Wednesday, February 26, 2025
Homeಮನರಂಜನೆಅದ್ಧೂರಿಯಾಗಿ ನೆರವೇರಿದ ಆ್ಯಕ್ಟರ್ ಡಾಲಿ-ಡಾಕ್ಟರ್ ಧನ್ಯ ಮದುವೆ, ಶುಭ ಹಾರೈಸಿದ ಗಣ್ಯರು

ಅದ್ಧೂರಿಯಾಗಿ ನೆರವೇರಿದ ಆ್ಯಕ್ಟರ್ ಡಾಲಿ-ಡಾಕ್ಟರ್ ಧನ್ಯ ಮದುವೆ, ಶುಭ ಹಾರೈಸಿದ ಗಣ್ಯರು

Daali Dhananjaya wedding ceremonies being at Exhibition Grounds in Mysuru

ಮೈಸೂರು, ಫೆ. 16– ಸಾಂಸ್ಕೃತಿಕ ನಗರಿ ಮೈಸೂರಿನ ವಸ್ತು ಪ್ರದರ್ಶನದ ಮೈದಾನದಲ್ಲಿ ನಟ ಡಾಲಿ ಧನಂಜಯ್ ಹಾಗೂ ಡಾಕ್ಟರ್ ಧನ್ಯತಾ ಅವರ ವಿವಾಹ ಮಹೋತ್ಸವವು ಶಾಸ್ರೋಕ್ತವಾಗಿ ನೆರವೇರಿದ್ದು, ಚಿತ್ರರಂಗ, ರಾಜಕೀಯ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಧನಂಜಯ್ ಹಾಗೂ ಧನ್ಯತಾ ಅವರು ವಿವಾಹವಾಗುತ್ತಿರುವ ದಿನವು ಬಹಳ ಶ್ರೇಷ್ಠವಾಗಿದೆ. ಇಂದು ಬೆಳಗ್ಗೆ ವಿವಾಹ ಕಾರ್ಯಗಳು 8.30 ರಿಂದ 10.30ರವರೆಗೆ ನಡೆದಿದ್ದು, ಗಣಪತಿ ಚೌತಿ ದಿನವೇ ಶುಭ ಕಾರ್ಯ ನೆರವೇರಿದ್ದು, ಲಕ್ಷ ದೋಷ ಇದ್ದರೂ ನಿವಾರಣೆಯಾಗುವಂತಹ ಲಗ್ನದಲ್ಲಿ ಧನ್ಯತಾ ಕೊರಳಿಗೆ ಧನಂಜಯ್ ಮಾಂಗಲ್ಯಧಾರಣೆ ಮಾಡಿದ್ದಾರೆ ಎಂದು ವಿವಾಹ ಕಾರ್ಯ ನೆರವೇರಿಸಿದ ಪುರೋಹಿತರು ತಿಳಿಸಿದ್ದಾರೆ.ಇಂದು ಬೆಳಗ್ಗೆ 9.40ರ ಆಸುಪಾಸಿನಲ್ಲಿ ಡಾಲಿ ಮಾಂಗಲ್ಯಧಾರಣೆ ಮಾಡಿದ್ದು, ಡಾಕ್ಟರ್ ಧನ್ಯತಾ ಅವರು ಮಾಂಗಲ್ಯವನ್ನು ಎರಡೂ ಕಣ್ಣುಗಳಿಗೆ ಒತ್ತಿಕೊಂಡಿದ್ದಾರೆ.

ದೇವಸ್ಥಾನದ ಥೀಮ್:
ಡಾಲಿ ಧನಂಜಯ್ ಹಾಗೂ ಧನ್ಯತಾ ಅವರ ವಿವಾಹಕ್ಕೆ ಸಜ್ಜುಗೊಳಿಸಿದ್ದ ಮಂಟಪಕ್ಕೆ ದೇಗುಲದ ಥೀಮ್ ಅನ್ನೇ ನಿರ್ಮಿಸಲಾಗಿತ್ತು. ಮಂಟಪದ ಸುತ್ತಲೂ ಶಿವ, ಪಾರ್ವತಿ ಸೇರಿದಂತೆ ಮತ್ತಿತರ ದೇವರುಗಳ ವಿಗ್ರಹಗಳನ್ನು ಇರಿಸಿದ್ದರಿಂದ ಮದುವೆಯ ಕಲಾತ್ಮಕತೆಯೂ ಹೆಚ್ಚಾಗಿತ್ತು.

ಭೂರಿ ಭೋಜನ:
ಸೆಲಬ್ರಿಟಿಗಳು ಹಾಗೂ ಕುಟುಂಬದವರ ವಿವಾಹವೆಂದರೆ ಅಲ್ಲಿ ಭಕ್ಷ್ಯಭೋಜ್ಯಗಳದ್ದೇ ಕಾರುಬಾರು. ಅದೇ ರೀತಿ ಡಾಲಿ ಧನಂಜಯ್ ಹಾಗೂ ಧನ್ಯತಾ ಅವರ ವಿವಾಹಕ್ಕೆ ಆಗಮಿಸಿದ ಅತಿಥಿಗಳಿಗೂ ಕೂಡ ವಿವಿಧ ರೀತಿಯ ಭಕ್ಷ್ಯಗಳನ್ನು ಆಯೋಜಿಸಲಾಗಿತ್ತು. ಬೆಳಗ್ಗೆಯ ಉಪಾಹಾರದಲ್ಲಿ ಕೇಸರಿಭಾತ್, ಇಡ್ಲಿ, ಸಾಂಬಾರ್, ವಡೆ, ಉಪ್ಪಿಟ್ಟನ್ನು ಬಡಿಸಿದರೆ, ಮದುವೆಯ ಊಟದಲ್ಲಿ ಕೋಸಂಬರಿ, ಎರಡು ರೀತಿ ಪಲ್ಯ, ಪಾಯಸ, ಚಿರೋಟಿ, ಲಡ್ಡು, ವೆಜ್ ಬೋಂಡಾ, ಅಕ್ಕಿ ರೊಟ್ಟಿ -ಎಣ್ಣೆಗಾಯಿ, ರಾಯಿತ, ವೆಜ್ ಪಲಾವ್, ಅನ್ನ ಸಾಂಬಾರ್, ರಸಂ, ಮಜ್ಜಿಗೆ ಅಲ್ಲದೆ ಬಾಳೆಹಣ್ಣು, ಐಸ್ಕ್ರೀಂಗಳು ಮೆನುವಿನಲ್ಲಿದ್ದವು.

ಡಾಲಿಗೆ ಚಿಟ್ಟೆಯ ವಿಶೇಷ ಗಿಫ್ಟ್:
ಡಾ. ಶಿವರಾಜ್‌ಕುಮಾ‌ರ್ ಅಭಿನಯದ ಟಗರು ಚಿತ್ರದ ನಂತರ ಡಾಲಿ ಧನಂಜಯ್ ಹಾಗೂ ವಶಿಷ್ಠಸಿಂಹರ ನಡುವೆ ಆಗಾಧವಾದ ಗೆಳೆತನ ಮೂಡಿದ್ದು, ವಿವಾಹಕ್ಕೆ ಆಗಮಿಸಿದ್ದ ಚಿಟ್ಟೆ (ವಸಿಷ್ಠ ಸಿಂಹ) ಧನಂಜಯ್ ಅವರ ವಿವಾಹ ಜೀವನಕ್ಕೆ ಶುಭ ಕೋರಿ ಚಿನ್ನದ ಸರ ಉಡುಗೊರೆ ನೀಡಿದ್ದಾರೆ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ನಿರ್ದೇಶಕ ತರುಣ್ ಸುಧೀರ್, ಸೋನಾಲ್ ಮಾಂತರೋ ದಂಪತಿ, ಅವರು ಕೂಡ ವಿವಾಹಕ್ಕೆ ಆಗಮಿಸಿ ನೂತನ ವಧು-ವರರಿಗೆ ಶುಭ ಕೋರಿದರು.

ಆರತಕ್ಷತೆಯಲ್ಲಿ ತಾರಾದಂಡು:
ಇಂದು ಬೆಳಗ್ಗೆ ನಡೆದ ವಿವಾಹ ಸಮಾರಂಭವಲ್ಲದೆ ನಿನ್ನೆ ನಡೆದ ಆರತಕ್ಷತೆಯಲ್ಲಿ ಸ್ಯಾಂಡಲ್ ವುಡ್ ನ ತಾರೆಯರು ಆಗಮಿಸಿ ಮದುವೆ ಸಮಾರಂಭದ ಮೆರಗನ್ನು ಹೆಚ್ಚಿಸಿದ್ದರು. ನಟರಾದ ಸೆಂಚುರಿ ಸ್ಟಾರ್ ಡಾ. ಶಿವರಾಜ್‌ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಧ್ರುವಸರ್ಜಾ, ಶ್ರೀಮುರಳಿ, ಸೃಜನ್ ಲೋಕೇಶ್, ಶ್ರೀನಗರ ಕಿಟ್ಟಿ, ಅವಿನಾಶ್, ನಟಿಯರಾದ ಅಮೂಲ್ಯ, ರಕ್ಷಿತಾ, ಮಾಳವಿಕಾ, ನಿರ್ದೇಶಕರಾದ ಪ್ರೇಮ್, ಸುಕುಮಾರ್, ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಕೆ.ಮಂಜು, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.ಮಾಜಿ ಸಂಸದ ಡಿ.ಕೆ.ಸುರೇಶ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಶ್ರೀರಾಮುಲು ಸೇರಿದಂತೆ ಸಿನಿಮಾ ಹಾಗೂ ರಾಜಕೀಯ ರಂಗದ ಹಲವು ಗಣ್ಯರು ಆಗಮಿಸಿ ಧನು-ಧನ್ಯಾ ಜೋಡಿಯನ್ನು ಹಾರೈಸಿದರು.

RELATED ARTICLES

Latest News