ಬೆಂಗಳೂರು : ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕೇಂದ್ರ ಚುನಾವಣಾ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್ ಪಡೆದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು 9 ಪುಟಗಳ ಸುಧೀರ್ಘ ಉತ್ತರ ನೀಡಿದ್ದಾರೆ. ನೋಟಿಸ್ ಗೆ ಯತ್ನಾಳ್ ಕೇಂದ್ರ ಶಿಸ್ತು ಸಮಿತಿಯ ಕಾರ್ಯಕಾರಿ ಸದಸ್ಯ ಓ ಪಾಠಕ್ ಅವರಿಗೆ 9 ಪುಟಗಳ ಉತ್ತರವನ್ನು ಯತ್ನಾಳ್ ಇ-ಮೇಲ್ ಮೂಲಕ ನೀಡಿದ್ದಾರೆ.
72 ಗಂಟೆಯೊಳಗೆ ಉತ್ತರ ನೀಡಿದಿದ್ದರೆ ಶಿಸ್ತು ಕ್ರಮ ಫಿಕ್ಸ್ ಎಂದು ಹೇಳುತ್ತಿದ್ದಂತೆ ಆತಂಕದಲ್ಲಿ ಯತ್ನಾಳ್ ಅವರು ಆರ್ ಎಸ್ ಎಸ್ ಪ್ರಮುಖರ ಮೊರೆಹೋಗಿದ್ದರು. . ಅವರ ಸಲಹೆ ಪಡೆದುಕೊಂಡು ವಿವರವಾದ ಉತ್ತರ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ಕೇಂದ್ರ ಶಿಸ್ತು ಸಮಿತಿಗೆ ಯತ್ನಾಳ್ ನೀಡಿರುವ ಉತ್ತರವೇನು ಎಂಬುದರ ವಿವರ ಸದ್ಯ ಬಹಿರಂಗವಾಗಿಲ್ಲ. ಆದಾಗ್ಯೂ, ವಿಜಯೇಂದ್ರ ವಿರುದ್ಧ ದೂರುಗಳ ಸರಮಾಲೆಯನ್ನೇ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. `ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ರಾಜಕೀಯ ಮಾಡುತ್ತಿದೆ. ನಾನು ಯಾವುದೇ ಬಣ ರಾಜಕೀಯ ಮಾಡಿಲ್ಲ. ಪಕ್ಷದ ಶಿಸ್ತನ್ನು ನಾನು ಉಲ್ಲಂಘಿಸಿಲ್ಲ’ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.
ಪಕ್ಷದ ಚೌಕಟ್ಟಿನಲ್ಲಿ ವಕ್ಫ್ ವಿರುದ್ಧ ಹೋರಾಟ ಮಾಡಿದ್ದೇವೆ. ತಂಡವಾಗಿ ಹೋರಾಟ ಮಾಡಿ ನಾವು ಯಶಸ್ವಿಯಾಗಿದ್ದೇವೆ. ವಕ್ಫ್ ಕುರಿತ ಹೋರಾಟವನ್ನು ಉನ್ನತ ನಾಯಕರು ಸಮರ್ಥಿಸಿದ್ದಾರೆ. ಬಿ.ವೈ.ವಿಜಯೇಂದ್ರ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಕಾರ್ಯಕರ್ತರು, ನಾಯಕರ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ ಎಂದು ಯತ್ನಾಳ್ ಉತ್ತರಿಸಿದ್ದಾರೆ.
ಶಿಸ್ತು ಸಮಿತಿ ನೋಟಿಸ್ ಬಳಿಕ ಯತ್ನಾಳ್ ಬಣ ಮೌನಕ್ಕೆ ಶರಣಾಗಿತ್ತು. ಕಳೆದ ಕೆಲವು ದಿನಗಳಿಂದ ಬಹಿರಂಗ ಹೇಳಿಕೆಗಳಿಗೆ ಬ್ರೇಕ್ ಬಿದ್ದಿತ್ತು. ಯತ್ನಾಳ್ ಬಣದ ನಾಯಕ ರಮೇಶ್ ಜಾರಕಿಹೊಳಿ ಕೂಡ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡುವ ತಂತ್ರವನ್ನು ಬಣ ಅನುಸರಿಸುತ್ತಿದೆ ಎನ್ನಲಾಗಿದೆ.
ಮತ್ತೊಂದೆಡೆ ಯತ್ನಾಳ್ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅದನ್ನೆಲ್ಲ ನಮ್ಮ ರಾಷ್ಟ್ರೀಯ ನಾಯಕರು ನೋಡಿಕೊಳ್ಳುತ್ತಾರೆ ಎಂದಿದ್ದಾರೆ.ಯತ್ನಾಳ್‍ಗೆ ಶಿಸ್ತು ಸಮಿತಿ ನೋಟಿಸ್ ಬಳಿಕ ಭಿನ್ನಮತೀಯರ ಬಣ ಮೌನಕ್ಕೆ ಶರಣಾಗಿದೆ. ಅದರೆ ಈಗ ಮತ್ತೆ ವಿಜಯೇಂದ್ರ ಬದಲಾವಣೆಗೆ ಒತ್ತಾಯಿಸಿ ಸಭೆ ಸೇರಲು ಮುಂದಾಗಿದೆ. 20 ರಂದು ಬೆಂಗಳೂರಿನ ಕುಮಾರ್ ಬಂಗಾರಪ್ಪ ನಿವಾಸದಲ್ಲೇ ಸಭೆ ನಡೆಸಲಿದ್ದಾರೆ.
ನೋಟಿಸ್ ದೊರೆತ 72 ಗಂಟೆಗಳ ಒಳಗಾಗಿಯೇ ಅವರು ಉತ್ತರ ನೀಡಿದಂತಾಗಿದೆ.ಶಿಸ್ತು ಸಮಿತಿಯ ನೋಟಿಸ್ಗೆ ಉತ್ತರ ನೀಡುವುದಕ್ಕೆ ಏನೂ ಇಲ್ಲ ಎಂದು ಯತ್ನಾಳ್ ಕೆಲವು ದಿನಗಳ ಹಿಂದೆ ಹೇಳಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣಗಳ ನಡುವಣ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಪಕ್ಷಕ್ಕೆ ಮುಜುಗರ ತರುವಂಥ ಹೇಳಿಕೆಗಳನ್ನು ನೀಡುತ್ತಿರುವುದಕ್ಕಾಗಿ ಯತ್ನಾಳ್ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. 72 ಗಂಟೆ ಒಳಗೆ ಉತ್ತರಿಸುವಂತೆ ಖಡ್ ಸೂಚನೆ ನೀಡಿತ್ತು. ಈ ನೋಟಿಸ್ಗೆ ಯತ್ನಾಳ್ ಉತ್ತರವನ್ನೇ ನೀಡಿಲ್ಲ, ಅವರ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆಯೇ ಎಂಬುದು ಈವರೆಗಿನ ಪ್ರಶ್ನೆಯಾಗಿತ್ತು.
ಉತ್ತರದಲ್ಲಿ ಏನಿದೆ?
ಪಕ್ಷದಲ್ಲಿ ಕುಟುಂಬ ರಾಜಕೀಯ ಮೀತಿ ಮೀರಿದೆ. ಭವಿಷ್ಯ ದೃಷ್ಟಿಯಿಂದ ಇದಕ್ಕೆ ಬ್ರೇಕ್ ಹಾಕಬೇಕು. ಕುಟುಂಬ ರಾಜಕೀಯದಿಂದ ಪಕ್ಷ ವ್ಯಕ್ತಿಗತವಾಗಿ ಗುರುತಿಸಿಕೊಳ್ಳಬಾರದು. ಬಿ.ವೈ ವಿಜಯೇಂದ್ರ ಅವರು ವ್ಯಕ್ತಿಗತ ಹಾಗೂ ಗುಂಪುಗಾರಿಕೆ ಮಾಡ್ತಿದ್ದಾರೆ. ಇದರಿಂದ ಸಂಘಟನೆಗೆ ತೊಡಕಾಗುತ್ತಿದೆ ಎಂದು ಯತ್ನಾಳ್ ಉತ್ತರದಲ್ಲಿ ದೂರಿದ್ದಾರೆ.
ಹಿರಿಯ ನಾಯಕರನ್ನು ವಿಶ್ವಾಸಕ್ಕೆ ಪಡೆದಿಲ್ಲ. ಹೊಂದಾಣಿಕೆ ರಾಜಕೀಯದಿಂದ ಪಕ್ಷ ಸಂಘಟನೆಯಲ್ಲಿ ಬಲಹೀನವಾಗಬಾರದು. ಕಾರ್ಯಕರ್ತರು ಭಾವನೆಗಳನ್ನು ನಾನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದೇನೆ. ನನ್ನ ಹೇಳಿಕೆ ಪಕ್ಷದ ಅನೇಕ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಅಭಿಪ್ರಾಯವಾಗಿದೆ. ಹೀಗಾಗಿ, ಬಿ.ವೈ ವಿಜಯೇಂದ್ರ ಅವರನ್ನು ಕೆಳಗಿಳಿಸಿ, ಸಮರ್ಥ ನಾಯಕರಿಗೆ ಜವಬ್ದಾರಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ವಕ್ಫ್ ಹೋರಾಟವನ್ನು ನಾವು ಪಕ್ಷದ ವೇದಿಕೆಯಲ್ಲೇ ಮಾಡಿದ್ದೇವೆ. ಈ ಹೋರಾಟಕ್ಕೆ ಕೇಂದ್ರದ ನಾಯಕರೇ ಖುದ್ದು ಶ್ಲಾಘಿಸಿದ್ದಾರೆ. ಪಕ್ಷದ ಹಿತಕ್ಕೆ ನಾವು ಕೆಲಸ ಮಾಡುತ್ತಿದ್ದೇವೆ. ಈ ಹಿಂದೆ ನೀಡಿದ ಉತ್ತರವನ್ನು ನೀವು ಪರಿಗಣಿಸಬಹುದು. ನಾನು ಶಿಸ್ತು ಉಲ್ಲಂಘಿಸಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಈ ಹಿಂದೆ ಕೂಡ ನೋಟಿಸ್ ನೀಡಿತ್ತು. ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಯತ್ನಾಳ್ ಸಿಡಿದೆದ್ದಿದ್ದು, ಬಹಿರಂಗವಾಗಿಯೇ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಕಳೆದ ಡಿಸೆಂಬರ್ನಲ್ಲಿ ಅವರಿಗೆ ನೋಟಿಸ್ ನೀಡಲಾಗಿತ್ತು.
ನೋಟಿಸ್ಗೆ ಖುದ್ದು ಶಿಸ್ತು ಸಮಿತಿ ಮುಂದೆ ಹಾಜರಾಗಿ ವಿವರಣೆ ನೀಡಿದ್ದ ಯತ್ನಾಳ್, ಆ ನಂತರದಲ್ಲಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ್ದರು. ಅಲ್ಲದೆ, ಯತ್ನಾಳ್ ಬಣದ ಇತರ ನಾಯಕರೂ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು. ಬಣ ಜಗಳ ತೀವ್ರಗೊಂಡ ಬೆನ್ನಲ್ಲೇ ಶಿಸ್ತು ಸಮಿತಿ ಮತ್ತೆ ಶೋಕಾಸ್ ನೀಡಿತ್ತು.
ವಿಜಯೇಂದ್ರ ಮಾತಿನ ಮರ್ಮವೇನು?
ಮತ್ತೊಂದೆಡೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು, ಫೆಬ್ರವರಿ 20ರೊಳಗೆ ಎಲ್ಲವೂ ತೀರ್ಮಾನ ಆಗಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಮಾತಿನ ಮರ್ಮವೇನು ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
20ರೊಳಗೆ ಎಲ್ಲ ಪಕ್ಷದೊಳಗಿನ ಗೊಂದಲಗಳೆಲ್ಲ ಸರಿಯಾಗಲಿದೆ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ವಿಜಯೇಂದ್ರ ಅವರು, ನಿಮ್ಮ ಎಲ್ಲ ಪ್ರಶ್ನೆಗಳಿಗೂ ನಾಳೆಯೇ ಉತ್ತರ ಕೊಡ್ತೇನೆ. ರಾಜಕೀಯ ವಿಚಾರವೂ ನಾಳೆಯೇ ಮಾತಾಡ್ತೇನೆ ಎಂದು ಹೇಳಿದರು.
20ರಂದು ಯತ್ನಾಳ್ ತಂಡದಿಂದ ಮತ್ತೆ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿವೈವಿ, ಅವರು ಹಿರಿಯರು ಇದ್ದಾರೆ. ಸಭೆ ಕರೆದು ಪಕ್ಷ ಬಲಪಡಿಸುವ ಚರ್ಚೆ ಮಾಡ್ತಾರೆ. ಅದಕ್ಕೆ ನಾನು ಯಾಕೆ ಬೇಡ ಅನ್ನಲಿ? ನಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಯಾರೇನೇ ಮಾಡಿದರೂ ಪಕ್ಷಕ್ಕೆ ಪೂರಕವಾಗಿ ಮಾಡ್ತಾರೆ ಅನ್ನೋದು ನನ್ನ ಅಭಿಲಾಷೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಾ ಎಂಬ ಪ್ರಶ್ನೆ ಜೊತೆಗೆ ಯತ್ನಾಳ್ ತಂಡದ ಮುಂದಿನ ನಡೆಯೇನು ಎಂಬುದು ಸದ್ಯ ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟಿಸಿದೆ.