ಬೆಂಗಳೂರು, ಫೆ.17– ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಭಾನುವಾರ ತಮ್ಮ ಒಮಾನ್ ಸಹವರ್ತಿ ಬದರ್ ಅಲ್ಲುಸೈದಿ ಅವರೊಂದಿಗೆ ವ್ಯಾಪಾರ, ಹೂಡಿಕೆ ಮತ್ತು ಇಂಧನ ಭದ್ರತೆ ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಸಹಕಾರ ಕುರಿತು ವಿಶಾಲ ತಳಹದಿಯ ಮಾತುಕತೆ ನಡೆಸಿದರು.
8ನೇ ಹಿಂದೂ ಮಹಾಸಾಗರ ಸಮಾವೇಶದಲ್ಲಿ ಪಾಲ್ಗೊಳ್ಳಲು ಒಮಾನಿ ರಾಜಧಾನಿ ಮಸ್ಕತ್‌ಗೆ ಆಗಮಿಸಿರುವ ಜೈಶಂಕರ್ ಅವರು ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಮಾಲ್ಮೀನ್ಸ್ ಮತ್ತು ಬ್ರೂನೈ ಸೇರಿದಂತೆ ಇತರ ಹಲವು ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೂ ದ್ವಿಪಕ್ಷೀಯ ಒಪ್ಪಂದಗಳು ಮತ್ತು ಪ್ರಾದೇಶಿಕ ಸಹಕಾರಕ್ಕೆ ಸಂಬಂಧಿಸಿದ ವಿಚಾರಗಳ ಚರ್ಚೆ ನಡೆಸಿದರು.
ಒಮಾನ್‌ನ ವಿದೇಶಾಂಗ ಸಚಿವರಾದ ಬದರ್ ಅಲುಸೈದಿ ಅವರನ್ನು ಭೇಟಿಯಾಗಿದ್ದು ಬಹಳ ಸಂತೋಷ ಉಂಟು ಮಾಡಿದೆ. 8ನೇ ಹಿಂದೂ ಮಹಾಸಾಗರ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಲು ಅವರು ನಡೆಸಿರುವ ಪ್ರಯತ್ನಗಳನ್ನು ಶ್ಲಾಘಿಸುತ್ತೇನೆ ಎಂದು ಜೈಶಂಕರ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಬ್ಬರು ನಾಯಕರು ರಾಜತಾಂತ್ರಿಕ ಸಂಬಂಧಗಳ 70ನೇ ವಾರ್ಷಿಕೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿದರು. ಇಬ್ಬರೂ ಜೊತೆಯಾಗಿ ಮಾಂಡ್ತಿ ಟು ಮಸ್ಕತ್ ಇಂಡಿಯನ್ ಕಮ್ಯೂನಿಟಿ ಆ್ಯಂಡ್ ದಿ ಷೇರ್ ಹಿಸ್ಟರಿ ಆಫ್ ಇಂಡಿಯಾ ಆ್ಯಂಡ್ ಒಮಾನ್ ಕೃತಿಯನ್ನು ಬಿಡುಗಡೆ ಮಾಡಿದರು. ಬಳಿಕ ಜೈಶಂಕರ್ ಅವರು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಫ್‌ಚಿ ಅವರನ್ನೂ ಭೇಟಿ ಮಾಡಿದರು.