Monday, February 24, 2025
Homeರಾಷ್ಟ್ರೀಯ | Nationalಸರ್ಕಾರ ರಚನೆಗೂ ಮೊದಲೇ ದೆಹಲಿಯಲ್ಲಿ ಅಭಿವೃದ್ಧಿ ಆರಂಭಿಸಿದ ಬಿಜೆಪಿ, ಯಮುನಾ ಶುದ್ದೀಕರಣ ಪ್ರಾರಂಭ

ಸರ್ಕಾರ ರಚನೆಗೂ ಮೊದಲೇ ದೆಹಲಿಯಲ್ಲಿ ಅಭಿವೃದ್ಧಿ ಆರಂಭಿಸಿದ ಬಿಜೆಪಿ, ಯಮುನಾ ಶುದ್ದೀಕರಣ ಪ್ರಾರಂಭ

Yamuna river cleanup drive begins days before BJP forms Delhi govt

ನವದೆಹಲಿ,ಫೆ.17- ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 27 ವರ್ಷಗಳ ಬಳಿಕ ಎಎಪಿಯನ್ನು ಸೋಲಿಸಿ ಸ್ವಂತ ಬಲದ ಮೇಲೆ ಅಧಿಕಾರ ಗದ್ದುಗೆ ಹಿಡಿದಿರುವ ಬಿಜೆಪಿ, ಚುನಾಚಣೆಗೂ ಮುನ್ನ ಜನತೆಗೆ ಕೊಟ್ಟ ವಾಗ್ದಾನದಂತೆ ನಡೆದುಕೊಳ್ಳಲು ಮುಂದಾಗಿದೆ.

ಒಂದು ಕಡೆ ದೆಹಲಿಗೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯೇ ಕಗ್ಗಂಟಾಗಿರುವ ಬೆನ್ನಲ್ಲೇ, ದೆಹಲಿ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುವ ಯಮುನಾ ನದಿಯನ್ನು ಮಾಲಿನ್ಯದಿಂದ ಮುಕ್ತಗೊಳಿಸುವ ನಾಲ್ಕು ಹಂತದ ಕಾರ್ಯತಂತ್ರವನ್ನು ಆಧರಿಸಿ ಯಮುನಾ ನದಿಯ ಶುದ್ದೀಕರಣ ಕಾರ್ಯ ಆರಂಭವಾಗಿದೆ. ಈ ಮೂಲಕ ನಮ್ಮದು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಸರ್ಕಾರ ಎಂಬುದಕ್ಕೆ ಸರ್ಕಾರ ರಚನೆಗೂ ಮುನ್ನವೇ ಮುನ್ನುಡಿ ಬರೆದಿದೆ.

ನದಿಯಿಂದ ಕಸ ತೆಗೆಯುವ ಯಂತ್ರಗಳು, ಕಳೆ ಕೊಯ್ದು ಯಂತ್ರಗಳು, ಹೂಳೆತ್ತುವ ಸಾಧನಗಳು ಮತ್ತು ಡ್ರೆಡ್ಡರ್‌ ನೊಂದಿಗೆ ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಕೆಲಸ ಪ್ರಾರಂಭವಾಗಿದೆ ಎಂದು ರಾಜ್ ನಿವಾಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಫೆ. 8 ರಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಬಿಜೆಪಿಯ ವಿಜಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಲಿನ್ಯ ಮುಕ್ತ ಯಮುನಾಗೆ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದ್ದರು.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸನಾ ಅವರು ಮೊನ್ನೆ ಶನಿವಾರ ಮುಖ್ಯ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನೀರಾವರಿ ಮತ್ತು ಪ್ರವಾಹ ನಿಯಂತ್ರಣ) ಅವರನ್ನು ಭೇಟಿ ಮಾಡಿ ಯಮುನಾ ನದಿ ಶುಚಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಚ್ಛತಾ ಕಾರ್ಯದಲ್ಲಿ ನದಿಯಿಂದ ಹೂಳು, ಕಸ ತೆಗೆಯುವುದು, ನಜಾಫ್‌ ಗಢ ನಾಲೆ, ಪೂರಕ ನಾಲೆ ಮತ್ತು ಇತರ ಪ್ರಮುಖ ನಾಲೆಗಳಲ್ಲಿ ಏಕಕಾಲದಲ್ಲಿ ಶುಚಿಗೊಳಿಸುವ ಕಾರ್ಯಗಳನ್ನು ಒಳಗೊಂಡಿರುತ್ತದೆ. ಈ ಕಾರ್ಯತಂತ್ರವು ಈಗಿರುವ ಒಳಚರಂಡಿ ಸಂಸ್ಕರಣಾ ಘಟಕಗಳ ಸಾಮರ್ಥ್ಯ ಮತ್ತು ಉತ್ಪಾದನೆಯ ದೈನಂದಿನ ಮೇಲ್ವಿಚಾರಣೆಯನ್ನು ಒಳಗೊಂಡಿರುತ್ತದೆ. ದಿನಕ್ಕೆ ಸುಮಾರು 400 ಮಿಲಿಯಲ್ ಗ್ಯಾಲನ್ ಒಳಚರಂಡಿಯನ್ನು ಸಂಸ್ಕರಿಸುವ ಕೊರತೆಯನ್ನು ಪೂರೈಸಲು ಹೊಸ ಒಳಚರಂಡಿ ಸಂಸ್ಕರಣಾ ಘಟಕಗಳು ಮತ್ತು ವಿಕೇಂದ್ರೀಕೃತ ಎಸ್ ಪಿಪಿಗಳ ಸಮಯ-ಬದ್ಧ ನಿರ್ಮಾಣವನ್ನು ಒಳಗೊಂಡಿರುತ್ತದೆ.

ಸುಮಾರು ಮೂರು ವರ್ಷಗಳಲ್ಲಿ ನದಿಯನ್ನು ಸ್ವಚ್ಛಗೊಳಿಸುವ ಗುರಿಯನ್ನು ಹೊಂದಿರುವ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕಾರ್ಯಗತಗೊಳಿಸಲು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್, ದೆಹಲಿ ಜಲ ಮಂಡಳಿ, ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ, ಪರಿಸರ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಸಂಸ್ಥೆಗಳು ಮತ್ತು ಇಲಾಖೆಗಳ ನಡುವೆ ಸರಾಗ ಸಮನ್ವಯದ ಅಗತ್ಯ ವಿರುತ್ತದೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಅಧಿಕಾರಿಯೊಬ್ಬರು ಹೇಳಿದರು.

ಈ ಕಾಮಗಾರಿಗಳ ಮೇಲ್ವಿಚಾರಣೆಯನ್ನು ವಾರಕ್ಕೊಮ್ಮೆ ಉನ್ನತ ಮಟ್ಟದಲ್ಲಿ ಮಾಡಲಾಗುತ್ತದೆ, ಕೈಗಾರಿಕಾ ಘಟಕಗಳು ಸಂಸ್ಕರಿಸದ ತ್ಯಾಜ್ಯ ನೀರನ್ನು ಚರಂಡಿಗಳಿಗೆ ಬಿಡುವುದರ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಗೆ ನಿರ್ದೇಶಿಸಲಾಗಿದೆ ಎಂದರು.

ಈ ಹಿಂದೆ 2023 ರ ಜನವರಿಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶಿಸಿದ ಲೆಫ್ಟಿನೆಂಟ್ ಗವರ್ನರ್ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯ ಅಡಿಯಲ್ಲಿ ಯಮುನಾ ಪುನರುಜೀವನಕ್ಕಾಗಿ ವ್ಯಾಪಕವಾದ ಯೋಜನೆಯನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಲಾಯಿತು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ವಿಕಸಿತ ದೆಹಲಿ ಸಂಕಲ್ಪ ಪತ್ರದಲ್ಲಿ ನದಿಯನ್ನು ಪುನರುಜ್ಜಿವನಗೊಳಿಸಲು ಮತ್ತು ಅದರ ದಡದಲ್ಲಿ ನದಿಮುಖವನ್ನು ಅಭಿವೃದ್ಧಿಪಡಿಸಲು ಯಮುನಾ ಕೋಶವನ್ನು ಸ್ಥಾಪಿಸುವುದಾಗಿ ಭರವಸೆ
.
ಪಕ್ಷದ ಪ್ರಣಾಳಿಕೆಯು ಒಳಚರಂಡಿ ಸಂಸ್ಕರಣಾ ಸಾಮರ್ಥ್ಯವನ್ನು ದಿನಕ್ಕೆ ಸಾವಿರ ಮಿಲಿಯನ್ ಗ್ಯಾಲನ್ಗಳಿಗೆ ಮತ್ತು ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕದ ಸಾಮರ್ಥ್ಯವನ್ನು 220 ಮಿಲಿಯನ್ ಗ್ಯಾಲನ್ ಗೆ ವಿಸ್ತರಿಸುವುದಾಗಿ ಭರವಸೆ ನೀಡಿತ್ತು. ಫೆ.5 ರ ವಿಧಾನಸಭೆ ಚುನಾವಣೆಯಲ್ಲಿ 70 ವಿಧಾನಸಭಾ ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದ ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೆ ಬರುತ್ತಿದೆ. ಮುಂದಿನ ವಾರ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ.

RELATED ARTICLES

Latest News