಪ ಹಸುಂಡಿ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದು ಹಸು-ಕರುಗಳು ಸುಟ್ಟು ಕರಕಲಾಗಿವೆ. ಊರಿನ ಹೊರಗಿರುವ ದನದ ಕೊಟ್ಟಿಗೆಯಲ್ಲಿ ಹಸುಗಳನ್ನು ಕಟ್ಟಲಾಗಿದ್ದು, ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ 6 ಹಸು, 2 ಕರುಗಳು ಸ್ಥಳದಲ್ಲಿಯೇ ಸಜೀವವಾಗಿ ದಹನಗೊಂಡಿವೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹಸು-ಕರುಗಳಲ್ಲದೆ ಸುಮಾರು 6 ಲಕ್ಷ ರೂ. ಮಾಲ್ಯದ ದನದ ಕೊಟ್ಟಿಗೆ ಕೂಡ ಸುಟ್ಟು ಕರಕಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ರಟ್ಟಿಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.