Tuesday, February 25, 2025
Homeರಾಜ್ಯಬಿಡದಿ ಜಮೀನು ಲಪಟಾಯಿಸಲು ಕಾಂಗ್ರೆಸ್ ಸರ್ಕಾರದ ಸಂಚು : HDK ಆರೋಪ

ಬಿಡದಿ ಜಮೀನು ಲಪಟಾಯಿಸಲು ಕಾಂಗ್ರೆಸ್ ಸರ್ಕಾರದ ಸಂಚು : HDK ಆರೋಪ

Congress government plot to loot Bidadi land: HDK alleges

ಹಾಸನ, ಫೆ.16-ನಾನು ಕಷ್ಟಪಟ್ಟು 1985ರಲ್ಲಿ ಬಿಡದಿಯ ಬಳಿ ಖರೀದಿಸಿದ 45 ಎಕರೆ ಜಮೀನನ್ನು ಲಪಟಾಯಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೊಂಚು ಹಾಕುತ್ತಿದೆ ಎಂದು ಕೇಂದ್ರ ಸಚಿವ ಹೆಚ್ .ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಹಾಸನದಲ್ಲಿ ಅರೆಸೇನಾ ಪಡೆಯ ನಿವೃತ್ತ ಯೋಧರ ಭವನದ ಉದ್ಘಾಟನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಭೂಮಿಯನ್ನು ನಾನು ಕಷ್ಟಪಟ್ಟು ಸಂಪಾದಿಸಿದ್ದೇನೆ. ಅದರಲ್ಲಿ ಒತ್ತುವರಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಐದು ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿ ನನ್ನ ಮೇಲೆ ದಾಳಿಗೆ ಬಿಟ್ಟಿದೆ ಎಂದು ಆರೋಪಿಸಿದರು.

ಶುಕ್ರವಾರ ನನಗೆ ನೋಟೀಸ್ ಅನ್ನೇ ನೀಡದೆ ದಾಳಿ ನಡೆಸಲು ಹೊರಟಿದ್ದರು. ನೋಡಿ, ಇದು ಸರ್ಕಾರಿ ಜಮೀನು ಅಲ್ಲ. ನನ್ನ ಸ್ವಂತ ಜಮೀನು. ನನಗೆ ನೋಟೀಸನ್ನೇ ನೀಡದೇ ಹೇಗೆ ಬರುತ್ತೀರಿ? ನಲವತ್ತು ವರ್ಷಗಳ ಹಿಂದೆ ಭೂಮಿಯನ್ನು ಖರೀದಿ ಮಾಡಿದ್ದೇನೆ. ನೀವು ಬಂದು ಸರ್ವೇ ಮಾಡುವುದಾದರೆ ಆ ಭೂಮಿಯ ಮಾಲೀಕನಾದ ನನಗೆ ಮೊದಲು ನೋಟೀಸ್ ಕೊಡಿ ಎಂದು ಸಂಬಂಧಪಟ್ಟ ಪ್ರಧಾನ ಕಾರ್ಯದರ್ಶಿಗೆ ನಾನು ಕೇಳಿದೆ ಅವರು ಹೇಳಿದರು.

ಇಲ್ಲಿನ ಭೂಮಾಪಕರಿಗೆ ನನ್ನ ಭೂಮಿಯನ್ನು ಸರ್ವೇ ಮಾಡುವುದಕ್ಕೆ ಆಗುವುದಿಲ್ಲ ಎಂದು ಕಾಣುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಭೂಮಾಪಕರನ್ನು ಕರೆ ತನ್ನಿ. ನಾನು ಅದಕ್ಕೂ ತಯಾರಿದ್ದೇನೆ. ಎಷ್ಟು ದಿನ ಈ ರೀತಿ ಆಟ ಆಡುತ್ತೀರಿ? ಒಬ್ಬ ಪ್ರಾದೇಶಿಕ ಆಯುಕ್ತ, ಸಹಾಯಕ ಆಯುಕ್ತರ ಮಟ್ಟದ ನಾಲ್ಕು ಜನ ಅಧಿಕಾರಿಗಳು ಸರ್ವೇ ಮಾಡಿಕೊಳ್ಳಿ. ಅಲ್ಲಿ ಯಾವುದಾದರೂ ಕಾನೂನು ಬಾಹಿರವಾಗಿ ಒತ್ತುವರಿ ಆಗಿದ್ದರೆ ತೆಗೆದುಕೊಂಡು ಹೋಗಿ ಎಂದು ಸಚಿವರು ತಿಳಿಸಿದರು.

ಸಾಂವಿಧಾನಿಕ ವ್ಯವಸ್ಥೆಗಳು ಸತ್ಯಾಸತ್ಯತೆ ನೋಡಲಿ :
ಸರ್ವೇ ಮಾಡಿಕೊಂಡು ಒತ್ತುವರಿ ಆಗಿದ್ದರೆ ಆ ಭೂಮಿ ವಾಪಸ್ ಪಡೆದುಕೊಳ್ಳಲು ನನ್ನದೇನೂ ತಕರಾರು ಇಲ್ಲ. ಆದರೆ ಈ ದೇಶದಲ್ಲಿ ಕಾನೂನು, ಸಂವಿಧಾನ ಎನ್ನುವುದು ಇದೆ. ಅದು ಎಲ್ಲರಿಗೂ ಸಮಾನ ಅಲ್ಲವೇ? ಅಂತಹ ಸಾಂವಿಧಾನಿಕ ವ್ಯವಸ್ಥೆಗಳಿಗೆ ನನ್ನ ಮನವಿ ಇಷ್ಟೇ. ನೀವು ಕೆಲ ಅಭಿಪ್ರಾಯಗಳನ್ನು ವ್ಯಕ್ತ ಮಾಡುವ ಸಂದರ್ಭದಲ್ಲಿ ಸತ್ಯಾಸತ್ಯತೆಯನ್ನು ಗಮನಿಸಿ, ದಾಖಲೆಗಳನ್ನು ನೋಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ರಾಮನಗರದಲ್ಲಿ ಎಸಿ ಆಗಿದ್ದ ಅಧಿಕಾರಿ ಸೃಷ್ಟಿಸಿರುವ ದಾಖಲೆ ಇಟ್ಟುಕೊಂಡು ಇವರು ಆಟ ಆಡುತ್ತಿದ್ದಾರೆ. ಬರಲಿ ಅಖಾಡಕ್ಕೆ, ಉತ್ತರ ಕೊಡುತ್ತೇನೆ ಎಂದು ತೀಕ್ಷ್ಯವಾಗಿ ಅವರು ಹೇಳಿದರು.

ಖೋತಾ ಬಜೆಟ್‌ ಗ್ಯಾರಂಟಿ :
ರಾಜ್ಯದ ಸಾಲವನ್ನು 7 ಲಕ್ಷ ಕೋಟಿ ರೂ.ಗೆ ತೆಗೆದುಕೊಂಡು ಹೋಗಿದ್ದಾರೆ. ಒಮ್ಮೆ 2,500 ಕೋಟಿ ರೂ., ಇನ್ನೊಮ್ಮೆ 25,000 ಕೋಟಿ ರೂ.ಸಾಲ ಮನ್ನಾ ಮಾಡಿದೆ. 2006ರಲ್ಲಿ ಬಜೆಟ್ ಗಾತ್ರ 34,000 ಕೋಟಿ ರೂ., 180 ಪ್ರಥಮ ದರ್ಜೆ ಕಾಲೇಜು, 500 ಜ್ಯೂನಿಯರ್ ಕಾಲೇಜು, 1400 ಹೈಸ್ಕೂಲ್ ಮಂಜೂರು ಮಾಡಿದೆ.

56,000 ಶಿಕ್ಷಕರನ್ನು ನೇಮಕ ಮಾಡಿದೆ. ಈ ಸರ್ಕಾರ ಏನು ಕೊಟ್ಟಿದೆ? ಎಷ್ಟು ಜನ ಯುವಜನರಿಗೆ ಉದ್ಯೋಗ ಕೊಟ್ಟಿದೆ? ಇಷ್ಟೊಂದು ಸಾಲ ಮಾಡುತ್ತಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಇನ್ನೆಷ್ಟು ಲಕ್ಷ ಕೋಟಿ ಸಾಲ ಮಾಡುತ್ತಾರೋ ಗೊತ್ತಿಲ್ಲ. 1,80,000 ಕೋಟಿ ರೂ.ಆದಾಯ ನಿರೀಕ್ಷೆ ಮಾಡಿದ್ದರು, ಈ ಸಲವೂ ಖೋತಾ ಬಜೆಟ್ ಗ್ಯಾರಂಟಿ. ಇದನ್ನು ಸರಿಪಡಿಸಿಕೊಳ್ಳಬೇಕು ಇವರು ಎಂದು ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದರು.
Ac
Go

RELATED ARTICLES

Latest News