Monday, February 24, 2025
Homeರಾಜ್ಯಐಎನ್ಎಸ್ ಕದಂಬ ನೌಕಾನೆಲೆಯ ಸೂಕ್ಷ್ಮ ಮಾಹಿತಿ ಸೋರಿಕೆ ಮಾಡಿದ ಇಬ್ಬರು ಗುತ್ತಿಗೆ ನೌಕರರ ಬಂಧನ

ಐಎನ್ಎಸ್ ಕದಂಬ ನೌಕಾನೆಲೆಯ ಸೂಕ್ಷ್ಮ ಮಾಹಿತಿ ಸೋರಿಕೆ ಮಾಡಿದ ಇಬ್ಬರು ಗುತ್ತಿಗೆ ನೌಕರರ ಬಂಧನ

NIA arrests two in K'taka for leaking sensitive Karwar naval base information to Pakistan

ಕಾರವಾರ, ಫೆ.18-ವಿದೇಶಿ ಗೂಢಚಾರರಿಗೆ ಸೂಕ್ಷ್ಮ ಚಿತ್ರಗಳು ಹಾಗೂ ಮಾಹಿತಿ ರವಾನಿಸಿದ ಆರೋಪದ ಮೇಲೆ ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯ ಇಬ್ಬರು ಗುತ್ತಿಗೆ ನೌಕರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಶಕ್ಕೆ ಪಡೆದಿದೆ. ಬಂಧಿತರನ್ನು ಅಂಕೋಲಾದ ಅಕ್ಷಯ್ ನಾಯ್ಡ್ ಮತ್ತು ಕಾರವಾರದ ಮುದಗಾ ಮೂಲದ ವೆತನ್ ತಾಂಡೇಲ್ ಎಂದು ಗುರುತಿಸಲಾಗಿದೆ.

ಎನ್‌ಐಎ ತಂಡಗಳು ಎರಡೂ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಮೂಲಗಳ ಪ್ರಕಾರ, ವಿದೇಶಿ ಗೂಢಚಾರರು ಶಂಕಿತರನ್ನು ಸಾಮಾಜಿಕ ಮಾಧ್ಯಮದಲ್ಲಿ ಸಂಪರ್ಕಿಸಿ, ಯುವತಿಯರಂತೆ ನಟಿಸಿ ಹಣದ ವಿನಿಮಯಕ್ಕಾಗಿ ನೌಕಾ ನೆಲೆಯ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಬಲೆ ಬೀಸಿದ್ದಾರೆ.

ಶಂಕಿತ ಆರೋಪಿಗಳನ್ನು ಹನಿ ಟ್ರ್ಯಾಪ್ ಮಾಡಿದ್ದ ಪಾಕಿಸ್ತಾನಿ ಏಜೆಂಟ್ ಮಾಹಿತಿ ಕಲೆ ಹಾಕಿದ್ದಳು ಎನ್ನಲಾಗಿತ್ತು. ಫೇಸ್‌ಬುಕ್ ಮೂಲಕ ತಾನು ಮರೈನ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಪಾಕಿಸ್ತಾನಿ ಏಜೆಂಟ್, ಶಂಕಿತ ಆರೋಪಿಗಳಾದ ಮುದುಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಡ್ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದಳು. ಇದಾದ ಬಳಿಕವೇ 2023 ರಲ್ಲಿ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು ಎಂದು ತಿಳಿದು ಬಂದಿದೆ.

ನೌಕಾ ನೆಲೆಯ ಚಿತ್ರಗಳನ್ನು ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳಿಗೆ ಕಳುಹಿಸಲಾಗಿದೆ ಎಂದು ಹೇಳಲಾದ 2023 ರಿಂದ ಹಿಂದಿನ ತನಿಖೆಗೆ ಈ ಪ್ರಕರಣವನ್ನು ಲಿಂಕ್ ಮಾಡಲಾಗಿದೆ. ಆ ಸಮಯದಲ್ಲಿ, ಎನ್ ಐಎ ಯ ಹೈದರಾಬಾದ್ ಘಟಕವು ಹಲವಾರು ನೌಕಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕಸ್ಟಡಿಗೆ ತೆಗೆದುಕೊಂಡಿತ್ತು. ವೇತನ್ ಮತ್ತು ಅಕ್ಷಯ್ ಅವರ ಇತ್ತೀಚಿನ ಬಂಧನಗಳು ನಡೆಯುತ್ತಿರುವ ತನಿಖೆಯ ಮುಂದುವರೆದ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.

2024ರ ಆಗಸ್ಟ್ 28ರಂದು ಎನ್‌ಐಎ ಇತ್ತೀಚೆಗೆ ಬಂಧಿತರಾದ ಇಬ್ಬರು ಸೇರಿದಂತೆ ಮೂವರು ಶಂಕಿತರನ್ನು ಪ್ರಶ್ನಿಸಿತ್ತು ಮತ್ತು ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಸೋಮವಾರ, ಆರು ಸದಸ್ಯರ ಎನ್‌ಐಎ ತಂಡವು ಹೆಚ್ಚಿನ ತನಿಖೆಗಾಗಿ ಇಬ್ಬರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಮೊದಲು ಕಾರವಾರ ನಗರ ಪೊಲೀಸ್ ಠಾಣೆಯಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿದೆ.

ಈ ಹಿಂದೆ ಕಾರವಾರದ ಚೆಂಡ್ಯಾದಲ್ಲಿರುವ ಮಕ್ಯುರಿ ಹಾಗೂ ಅಲ್ಪಾ ಮರೈನ್ ಕಂಪೆನಿಯಲ್ಲಿ ವೇತನ್ ಹಾಗೂ ಅಕ್ಷಯ್ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ತೋಡೂರಿನ ಸುನೀಲ್ ಮಾತ್ರ ಹಿಂದೆ ಸೀಬರ್ಡ್ ಕ್ಯಾಂಟೀನ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿ ಆಮೇಲೆ ಚಾಲಕ ವೃತ್ತಿ ಮಾಡುತ್ತಿದ್ದ.

ಈ ಹಿಂದೆ ವಶಕ್ಕೆ ಪಡೆದವರನ್ನು ಇದೀಗ ಮತ್ತೆ ವಿಚಾರಣೆಗೆ ಒಳಪಡಿಸಿ, ಹೊಸ ಲಿಂಕ್‌ನ ಬಗ್ಗೆ ತನಿಖೆ ನಡೆಸಲು ಎನ್‌ಐಎ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ. ನೌಕಾ ನೆಲೆ ಮಾಹಿತಿ ಸೋರಿಕೆ ಸಂಬಂಧಿಸಿ ಇಂದು ನೌಕಾನೆಲೆ ಅಧಿಕಾರಿಗಳನ್ನು ಎನ್‌ಐಎ ಅಧಿಕಾರಿಗಳ ತಂಡ ಭೇಟಿಯಾಗಲಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಜನರು ಶಾಮೀಲಾಗಿರುವ ಅನುಮಾನದ ಕಾರಣ ಮತ್ತಷ್ಟು ತನಿಖೆ ನಡೆಯಲಿದೆ.

ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ ವಿಚಾರವಾಗಿ 2024ರ ಆಗಸ್ಟ್ ತಿಂಗಳಲ್ಲಿ ಮೂವರನ್ನು ವಿಚಾರಣೆ ನಡೆಸಿದ್ದ ಎನ್‌ಐಎ ನೋಟೀಸ್ ನೀಡಿ ಬಿಟ್ಟಿತ್ತು. ಮುದುಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕನನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಿತ್ತು. ಇದೀಗ ಮತ್ತೆ ಪ್ರಕರಣ ಸಂಬಂಧ ಮತ್ತೆ ತನಿಖೆ ನಡೆಸಲು ಬಂದಿದ್ದ ಎನ್‌ಐಎ ತಂಡ ಇಬ್ಬರನ್ನು ಬಂಧಿಸಿದೆ.

RELATED ARTICLES

Latest News