Monday, February 24, 2025
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ, ಮೈಸೂರಿನಲ್ಲಿ ಹೃದಯ ವಿದ್ರಾವಕ ಘಟನೆ

ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ, ಮೈಸೂರಿನಲ್ಲಿ ಹೃದಯ ವಿದ್ರಾವಕ ಘಟನೆ

Four members of the same family commit suicide, heartbreaking incident in Mysore

ಮೈಸೂರು.ಫೆ.17- ನಗರದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್‌ ಮೆಂಟ್‌ನಲ್ಲಿ ನೆಲೆಸಿದ್ದ ಚೇತನ್ (45), ಇವರ ಪತ್ನಿ ರೂಪಾಲಿ (43), ಪುತ್ರ ಕುಶಾಲ್ (15) ಹಾಗೂ ತಾಯಿ ಪ್ರಿಯಂವದಾ (62) ಮೃತಪಟ್ಟವರು.
ಚೇತನ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ ಉಳಿದವರ ಶವಗಳು ಮಲಗಿದ್ದ ರೀತಿಯಲ್ಲಿ ಕಂಡುಬಂದಿವೆ.

ಬಹುಶಃ ಚೇತನ್ ಅವರು ತಾಯಿ, ಪತ್ನಿ ಹಾಗೂ ಪುತ್ರನಿಗೆ ವಿಷ ಪ್ರಾಶನ ಮಾಡಿ ಅವರುಗಳೆಲ್ಲಾ ಮೃತಪಟ್ಟ ನಂತರ ಇಂದು ಬೆಳಗಿನ ಜಾವ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಹಾಸನ ಮೂಲದ ಚೇತನ್ ಅವರು ಸಿವಿಲ್ ಎಂಜಿನಿಯರ್. ಇವರು ದುಬೈ ಸೇರಿದಂತೆ ಇತರೆ ದೇಶಗಳಿಗೆ ಕಾಂಟ್ರಾಕ್ಟ್ ಮೂಲಕ ಕಾರ್ಮಿಕರನ್ನು ಕಳುಹಿಸುತ್ತಿದ್ದರು.

ಕೋವಿಡ್‌ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಹೇಳಲಾಗುತ್ತಿದೆ. ಕೋವಿಡ್ ಸಂಕಷ್ಟದಿಂದಾಗಿ ಕುಟುಂಬದಲ್ಲಿ ಆರ್ಥಿಕ ದುಸ್ಥಿತಿ ಬಿಗಡಾಯಿಸಿತ್ತು. ಅದರೂ ಚೇತನ್ ಅವರು ಧೃತಿಗೆಡದೆ ಎಲ್ಲವನ್ನೂ ನಿಭಾಯಿಸುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಈ ನಡುವೆ ಸಾಲದ ಸುಳಿಯಲ್ಲಿ ಚೇತನ್ ಸಂಸಾರ ಸಿಲುಕಿತ್ತು. ಹೀಗಾಗಿ ಚೇತನ್ ಅವರಿಗೆ ಬೇರೆ ದಾರಿ ಕಾಣದೆ ಕುಟುಂಬ ಸಮೇತ ಆತ್ಮಹತ್ಯೆಗೆ ನಿರ್ಧರಿಸಿದ್ದರೆಂಬ ಅನುಮಾನ ಮೂಡಿದೆ.
ಪುತ್ರ ಕುಶಾಲ್ ಎಸ್‌ಎಸ್‌ಎಲ್ಸಿ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಇಂಗ್ಲಿಷ್ ವಿಷಯದ ಪರೀಕ್ಷೆ ಬರೆದಿದ್ದನು. ಈತ ಶಾಲೆಯಿಂದ ಮನೆಗೆ ಬಂದ ನಂತರ ಚೇತನ್ ಅವರು ಕುಟುಂಬ ಸಮೇತ ಹಾಸನಕ್ಕೆ ಹೋಗೋಣವೆಂದು ಎಲ್ಲರನ್ನೂ ಹೊರಡಿಸಿದ್ದಾರೆ.

ಅದರಂತೆ ಹಾಸನದ ಗೊರೂರು ಸಮೀಪದ ತಮ್ಮ ಹಳ್ಳಿಗೆ ಹೋಗಿ ಎಲ್ಲರನ್ನೂ ಮಾತನಾಡಿಸಿಕೊಂಡು ನಿನ್ನೆ ಮನೆಗೆ ಹಿಂದಿರುಗಿದ್ದಾರೆ. ಆದರೆ ಬೆಳಗಾಗುವಷ್ಟರಲ್ಲಿ ನಾಲ್ವರೂ ಸಾವನ್ನಪ್ಪಿದ್ದಾರೆ.

ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಮೆರಿಕದಲ್ಲಿರುವ ತಮ್ಮ ಸಹೋದರ ಭರತ್ ಚೇತನ್ ಅವರು ಕರೆ ಮಾಡಿ ಮನೆಯಲ್ಲಿನ ಸಮಸ್ಯೆ ಹೇಳಿಕೊಂಡು ನಂತರ ಮೊಬೈಲ್ ಕರೆ ಸ್ಥಗಿತಗೊಳಿಸಿ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚೇತನ್‌ರ ವರ್ತನೆಯಿಂದ ಭರತ್ ಗಾಬರಿಯಾಗಿದೆ. ಶಕ್ಷಣ ಮತ್ತೆ ಮೊಬೈಲ್‌ ಕರೆ ಮಾಡಿದಾಗ ಚೇತನ್ ಸ್ವೀಕರಿಸಿಲ್ಲ, ಕೂಡಲೇ ಮೈಸೂರಿನಲ್ಲೇ ನೆಲೆಸಿರುವ ರೂಪಾಲಿ ಅವರ ಪೋಷಕರಿಗೆ ಕರೆ ಮಾಡಿ ಚೇತನ್ ಅವರ ಮನೆ ಬಳಿ ಹೋಗಿ ನೋಡುವಂತೆ ಹೇಳಿದ್ದಾರೆ. ಸಂಬಂಧಿಕರು ವಿಶ್ವೇಶ್ವರಯ್ಯನಗರದಲ್ಲಿರುವ ಚೇತನ್ ಅವರ ಮನೆ ಬಳಿ ಬಂದು ಕಾಲಿಂಗ್ ಬೆಲ್ ಒತ್ತಿದ್ದಾರೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಕ್ಷಣ ಗಾಬರಿಗೊಂಡ ಸಂಬಂಧಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ವಿದ್ಯಾರಣ್ಯಪುರಂ ಠಾಣೆ ಇನ್ಸ್‌ಪೆಕ್ಟರ್ ಮೋಹಿತ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಕಿಟಕಿ ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಚೇತನರ ಮೃತದೇಹ ಕಂಡುಬಂದಿದೆ.
ತಕ್ಷಣ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಚೇತನ್ ಅವರ ತಾಯಿ, ಪತ್ನಿ, ಮಗ ಅವರ ಮೃತದೇಹಗಳು ಕಂಡುಬಂದಿವೆ.

ಚೇತನ್‌ರವರು ರಾತ್ರಿಯೇ ಊಟದಲ್ಲಿ ಇವರೆಲ್ಲರಿಗೂ ವಿಷಪ್ರಾಶನ ಮಾಡಿ ನಂತರ ಎಲ್ಲರೂ ಮೃತಪಟ್ಟಿದ್ದಾರೆಂದು ಖಚಿತಪಡಿಸಿಕೊಂಡೇ ಬೆಳಿಗ್ಗೆ ಸಹೋದರನಿಗೆ ಕರೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಕುಟುಂಬದ ಸಾವಿಗೆ ನಿಖರ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಸುತ್ತಮುತ್ತಲಿನ ನಿವಾಸಿಗಳು ಇವರ ಮನೆ ಮುಂದೆ ಜಮಾಯಿಸಿದ್ದರು ಹಾಗೂ ಸ್ನೇಹಿತರೂ ಸಹ ಇವರ ಮನೆ ಬಳಿ ಬಂದು ಘಟನೆಗೆ ಕಂಬನಿ ಮಿಡಿದಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಡಿಸಿಪಿ ಜಾಗೃವಿ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸೀಮಾ ಲಾಟ್ಕರ್ ರವರು, ಅಪಾರ್ಟ್ ಮೆಂಟ್‌ನಲ್ಲಿ ನಾಲ್ಕು ಮಂದಿಯ ಸಾವಾಗಿದೆ. 2019ರಲ್ಲಿ ಚೇತನ್ ಅವರು ಎರಡು ಫ್ಲಾಟ್ ಗಳನ್ನು ಖರೀದಿಸಿದ್ದರು ಎಂಬ ಮಾಹಿತಿ ಇದೆ. ಚೇತನ್ ಅವರು ಸೌದಿಗೆ ಕಾರ್ಮಿಕರನ್ನು ಕಳುಹಿಸುತ್ತಿದ್ದರು. ನಿನ್ನೆ ಸಂಜೆ ಈ ಕುಟುಂಬ ದೇವಸ್ಥಾನಕ್ಕೆ ಹೋಗಿ ಮನೆಗೆ ಮರಳಿದ್ದನ್ನು ಕೆಲವರು ನೋಡಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ಪ್ರತಿಕ್ರಿಯಿಸಿದರು.

ಫ್ಲಾಟ್‌ನಲ್ಲಿ ಚೇತನ್ ಅವರು ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಸಾವಿಗೆ ಕಾರಣ ಉಲ್ಲೇಖಿಸಲಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ.
ನಾಲ್ವರ ಮೃತದೇಹಗಳನ್ನು ಕೆ.ಆರ್.ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News