ಬೆಂಗಳೂರು, ನ.27- ಸಿಎಂ ಸಿದ್ದರಾಮಯ್ಯ ಅವರ ಬಣ ಏಕಾಏಕಿ ಚುರುಕಾಗಿದ್ದು, ಡಿ.ಕೆ.ಶಿವ ಕುಮಾರ್ ಅವರಿಗೆ ಪ್ರತಿತಂತ್ರ ರೂಪಿಸುವ ಸಲುವಾಗಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದೆ. ನಗರದ ಶಿವಾನಂದ ಸರ್ಕಲ್‌ನಲ್ಲಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸರ್ಕಾರಿ ನಿವಾಸದಲ್ಲಿ ಇಂದು ಬೆಳಗ್ಗೆ ನಡೆದ ಮಹತ್ವದ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್‌ನ ಹಿರಿಯ ಸದಸ್ಯ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಎರಡು ಮೂರು ದಿನಗಳಲ್ಲಿ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಮಹತ್ವದ ಸಭೆ ನಡೆಯಲಿದ್ದು, ಅಲ್ಲಿ ಮುಖ್ಯಮಂತ್ರಿ ಹುದ್ದೆಯ ಭವಿಷ್ಯ ನಿರ್ಧಾರವಾಗಲಿದೆ. ಡಿ.ಕೆ.ಶಿವಕುಮಾರ್ ಅವರ ಒತ್ತಡಕ್ಕೆ ಮಣಿದು ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಿದ್ದಾದರೆ, ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಗೊಂದಲ ಸಿದ್ದರಾಮಯ್ಯ ಅವರ ಬಣದಲ್ಲಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ಸಂದೇಶವನ್ನು ಸತೀಶ್ ಜಾರಕಿಹೊಳಿ ಬೆಂಬಲಿಗರಿಗೆ ರವಾನೆ ಮಾಡುತ್ತಿದ್ದಾರೆ.
ಎಲ್ಲಕ್ಕಿಂತ ಮೊದಲು ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸದಂತೆ ತಡೆಯಲು ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಅತ್ತ ಡಿ.ಕೆ.ಶಿವಕುಮಾರ್ ಬಣ ಹೆಚ್ಚು ಕ್ರಿಯಾಶೀಲವಾಗಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಪ್ರಮಾಣದ ಚರ್ಚೆಗಳು ನಡೆಯುತ್ತಿವೆ. ಈ ಹಂತದಲ್ಲಿ ನಾವು ಮೌನವಾಗಿದ್ದರೆ, ಪರಿಸ್ಥಿತಿ ಬದಲಾಗಬಹುದು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರ ಬೆಂಬಲಿಗರು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ.
ಸಭೆಗಳ ನೇತೃತ್ವವನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಹಿಸಿಕೊಂಡಿದ್ದಾರೆ. ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರು, ಸತೀಶ್ ಜಾರಕಿಹೊಳಿ ಅವರನ್ನೇ ಭೇಟಿ ಮಾಡಿ ಬೆಂಬಲ ಯಾಚಿಸಿದ್ದರು. ತಾವು ಸಿದ್ದರಾಮಯ್ಯ ಅವರನ್ನು ಬಿಟ್ಟು ಬರುವುದಿಲ್ಲ ಎಂಬುವುದನ್ನು ಸತೀಶ್ ಜಾರಕಿಹೊಳಿ ಸ್ಪಷ್ಟವಾಗಿ ಹೇಳಿದ್ದರು. ಅದರ ಬಳಿಕ ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಉತ್ತರ ಕರ್ನಾಟಕ ಭಾಗದ ಏಳೆಂಟು ಮಂದಿ ಶಾಸಕರ ಜೊತೆ ಡಿನ್ನರ್ ಮೀಟಿಂಗ್ ನಡೆಸಿದ್ದರು. ಇದು ರಾಜಕಾರಣದಲ್ಲಿ ಸಮಬಲದ ಹೋರಾಟ ನಡೆಯುತ್ತಿರುವ ಸಂದೇಶ ರವಾನಿಸಿತ್ತು.
