Tuesday, February 25, 2025
Homeರಾಜ್ಯಬೇಸಿಗೆಗೂ ಮುನ್ನವೇ ರಾಜ್ಯದಲ್ಲಿ ನೀರಿನ ಹಾಹಾಕಾರ ಶುರು..!

ಬೇಸಿಗೆಗೂ ಮುನ್ನವೇ ರಾಜ್ಯದಲ್ಲಿ ನೀರಿನ ಹಾಹಾಕಾರ ಶುರು..!

Water crisis begins in the state even before summer..!

ಬೆಂಗಳೂರು,ಫೆ.18- ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ನೀರಿನ ಹಾಹಾಕಾರ ಶುರುವಾಗಿದ್ದು, ರಾಜ್ಯದ ಹಲವು ಭಾಗಗಳಲ್ಲಿ ಶ್ರೀಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ.

ಬಯಲುಸೀಮೆಯ ಪಾವಗಡ, ಹೊಳಲ್ಕೆರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡರೆ, ಉತ್ತರ ಕರ್ನಾಟಕ ಭಾಗದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿ, ಯಾದಗಿರಿ ಸೇರಿದಂತೆ ಹಲವಾರು ಜಿಲ್ಲೆಗಳ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ.

ಬಹುತೇಕ ಈ ಬಾರಿ ಉತ್ತಮ ಮಳೆಯಾಗಿದ್ದರಿಂದಾಗಿ ಹೆಚ್ಚಿನ ನೀರಿನ ಬವಣೆ ಕಾಣಿಸಿಕೊಂಡಿಲ್ಲ. ಕಳೆದ ಬೇಸಿಗೆಯಲ್ಲಿ 1700ಕ್ಕೂ ಹೆಚ್ಚಿನ ಗ್ರಾಮಗಳು ಕುಡಿಯುವ ನೀರಿನ ತೊಂದರೆಯಿಂದ ಬಳಲಿದ್ದವು. ರಾಜ್ಯ ಸರ್ಕಾರ ಟ್ಯಾಂಕರ್ ಮೂಲಕ ನೀರು ಪೂರೈಸಿತ್ತು. ಕೆಲವು ಕಡೆ ಬೋರ್‌ವೆಲ್ ರಿಪೇರಿ, ಹೊಸ ಬೋರ್‌ವೆಲ್‌ಗಳನ್ನು ಕೊರೆಯುವುದು ಸೇರಿದಂತೆ ನಾನಾ ರೀತಿಯ ತುರ್ತು ಕ್ರಮಗಳ ಮೂಲಕ ಸಮಸ್ಯೆಯನ್ನು ನಿಭಾಯಿಸಲಾಗಿತ್ತು.

ಈ ವರ್ಷ ರಾಜ್ಯ ರಾಜಕೀಯದಲ್ಲೇ ಸಾಕಷ್ಟು ಗೊಂದಲಗಳು ತಲೆದೋರಿವೆ. ಬಹುತೇಕ ಸಚಿವರು ಅದರಲ್ಲಿಯೇ ಮುಳುಗಿಹೋಗಿದ್ದಾರೆ. ಪಂಚಖಾತ್ರಿಗಳ ಕಾರಣದಿಂದಾಗಿ ಇತರ ಸಮಸ್ಯೆಗಳು ಗಮನ ಹರಿಸಲು ಸಂಪನ್ಮೂಲದ ಕೊರತೆಯು ಕಾಡಲಾರಂಭಿಸಿದೆ.

ರಾಜ್ಯದ ಅಂತರ್ಜಲ ಮಟ್ಟತೀವ್ರವಾಗಿ ಕುಸಿತಗೊಳ್ಳುತ್ತಿದ್ದು, ಗ್ರಾಮೀಣ ಭಾಗದಲ್ಲಿ ಬಹುತೇಕ ಬೋರ್‌ವೆಲ್‌ಗಳಲ್ಲಿನ ನೀರು ಈಗಾಗಲೇ ತಗ್ಗುತ್ತಿದೆ. ಕೆಲವೆಡೆ ಬತ್ತಿ ಹೋಗಿದೆ. ರಾಷ್ಟ್ರೀಯ ಜಲಜೀವನ್ ಮಿಷನ್ ಯೋಜನೆಯ ಮೂಲಕ ಮನೆಮನೆಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಜಲಮೂಲಗಳೇ ಒಣಗಿಹೋಗಿರುವುದರಿಂದ ನಲ್ಲಿಗಳಲ್ಲಿ ನೀರಿನ ಬದಲು ವಾಯುಸಂಚಾರವಾಗುತ್ತಿದೆ.

ನೀರಿನ ಬವಣೆ ನೀಗಿಸಲು ಜಿಲ್ಲಾಡಳಿತದಲ್ಲಿ ಸಾಕಷ್ಟು ಅನುದಾನವಿದೆ ಎಂದು ಸರ್ಕಾರ ಸ್ಪಷ್ಟನೆ ನೀಡುತ್ತಿದೆ. ಇನ್ನೂ ಬೇಸಿಗೆ ಆರಂಭಗೊಳ್ಳದೇ ಇರುವುದರಿಂದ ವೈಯಕ್ತಿಕ ಖಾತೆಯಲ್ಲಿರುವ ಹಣವನ್ನು ಬಳಕೆ ಮಾಡಲು ಅವಕಾಶವಿಲ್ಲ ಎಂಬ ಸಬೂಬು ಹೇಳಲಾಗುತ್ತಿದೆ.
ಬೇಸಿಗೆ ಆರಂಭಕ್ಕೂ ಮುನ್ನವೇ ಸೃಷ್ಟಿಯಾಗಿರುವ ನೀರಿನ ಸಮಸ್ಯೆಗೆ ಪರಿಹಾರ ಇಲ್ಲದಂತಾಗಿದ್ದು, ಕೆಲವು ಗ್ರಾಮಗಳಲ್ಲಿ ಐದಾರು ಕಿಲೋಮೀಟರ್‌ನಿಂದ ನೀರು ತರಬೇಕಾದ ಪರಿಸ್ಥಿತಿ ಉದ್ಭವಿಸಿದೆ.

ಹಿಂದಿನ ಅನುಭವವನ್ನು ಆಧರಿಸಿ ಪ್ರಸ್ತುತ ನೀರಿನ ಸಮಸ್ಯೆ ಬಗೆಹರಿಸಲು ಟಾಸ್ಕ್‌ಪೋರ್ಸ್‌ಗಳನ್ನು ರಚಿಸಲಾಗುವುದು. ಕಾಲಕಾಲಕ್ಕೆ ಪ್ರಗತಿ ಪರಿಶೀಲನಾ ಸಭೆಯ ಮೂಲಕ ಸಮಸ್ಯೆ ತೀವ್ರಗೊಳ್ಳದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಬಜೆಟ್ ಅಧಿವೇಶನದ ಬಳಿಕ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿ ಭವಿಷ್ಯದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಉನ್ನತಮೂಲಗಳು ತಿಳಿಸಿವೆ. ಸದ್ಯಕ್ಕಂತೂ ಶ್ರೀಸಾಮಾನ್ಯರು ಕೆಲವು ಭಾಗಗಳಲ್ಲಿ ನೀರಿನ ಬವಣೆಯಿಂದ ಬಳಲುವಂತಾಗಿದೆ.

RELATED ARTICLES

Latest News