ಬೆಂಗಳೂರು, ಫೆ.18– ಯಾರಾದರೂ ಪೊಲೀಸ್ ಠಾಣೆಗಳಿಗೆ ಸುಳ್ಳು ದೂರು ನೀಡಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಗರದ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಸುಳ್ಳು ದೂರು ದಾಖಲಿಸಲಾಗಿದ್ದ ಆರು ಪ್ರಕರಣಗಳಲ್ಲಿ ಸುಳ್ಳು ದೂರು ನೀಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ನಾಲ್ಕು ಪ್ರಕರಣಗಳಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ಎರಡು ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಶಿಕ್ಷೆ ಘೋಷಿಸಲಾಗಿದೆ, ಉಳಿದ ಎರಡು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ದ ಕ್ರಮಕೈಗೊಳ್ಳಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹಲ್ಲೆ ಪ್ರಕರಣದಲ್ಲಿ ತನಿಖಾ ಸಮಯದಲ್ಲಿ ದೂರುದಾರರು ಸುಳ್ಳು ದೂರು ನೀಡಿದ್ದು ಅದು ಸಾಬೀತಾದ ಕಾರಣ, ಅವರ ವಿರುದ್ಧ ಆದೇ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಪ್ರಕರಣದಲ್ಲಿ ಆರೋಪಿಯು ನ್ಯಾಯಾಲಯದಲ್ಲಿ ತಪ್ರೊಪ್ಪಿಕೊಂಡ ಕಾರಣ 500 ರೂ. ದಂಡ ವಿಧಿಸಿದ್ದು, ದಂಡ ಕಟ್ಟಲು ತಪ್ಪಿದಲ್ಲಿ ಐದು ದಿನ ಸಾದಾ ಶಿಕ್ಷೆ ಘೋಷಿಸಲಾಗಿದೆ ಎಂದು ಅವರು ಹೇಳಿದರು.
ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಾಹನ ಕಳವು ಪ್ರಕರಣದ ತನಿಖೆ ವೇಳೆ ದೂರುದಾರರು ಸುಳ್ಳು ದೂರು ನೀಡಿರುವುದು ಸಾಬೀತಾದ ಕಾರಣ, ಅವರ ವಿರುದ್ದ ಅದೇ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಪ್ರಕರಣದಲ್ಲಿ ಆರೋಪಿಯು ನ್ಯಾಯಾಲಯದಲ್ಲಿ ತಪ್ಪೋಪ್ಪಿಕೊಂಡ ಕಾರಣ, ನ್ಯಾಯಾಲಯವು ಆರೋಪಿಗೆ 100 ರೂ.ದಂಡ ವಿಧಿಸಿದ್ದು, ದಂಡ ಕಟ್ಟಲು ತಪ್ಪಿದಲ್ಲಿ ಐದು ದಿನ ಸಾದಾ ಶಿಕ್ಷೆ ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.