ಬೆಳಗಾವಿ,ಫೆ.17- ಪ್ರಸ್ತುತ ಅವಧಿಗಷ್ಟೇ ಅಲ್ಲ, ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾದರೆ ತಪ್ಪೇನು? ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರ ರಾಜ್ಯದಲ್ಲಿ ನಡೆಯುವುದಲ್ಲ. ನಮ್ಮ ಹಂತದಲ್ಲಿ ಹೇಳಿಕೆ ನೀಡಿದರೆ ಅದು ಸೂಕ್ತವೂ ಅಲ್ಲ. ಹೈಕಮಾಂಡ್ ನಿರ್ಧಾರ ತೆಗೆದುಕೊಂಡರೆ ಅದು ಅಂತಿಮ ಎಂದರು.
ಮುಂದಿನ ಅವಧಿಯ ಚುನಾವಣೆಗೂ ಸಿದ್ದರಾಮಯ್ಯನವರ ನೇತೃತ್ವಬೇಕು ಎಂದು ಸಚಿವರು, ಶಾಸಕರು ಹೇಳುತ್ತಿರುವುದರಲ್ಲಿ ತಪ್ಪೇನಿದೆ? ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ.
ಅವರೇ ಮುಂದುವರೆಯುತ್ತಾರೆ. ಮುಂದಿನ ಅವಧಿಗೂ ಅವರೇ ಮತ್ತೆ ಸಿಎಂ ಆಗುವುದಾದರೆ ತಪ್ಪೇನು? ಎಂದು ಪ್ರಶ್ನಿಸಿದರು.
ಮಾಧ್ಯಮದವರು ಪದೇಪದೇ ಪ್ರಶ್ನೆ ಕೇಳುವುದರಿಂದಾಗಿ ಸಚಿವರು, ಶಾಸಕರು ಮುಖ್ಯಮಂತ್ರಿ ಹುದ್ದೆಯ ಕುರಿತು ಚರ್ಚೆ ಮಾಡುತ್ತಾರೆ. ಇಲ್ಲದೇ ಹೋದರೆ ಯಾರೂ ಈ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ. ಸಚಿವರಿಗೆ ಇರುವ ಕೆಲಸವೇ ಜಾಸ್ತಿ ಇದೆ. ಇಂತಹ ಅನಗತ್ಯ ಚರ್ಚೆಯಲ್ಲಿ ಭಾಗವಹಿಸಲು ನಮಗೆ ಸಮಯಾವಕಾಶ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಬ್ಬು ಬೆಳೆಗಾರರ ಬಾಕಿ ಪಾವತಿಯಲ್ಲಿ ಯಾವುದೇ ಸಮಸ್ಯೆಯಿಲ್ಲ, ಬಹುತೇಕ ಸಕ್ಕರೆ ಕಾರ್ಖಾನೆಗಳು ಶೇ.80 ರಷ್ಟು ಹಣ ನೀಡಿವೆ. ಇನ್ನೂ ಕೆಲವು ಕಾರ್ಖಾನೆಗಳು ಶೇ.65 ರಷ್ಟು ನೀಡಿದ್ದು, ಉಳಿದಿದ್ದನ್ನು ಮುಂದಿನ ಕಬ್ಬು ಹರಿವು ವೇಳೆಗೆ ಕೊಡಿಸಲು ಕ್ರಮ ಕೈಗೊಳ್ಳುತ್ತೇವೆ.
ಕಬ್ಬು ಕಾರ್ಖಾನೆಗಳಲ್ಲಿ ತೂಕಕ್ಕೆ ಆನ್‌ಲಾಕ್ ವ್ಯವಸ್ಥೆಯನ್ನು ಬಳಸಲಾಗುತ್ತಿತ್ತು. ಅದನ್ನು ಡಿಜಿಟಲೀಕರಣ ಮಾಡಲಾಗಿದ್ದು, ಶೇ.72 ರಷ್ಟು ಕಾರ್ಖಾನೆಗಳು ಇದನ್ನು ಅಳವಡಿಸಿಕೊಂಡಿವೆ. ಜೊತೆಗೆ ಸರ್ಕಾರದಿಂದಲೇ ತೂಕದ ಯಂತ್ರ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಜಾಗ ಲಭ್ಯ ಇರುವ ಕಡೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಎರಡು ಸಂಚಾರಿ ತೂಕದ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದರು.
ರಾಜ್ಯದಲ್ಲಿ ಎಪಿಎಂಸಿಗೆ ಸಂಬಂಧಪಟ್ಟಂತೆ ನಾಲ್ಕು ಕಾಯ್ದೆಗಳಿವೆ. ಅವುಗಳನ್ನು ಪರಿಷ್ಕರಣೆ ಮಾಡಿ ಏಕರೂಪ ಕಾಯ್ದೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಹಿಂದೆ ಸರ್ಕಾರಿ ಎಪಿಎಂಸಿಗೆ ಮಾತ್ರ ಅವಕಾಶವಿತ್ತು. ಕೇಂದ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದಾಗಿ ನಾಲ್ಕು ಖಾಸಗಿ ಎಪಿಎಂಸಿಗಳು ಅಸ್ತಿತ್ವಕ್ಕೆ ಬಂದಿವೆ. ಇದನ್ನು ಸರಿಪಡಿಸಬೇಕಿದೆ ಎಂದು ತಿಳಿಸಿದರು.