ಚಂಡಿಘಡ,ಫೆ.18- ಪತ್ನಿ ಹತ್ಯೆಗೆ ಸುಫಾರಿ ನೀಡಿದ್ದೇ ಎಎಪಿ ನಾಯಕ ಅನೋಖ್ ಮಿತ್ತಲ್ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಇತ್ತೀಚೆಗಷ್ಟೇ ಪಂಜಾಬ್‌ನ ಆಮ್ ಆದ್ಮಿ ಪಕ್ಷದ ನಾಯಕ ಅನೋಖ್ ಮಿತ್ತಲ್ ಅವರ ಪತ್ನಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು, ಜತೆಗೆ ದರೋಡೆ ಮಾಡಲಾಗಿದೆ ಎಂದು ದೂರು ದಾಖಲಿಸಲಾಗಿತ್ತು.
ಆದರೆ ಅಸಲಿಗೆ ಆಕೆಯ ಪತಿ ಅನೋಖ್ ಮಿತ್ತಲ್ ಕೊಲೆಗೆ ಸುಪಾರಿ ಕೊಟ್ಟಿದ್ದ ಎನ್ನುವ ನಿಜಾಂಶ ಬೆಳಕಿಗೆ ಬಂದಿದೆ. ಲುಧಿಯಾನಾ ಪೊಲೀಸರು ಅನೋಖ್ ಮಿತ್ತಲ್ ಹಾಗೂ ಆತನ ಗೆಳತಿಯನ್ನು ಬಂಧಿಸಿದ್ದಾರೆ. ಕೊಲೆ ಮಾಡಲು ಕೆಲವರನ್ನು ನೇಮಿಸಿಕೊಂಡಿದ್ದ ಮಿತ್ತಲ್, ಸ್ನೇಹಿತೆ ಸೇರಿ 6 ಜನರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಒಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಆತನನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಲುಧಿಯಾನಾ ಪೊಲೀಸ್ ಆಯುಕ್ತ ಕುಲದೀಪ್ ಸಿಂಗ್ ತಿಳಿಸಿದ್ದಾರೆ.
ಮಿತ್ತಲ್ ಹಂತಕರಿಗೆ 2.5 ಲಕ್ಷ ರೂ.ಗಳನ್ನು ನೀಡಲು ಒಪ್ಪಿಕೊಂಡಿದ್ದ, ಈಗಾಗಲೇ 50 ಸಾವಿರ ರೂ. ಮುಂಗಡವಾಗಿ ನೀಡಿದ್ದ, ಉಳಿದ 2 ಲಕ್ಷ ರೂ. ಕೊಲೆಯ ಬಳಿಕ ನೀಡುತ್ತೇನೆ ಎಂದು ಹೇಳಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಿತ್ತಲ್ ಈ ಹಿಂದೆ ಎರಡು ಬಾರಿ ಪತ್ನಿ ಕೊಲೆಗೆ ಯತ್ನಿಸಿದ್ದ. ಅಪರಾಧದ ಹಿಂದಿನ ಉದ್ದೇಶ ಆತನ ವಿವಾಹೇತರ ಸಂಬಂಧವಾಗಿದ್ದು, ಅದು ಪತ್ನಿಗೆ ತಿಳಿದಿತ್ತು. ಈ ವಿಷಯವನ್ನು ಆಕೆ ಎಲ್ಲರಿಗೂ ಹೇಳಬಹದು ಎಂಬ ಭಯದಿಂದ ಆತ ಪತ್ನಿ ಹತ್ಯೆಗೆ ಸುಪಾರಿ ನೀಡಿದ್ದ ಎನ್ನಲಾಗಿದೆ. ಅಪರಾಧಕ್ಕೆ ಬಳಸಲಾದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಅಪರಾಧ ನಡೆದ ಸ್ಥಳದಲ್ಲಿ ಮಿತ್ತಲ್ ಪ್ರೇಯಸಿ ಅಲ್ಲಿಲ್ಲದಿದ್ದರೂ, ಯೋಜನೆ ಮತ್ತು ಪಿತೂರಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆಂದು ನಂಬಲಾಗಿದೆ ಎಂದು ಆಯುಕ್ತರು ಹೇಳಿದರು.
ಮಿತ್ತಲ್ ಪೊಲೀಸರಿಗೆ ಈ ವಿಚಾರ ತಿಳಿಸಿದ್ದು, ಫೆಬ್ರವರಿ 15ರ ಮಧ್ಯರಾತ್ರಿ ಸುಮಾರಿಗೆ ತಾನು ತನ್ನ ಪತ್ನಿ ಜತೆ ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದೆವು, ರೂರ್ಕಾ ರಸ್ತೆಯ ಬಳಿ ಕಾರನ್ನು ನಿಲ್ಲಿಸಿದಾಗ ಇನ್ನೊಂದು ವಾಹನದಲ್ಲಿ ಬಂದ ಐದಾರು ಮಂದಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದರು, ಬಳಿಕ ಯಾವುದೋ ವಸ್ತುವಿನಿಂದ ನಾನು ಪ್ರಜ್ಞೆ ಕಳೆದುಕೊಂಡಿದ್ದೆ ಎಂದು ಹೇಳಿದ್ದ.
ಮೂರು ತಿಂಗಳ ಹಿಂದೆ ಆಮ್ ಆದ್ಮ ಪಕ್ಷಕ್ಕೆ ಸೇರಿದ ಮಿತ್ತಲ್, ಸುಮಾರು 20 ನಿಮಿಷಗಳ ನಂತರ ಪ್ರಜ್ಞೆ ಬಂದಾಗ, ತನ್ನ ಪತ್ನಿ ಗಂಭೀರ ಗಾಯಗಳೊಂದಿಗೆ ರಸ್ತೆಯಲ್ಲಿ ಬಿದ್ದಿರುವುದನ್ನು ನೋಡಿದೆ ಎಂದು ಹೇಳಿಕೊಂಡಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಆಕೆ ಮೃತಪಟ್ಟಿದ್ದಾಳೆ ಎಂದು ಅವರು ಹೇಳಿದ್ದರು.