Saturday, February 22, 2025
Homeರಾಜ್ಯರೈತರ ಮನವಿ ಮೇರೆಗೆ ಇನ್ನೂ 15 ದಿನ ಮಲಪ್ರಭಾ ಜಲಾಶಯದಿಂದ ನೀರು ಬಿಡಲು ಲಕ್ಷ್ಮೀ ಹೆಬ್ಬಾಳ್ಕರ್...

ರೈತರ ಮನವಿ ಮೇರೆಗೆ ಇನ್ನೂ 15 ದಿನ ಮಲಪ್ರಭಾ ಜಲಾಶಯದಿಂದ ನೀರು ಬಿಡಲು ಲಕ್ಷ್ಮೀ ಹೆಬ್ಬಾಳ್ಕರ್ ಆದೇಶ

Lakshmi Hebbalkar orders to release water from Malaprabha reservoir for another 15 days

ಸವದತ್ತಿ,ಫೆ.19- ಮಲಪ್ರಭಾ ಜಲಾಶಯದಿಂದ ಕಾಲುವೆಗಳಿಗೆ ಹರಿಬಿಡಲಾಗಿರುವ ನೀರನ್ನು ಫೆಬ್ರವರಿ 15ರಿಂದ ಸ್ಥಗಿತಗೊಳಿಸುವ ನಿರ್ಧಾರವನ್ನು ರೈತರ ಬೇಡಿಕೆಯ ಹಿನ್ನೆಲೆಯಲ್ಲಿ ಕೈ ಬಿಟ್ಟು ಮಾರ್ಚ್ 1ರವರೆಗೂ ನೀರು ಬಿಡುವಂತೆ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆದೇಶಿಸಿದ್ದಾರೆ.

ಸಚಿವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 15ರಂದು ಜರುಗಿದ್ದ ಸಭೆಯಲ್ಲಿ ಶಾಸಕರುಗಳು, ಮಹಾಮಂಡಳದ ಅಧ್ಯಕ್ಷರು, ರೈತರು ಮುಖಂಡರೊಂದಿಗೆ ಚರ್ಚಿಸಿ, ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ 2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗಾಗಿ 14.87 ಟಿ.ಎಂ.ಸಿ ಹಾಗೂ ಹಿಂಗಾರು ಹಂಗಾಮಿಗೆ 16 ಟಿ.ಎಂ.ಸಿ ಹೀಗೆ ಒಟ್ಟಾರೆಯಾಗಿ 30.842 ಟಿ.ಎಂ.ಸಿ ನೀರನ್ನು ಮಲಪ್ರಭಾ ಜಲಾಶಯದಿಂದ ನೀರಾವರಿಗಾಗಿ ಒದಗಿಸಲಾಗಿದೆ.

ಅದರಂತೆ ಮಲಪ್ರಭಾ ಜಲಾಶಯದಿಂದ ನೀರಾವರಿಗಾಗಿ ಒಳಪಡುವ ಕಾಲುವೆಗಳ ಮುಖಾಂತರ ಫೆಬ್ರವರಿ 14ರ ವರೆಗೆ 16 ಟಿಎಂಸಿ ನೀರನ್ನು ನೀರಾವರಿ ಉದ್ದೇಶಕ್ಕೆ ರೈತರಿಗೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಎರಡೂ ಹಂಗಾಮುಗಳು ಮುಗಿದಿದ್ದರೂ ಸಹ, ನರಗುಂದ ಹಾಗೂ ಬಾದಾಮಿ ಶಾಸಕರು ಹಾಗೂ ರೈತ ಮುಖಂಡರು ನೀರನ್ನು ಕಾಲುವೆಗಳಿಗೆ ಮಾರ್ಚ್ 15ರವರೆಗೆ ಮುಂದುವರಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರಲ್ಲಿ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಫೆಬ್ರವರಿ 15ಕ್ಕೆ ಸ್ಥಗಿತಗೊಳಿಸಬೇಕಾಗಿದ್ದ ನೀರನ್ನು ಮಾರ್ಚ್ 1ರ ವರೆಗೆ ನೀರಾವರಿ ಕಾಲುವೆಗಳ ಮುಖಾಂತರ ಹರಿಸುವುದನ್ನು ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.

ಅಲ್ಲದೆ, ಅವಶ್ಯಕ ಕುಡಿಯುವ ನೀರಿಗಾಗಿ ಜೂನ್ ಅಂತ್ಯದವರೆಗೆ 15 ಟಿ.ಎಂ.ಸಿ ನೀರನ್ನು ಕಾಯ್ದಿರಿಸಿ ಒದಗಿಸಲು ಸಚಿವರು ಸೂಚಿಸಿದ್ದಾರೆ. ಜೊತೆಗೆ, ಮಾರ್ಚ್ 1 ರೊಳಗಾಗಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳು ಕುಡಿಯುವ ನೀರಿಗಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಪ್ರಸಕ್ತ ಬೇಸಿಗೆಯ ತೀವ್ರತೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಬೇಡಿಕೆ ಹೆಚ್ಚಾಗುವುದರಿಂದ ಹಿತ ಮಿತವಾಗಿ ನೀರನ್ನು ಬಳಸುವಂತೆ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆಗಿರುವ ನವಿಲುತೀರ್ಥದ ಅಧೀಕ್ಷಕ ಅಭಿಯಂತರ ವಿ.ಎಸ್.ಮಧುಕರ ಮನವಿ ಮಾಡಿದ್ದಾರೆ. ಜೊತೆಗೆ, ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.

RELATED ARTICLES

Latest News