Friday, April 17, 2026
Homeರಾಷ್ಟ್ರೀಯಪರಿಷತ್‌ನಲ್ಲಿ ಗದ್ದಲ : ಸದನ ಮುಂದೂಡಿಕೆ

ಪರಿಷತ್‌ನಲ್ಲಿ ಗದ್ದಲ : ಸದನ ಮುಂದೂಡಿಕೆ

Ruckus in the Council: House adjourned

ಬೆಂಗಳೂರು,ಜ.28- ರಾಜ್ಯಪಾಲರ ಭಾಷಣಕ್ಕೆ ನಿಂದನೆ ಮಾಡಿರುವುದರಿಂದ ಅದನ್ನು ವಂದನಾ ನಿರ್ಣಯ ತೆಗೆದುಕೊಳ್ಳುವುದರ ಬಗ್ಗೆ ವಿಧಾನಪರಿಷತ್‌ನಲ್ಲಿ ಮತ್ತೆ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಬಿಸಿಬಿಸಿ ಚರ್ಚೆ ನಡೆದು ಕಲಾಪವನ್ನು ಮುಂದೂಡಲಾಯಿತು.

ಹೀಗಾಗಿ ಸದನದಲ್ಲಿ ಪ್ರಶ್ನೋತ್ತರ, ಶೂನ್ಯವೇಳೆ, ಗಮನ ಸೆಳೆಯುವುದು ಸೇರಿದಂತೆ ಮೊದಲಾರ್ಧದ ಕಲಾಪ ನೀರಿನಲ್ಲಿ ಹೋಮ ಮಾಡಿದಂತಾಯಿತು.ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪ ನಡೆಸಲು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರಲ್ಲಿ ಮಾಡಿಕೊಂಡ ಮನವಿಯೂ ವ್ಯರ್ಥವಾಯಿತು. ಒಂದು ಹಂತದಲ್ಲಿ ಸಭಾಪತಿಯವರು ಸದನವನ್ನು ಮುಂದೂಡಿ ಸಂದಾನ ನಡೆಸುವ ಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.

ಪುನಃ ಸದನ ಸೇರಿದಾಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಭಾರೀ ಕೋಲಾಹಲ, ಗದ್ದಲ ಉಂಟಾಯಿತು. ರಾಜ್ಯಪಾಲರಿಗೆ ಅಗೌರವ ತೋರಿದ ಸದಸ್ಯರನ್ನು ಸದನದಿಂದ ಹೊರಹಾಕಿ ಎಂದು ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದರೆ ಅಸಂವಿಧಾನಿಕ ಪದ ಬಳಸಿದ ಪ್ರತಿಪಕ್ಷದ ನಾಯಕನನ್ನೇ ಹೊರಹಾಕಬೇಕೆಂದು ಆಡಳಿತ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದರು.

ಹೀಗೆ ಎರಡೂ ಕಡೆ ಗದ್ದಲ, ಕೋಲಾಹಲ, ವೈಯಕ್ತಿಕ ನಿಂದನೆ, ಸಭಾನಾಯಕರ ಕ್ಷಮಾಪಣೆ ಕೇಳಬೇಕೆಂದು ಪಟ್ಟು ಹಿಡಿದ ಪರಿಣಾಮ ಸಭಾಪತಿಯವರು ಸದನವನ್ನು ಮುಂದೂಡಿದರು. ಒಂದು ಹಂತದಲ್ಲಿ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್‌‍ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರನ್ನು ಸಂವಿಧಾನ ಓದಲು ಯೋಗ್ಯತೆ ಇಲ್ಲ. ಮೊದಲು ಅವರನ್ನು ಸದನದಿಂದ ಹೊರಹಾಕಿ ಎಂದು ಆಕ್ರೋಶಭರಿತರಾಗಿ ಮಾತನಾಡಿದರು.

ಈ ಮಾತಿನಿಂದ ಕೆರಳಿದ ಹರಿಪ್ರಸಾದ್‌, ನಾನು ವರ್ಷಕ್ಕೊಂದು ಪಕ್ಷ ಬದಲಾಯಿಸುವುದಿಲ್ಲ. ಪ್ರತಿಪಕ್ಷದ ನಾಯಕನ ಸ್ಥಾನ ಪಡೆಯಲು ಯಾರ ಚಡ್ಡಿಯನ್ನೂ ಹೊತ್ತಿಲ್ಲ. ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟವರಿಂದ ನಾನು ಅವರಿಂದ ತಿಳಿಯಬೇಕೇ?, ಸಂವಿಧಾನ ರಕ್ಷಣೆಗೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಗುಡುಗಿದರು.

ಇದಕ್ಕೂ ಮುನ್ನ ದಿನದ ಕಲಾಪ ಪ್ರಾರಂಭವಾಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌‍ ಸದಸ್ಯರು ಸದನದ ಬಾವಿಗಿಳಿದು ಅಬಕಾರಿ ಲಂಚ ಪ್ರಕರಣದಲ್ಲಿ ಸಚಿವ ಆರ್‌.ಬಿ.ತಿಮಾಪುರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೆಲಹೊತ್ತು ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ ನಡೆಯಿತು. ಆಗ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಮತ್ತು ಜೆಡಿಎಸ್‌‍ನ ಎಸ್‌‍.ಎಲ್‌.ಬೋಜೇಗೌಡ ಅವರು ವಿಷಯ ಪ್ರಸ್ತಾಪಿಸಲು ಮುಂದಾದರು.

ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಾವು ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದೆವು. ಅವರು ನೈತಿಕ ಹೊಣೆ ಹೊತ್ತು ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲಿಯವರೆಗೂ ಧರಣಿಯನ್ನು ಕೈಬಿಡುವುದಿಲ್ಲ ಎಂದು ಹೇಳಿದರು.

ಇದರ ಮಧ್ಯೆ ಸಭಾಪತಿ ಬಸವರಾಜ ಹೊರಟ್ಟಿಯವರು ರಾಜ್ಯಪಾಲರ ಭಾಷಣಕ್ಕೆ ಗೌರವ ಸೂಚಿಸುವ ವಂದನಾ ನಿರ್ಣಯವನ್ನು ಚರ್ಚೆಗೆ ಅವಕಾಶ ನೀಡಿರುವುದಾಗಿ ತಿಳಿಸಿದರು. ಆಗ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿ ರಾಜ್ಯಪಾಲರ ಭಾಷಣವನ್ನು ಸರ್ಕಾರ ಧಿಕ್ಕರಿಸಿದೆ ಎಂದು ಹೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾನೂನು ಸಲಹೆಗಾರ ಪೊನ್ನಣ್ಣ ಅವರು ರಾಜ್ಯಪಾಲರ ನಡೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ. ಅವರು ಸದನವನ್ನು ಮತ್ತು ಕರ್ನಾಟಕವನ್ನು ಅಗೌರವಿಸಿದ್ದಾರೆ. ಸರ್ಕಾರ ಭಾಷಣವನ್ನು ಧಿಕ್ಕರಿಸಿದೆ ಎಂದು ಹೇಳಿರುವಾಗ ಅದನ್ನು ಚರ್ಚೆ ಮಾಡುವ ಅಗತ್ಯವಿದೆಯೇ ಎಂದು ಪ್ರಶ್ನೆ ಮಾಡಿದರು.

ಇದು ವಂದನಾ ನಿರ್ಣಯವೋ ಅಥವಾ ನಿಂದನಾ ನಿರ್ಣಯವೋ? ಮೊದಲು ಇತ್ಯರ್ಥವಾಗಬೇಕು. ನೀವು ರಾಜ್ಯಪಾಲರ ಭಾಷಣವನ್ನು ಒಪ್ಪಿದ ಮೇಲೆ ಟೀಕೆ ಮಾಡುವುದು ಏಕೆ? ಒಪ್ಪುವುದಿಲ್ಲ ಎಂದರೆ ಅದರ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.
ಇದಕ್ಕೆ ದನಿಗೂಡಿಸಿದ ಭೋಜೇಗೌಡ, ರಾಜ್ಯಪಾಲರು ಮಾಡಿದ ಭಾಷಣವನ್ನು ಸರ್ಕಾರ ಧಿಕ್ಕರಿಸಿದೆ. ಸ್ವತಃ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ವಿಧಾನಪರಿಷತ್‌ ಸಭಾನಾಯಕ ಎನ್‌.ಎಸ್‌‍.ಬೋಸರಾಜುರವರು ರಾಜ್ಯಪಾಲರು ಸದನಕ್ಕೆ ಅಗೌರವ ತೋರಿಸಿದ್ದಾರೆ. ಇದು ಕರ್ನಾಟಕಕ್ಕೆ ಮಾಡಿದ ಅಪಮಾನ. ರಾಷ್ಟ್ರಗೀತೆಗೂ ಅಗೌರವ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ ಸರ್ಕಾರ ವಂದನಾ ನಿರ್ಣಯವನ್ನು ತೆಗೆದುಕೊಳ್ಳಬಾರದು ಎಂದು ಸಭಾಪತಿಯವರಿಗೆ ಮನವಿ ಮಾಡಿದರು.

ಸರ್ಕಾರದ ಪರವಾಗಿ ಸ್ಪಷ್ಟನೆ ನೀಡಿದ ಸಭಾನಾಯಕ ಬೋಸರಾಜು ಅವರು,ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವ ವೇಳೆ ಕಡೆಪಕ್ಷ ರಾಷ್ಟ್ರಗೀತೆ ಹಾಡುವವರೆಗೂ ಇರಬೇಕಿತ್ತು. ಮಧ್ಯದಲ್ಲೇ ಎದ್ದು ಹೋಗಿ ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ. ಉಳಿದಂತೆ ನಾವು ರಾಜ್ಯಪಾಲರಿಗೆ ಎಲ್ಲಿಯೂ ಅವಮಾನ ಮಾಡಿಲ್ಲ. ಚರ್ಚೆಗೆ ಅವಕಾಶ ಕೊಡಿ ಎಂದು ಸಭಾಪತಿಗಳಿಗೆ ಮನವಿ ಮಾಡಿದರು.

RELATED ARTICLES

Latest News