ನವದೆಹಲಿ,ಫೆ.20- ಸಾವಿರಾರು ಜನರ ಹರ್ಷೋದ್ಘಾರ ಮುಗಿಲು ಮುಟ್ಟಿದ ಸಂಭ್ರಮಾಚಾರಣೆಯ ನಡುವೆಯೇ ರಾಷ್ಟ್ರ ರಾಜಧಾನಿ ನವದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತ ಅವರು ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕಾರ ಮಾಡಿದರು.
ಈ ಮೂಲಕ 27 ವರ್ಷಗಳ ನಂತರ ದೆಹಲಿಯಲ್ಲಿ ಸ್ವಂತಬಲದ ಮೇಲೆ ಅಧಿಕಾರ ಗದ್ದುಗೆ ಹಿಡಿಯುವ ಬಹು ದಿನಗಳ ಕನಸು ಕೊನೆಗೂ ನನಸಾಗಿದೆ. 32 ವರ್ಷಗಳ ವಿಧಾನಸಭಾ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗುತ್ತಿರುವ 4ನೇ ಮಹಿಳೆ ಅವರು. ಬಿಜೆಪಿಯ ಸುಷ್ಮಾ ಸ್ವರಾಜ್, ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಹಾಗೂ ಎಎಪಿಯ ಆತಿಶಿ ಅವರು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದರು.
ಇದೇ ವೇಳೆ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರವಾಲ್ ಅವರನ್ನು ಸೋಲಿಸಿದ್ದ ಪರ್ವೇಶ್ ವರ್ಮಾ ಅವರು ಉಪ ಮುಖ್ಯಮಂತ್ರಿಯಾಗಿ ಹಾಗೂ ಬಿಜೆಪಿ ಶಾಸಕರಾದ ಆಶಿಶ್ ಸೂದ್, ಮಂಜಿಂದರ್ ಸಿಂಗ್ ಸಿಸಾರ್, ರವೀಂದರ್ ಇಂದ್ರಜ್, ಕಪಿಲ್ ಮಿಶ್ರಾ ಮತ್ತು ಪಂಕಜ್ ಕುಮಾರ್ ಸಿಂಗ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ದೆಹಲಿಯ ಲೆಫ್ಟಿನೆಂಟ್ ಜನರಲ್ ವಿ.ಕೆ.ಸಕ್ಸೆನಾ ಅವರು ನೂತನ ಸಿ ಎಂ ರೇಖಾ ಗುಪ್ತ ಹಾಗೂ ಇತರರಿಗೆ ಅಧಿಕಾರ ಗೌಪ್ಯತೆ ಬೋಧಿಸಿದರು. ಎಲ್ಲರೂ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವಿಕಾರ ಮಾಡಿದ್ದು ವಿಶೇಷವಾಗಿತ್ತು. ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ವಿಶೇಷ ಎಂದರೆ 2015 ರಲ್ಲಿ ಆಭೂತಪೂರ್ವ ಜನಾದೇಶ ಪಡೆದು, ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಎಎಪಿಯ ಅರವಿಂದ್ ಕೇಜೋವಾಲ್ ಕೂಡಾ ಇದೇ ಮೈದಾನದಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದರು.
ನಿನ್ನೆ ಸಂಜೆ ನಡೆದ ಬಿಜೆಪಿ ಶಾಸಕರ ನಿರ್ಣಾಯಕ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾದ ನಂತರ ಅವರು ಮುಂದಿನ ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ದರು. ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿರುವ ಸ್ಥಳ ಮತ್ತು ಸುತ್ತಮುತ್ತ 25,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಈ ಮೆಗಾ ಕಾರ್ಯಕ್ರಮದಲ್ಲಿ 20 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು, ದೆಹಲಿ ಚುನಾವಣೆಯಲ್ಲಿ ಪ್ರಚಾರ ಮಾಡಿದ ಇತರ ರಾಜ್ಯಗಳ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. 50 ಕ್ಕೂ ಹೆಚ್ಚು ಚಲನಚಿತ್ರ ತಾರೆಯರು ಮತ್ತು ಕೈಗಾರಿಕೋದ್ಯಮಿಗಳು ಭಾಗಿಯಾಗಿದ್ದರು. ಪ್ರಮಾಣವಚನ ಸಮಾರಂಭಕ್ಕೆ ಮುಂಚಿತವಾಗಿ ವರ್ಣರಂಜಿತ ಸಂಗೀತ ಕಾರ್ಯಕ್ರಮ ನಡೆಯಿತು. ಇದರಲ್ಲಿ ಕೈಲಾಶ್ ಖೇರ್ ಪ್ರದರ್ಶನ ನೀಡಿದರು. ಜೊತೆಗೆ ಪ್ರಮುಖ ದೇಶಗಳ ರಾಜತಾಂತ್ರಿಕರನ್ನೂ ಸಹ ಆಹ್ವಾನಿಸಲಾಗಿತ್ತು. ದೇಶದ ಆಧ್ಯಾತ್ಮಿಕ ನಾಯಕರನ್ನು ಬಾಬಾ ರಾಮದೇವ್, ಸ್ವಾಮಿ ಚಿದಾನಂದ, ಬಾಬಾ ಬಾಗೇಶ್ವರ ಧೀರೇಂದ್ರ ಶಾಸ್ತ್ರಿ ಮತ್ತು ಇತರ ಧಾರ್ಮಿಕ ವ್ಯಕ್ತಿಗಳು ಪ್ರತಿನಿಧಿಸಿದ್ದರು.
ಸಾಮಾನ್ಯ ಜನರಲ್ಲಿ ದೆಹಲಿಯ ರೈತರು ಮತ್ತು ಲಾಡ್ಲಿ ಬೆಹೆನ್ ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು, ಮತ್ತು ಸಾಮಾನ್ಯ ಜನರನ್ನು ಸಹ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ದೆಹಲಿ ಚುನಾವಣಾ ಫಲಿತಾಂಶಗಳು ಘೋಷಣೆಯಾದ 11 ದಿನಗಳ ನಂತರ ಬಿಜೆಪಿ ಶಾಲಿಮಾರ್ ಬಾಗ್‌ನಿಂದ ಮೊದಲ ಬಾರಿಗೆ ಶಾಸಕಿಯಾಗಿರುವ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡಿದೆ. ಬುಧವಾರ ಸಂಜೆ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು.
ಮೋದಿ ನಿರೀಕ್ಷೆಗಳಿಗೆ ತಕ್ಕಂತೆ ನಡೆಯುತ್ತೇನೆ :
ಈ ನಡುವೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ರೇಖಾ ಗುಪ್ತಾ ಅವರು, ಇದು ಒಂದು ಪವಾಡ ಎನಿಸುತ್ತಿದೆ, ಇದು ಹೊಸ ಪ್ರೇರಣೆ ಮತ್ತು ಹೊಸ ಅಧ್ಯಾಯ. ನಾನು ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ ಎಂದರೆ ಎಲ್ಲಾ ಮಹಿಳೆಯರಿಗೂ ಈ ದಾರಿ ತೆರೆದಿರುತ್ತದೆ ಎಂದೇ ಅರ್ಥ. ಭ್ರಷ್ಟಾಚಾರ ನಡೆಸಿದ ಪ್ರತಿಯೊಬ್ಬರೂ ಪ್ರತಿ ರೂಪಾಯಿಯ ಲೆಕ್ಕವನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಒಂದು ದೊಡ್ಡ ಜವಾಬ್ದಾರಿ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಹೈಕಮಾಂಡ್‌ಗೆ ಧನ್ಯವಾದ ಹೇಳುತ್ತೇನೆ. ನಾನು ನನ್ನ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ. ನಮ್ಮ ಪಕ್ಷವು ನೀಡಿರುವ ಎಲ್ಲಾ ಭರವಸೆಗಳನ್ನು ಪೂರ್ಣಗೊಳಿಸುವುದು ನನ್ನ ಮೊದಲ ಆದ್ಯತೆಯಾಗಿದೆ.
ಎರಡನೇ ಆದ್ಯತೆಯೆಂದರೆ ನಮ್ಮ ಎಲ್ಲಾ 48 ಶಾಸಕರು ಒಂದು ತಂಡವಾಗಿ ಕೆಲಸ ಮಾಡುವುದು. ನಾನು ದೆಹಲಿಯ ಮುಖ್ಯಮಂತ್ರಿಯಾಗುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಹಿಂದಿನ ಭ್ರಷ್ಟ ಸರ್ಕಾರವು ಜನರಿಗೆ ಸೇರಿದ ಪ್ರತಿ ರೂಪಾಯಿಗೂ ಲೆಕ್ಕವನ್ನು ಇದೀಗ ನೀಡಬೇಕಾಗುತ್ತದೆ. ನಾನು ಪ್ರಧಾನಿ ಮೋದಿಯವರ ನಿರೀಕ್ಷೆಗಳಿಗೆ ತಕ್ಕಂತೆ ನಡೆಯುತ್ತೇನೆಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಮಹಿಳೆಯರಿಗೆ ಮಾಸಿಕ 2,500 ರೂ. ಆರ್ಥಿಕ ನೆರವು ನೀಡುವ ಚುನಾವಣಾ ಭರವಸೆಯನ್ನು ಬಿಜೆಪಿ ಸರ್ಕಾರ ಈಡೇರಿಸಲಿದೆ ಎಂದೂ ಅವರು ಭರವಸೆ ನೀಡಿದರು. ಆರ್ಥಿಕ ನೆರವಿನ ಮೊದಲ ಕಂತನ್ನು ಮಾರ್ಚ್ 8 ರೊಳಗೆ ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು.
ಪ್ರಧಾನಿ ಮೋದಿಯವರ ಕನಸನ್ನು ನನಸಾಗಿಸುವುದು ನಮ್ಮ ಎಲ್ಲಾ 48 ಬಿಜೆಪಿ ಶಾಸಕರ ಜವಾಬ್ದಾರಿಯಾಗಿದೆ. ಮಹಿಳೆಯರಿಗೆ ಆರ್ಥಿಕ ನೆರವು ಸೇರಿದಂತೆ ನಮ್ಮ ಎಲ್ಲಾ ಭರವಸೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ. ಮಾರ್ಚ್ 8 ರೊಳಗೆ ಮಹಿಳೆಯರಿಗೆ ಅವರ ಖಾತೆಗಳಿಗೆ 100 ಪ್ರತಿಶತದಷ್ಟು ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್ ನಿರ್ಮಾಲಾ ಸೀತಾರಾಮಾನ್, ಅರುಣಾಚಲ ಪ್ರದೇಶದ ಪ್ರೇಮಾ ಖಂಡು, ಅಸ್ಸಾಂನ ಹಿಮಂತ ಬಿಸ್ವಾ ಶರ್ಮಾ, ಛತ್ತೀಸ್‌ಗಡದ ವಿಷ್ಣು ದೇವ್ ಸಾಯಿ, ಗೋವಾದ ಪ್ರಮೋದ್ ಸಾವಂತ್, ಗುಜರಾತ್‌ನ ಭೂಪೇಂದ್ರಭಾಯ್ ಪಟೇಲ್, ಹರಿಯಾಣದ ನಯಾಬ್ ಸಿಂಗ್ ಸೈನಿ, ಮಧ್ಯಪ್ರದೇಶದ ಮೋಹನ್ ಯಾದವ್, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಎನ್‌ಡಿಎ ಆಳಿತವಿರುವ ಸಿಎಂ ಹಾಗೂ ಡಿಸಿಎಂಗಳು ಸೇರಿದಂತೆ ಮತ್ತಿರರು ಭಾಗವಹಿಸಿದ್ದರು.
ರೇಖಾ ಆಯ್ಕೆಗೆ ಕಾರಣ ಏನು? :
27 ವರ್ಷದ ನಂತರ ಅಧಿಕಾರಕ್ಕೆ ಬಂದಿರುವುದರ ಜೊತೆ ಮೊದಲ ಸಲ ಶಾಸಕರಾಗಿರುವ ಕಾರಣ ಸದ್ಯ ಬಿಜೆಪಿಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಈ ಕಾರಣಕ್ಕೆ ಮೊದಲ ಬಾರಿಗೆ ಗೆದ್ದಿರುವ ರೇಖಾ ಗುಪ್ತ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಪರ್ವೇಶ್ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಮಗನಾಗಿದ್ದಾರೆ. ಅವರಿಗೆ ಸಿಎಂ ಪಟ್ಟ ನೀಡಿದರೆ ಕುಟುಂಬ ರಾಜಕಾರಣದ ಆರೋಪ ಬರುತ್ತಿತ್ತು.
ರೇಖಾಗುಪ್ತಾ ಪ್ರಬಲ ಬನಿಯಾ ಸಮುದಾಯಕ್ಕೆ ಸೇರಿದ ನಾಯಕಿಯಾಗಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರವಾಲ್ ಕೂಡಾ ಬನಿಯಾ ಸಮುದಾಯಕ್ಕೆ ಸೇರಿದ್ದರು. ಚುನಾವಣೆ ಸಮಯದಲ್ಲಿ ದೆಹಲಿ ಸಿಎಂ ಅತಿಶಿಯಾಗಿದ್ದರು. ಈಗ ರೇಖಾ ಅವರನ್ನು ಆಯ್ಕೆ ಮಾಡುವ ಮೂಲಕ ಮಹಿಳೆಗೆ ಆದ್ಯತೆ ನೀಡಲಾಗಿದೆ ಎಂಬ ಸಂದೇಶವನ್ನು ಕಳುಹಿಸಿದಂತಾಗುತ್ತದೆ. ದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮತ್ತು ಎನ್‌ಡಿಎ ಸರ್ಕಾರಗಳಲ್ಲಿ ಮಹಿಳಾ ಡಿಸಿಎಂಗಳಿದ್ದಾರೆ. ಆದರೆ ಎಲ್ಲೂ ಮಹಿಳಾ ಸಿಎಂ ಇರಲಿಲ್ಲ.
ಹೀಗಾಗಿ ಬಿಜೆಪಿ ಹೈಕಮಾಂಡ್ ರಾಷ್ಟ್ರ ರಾಜಧಾನಿಯಲ್ಲೇ ಮಹಿಳೆಗೆ ಪಟ್ಟ ಕಟ್ಟಿದೆ. ಓಬಿಸಿ ನಾಯಕರನ್ನು ಆಯ್ಕೆ ಮಾಡಿದರೆ ಬಿಜೆಪಿ ಮಾತ್ರವಲ್ಲದೇ ಇತರ ರಾಜ್ಯಗಳಲ್ಲಿ ತನ್ನ ಮತದಾರರನ್ನು ಬಲಪಡಿಸುವ ಗುರಿ ಹೊಂದಿದೆ. ಅಧಿಕಾರದಲ್ಲಿರುವ ಸರ್ಕಾರಗಳ ಪೈಕಿ ಸದ್ಯ ಪಶ್ಚಿಮ ಬಂಗಾಳದಲ್ಲಿರುವ ಮಮತಾ ಬ್ಯಾನರ್ಜಿ ಒಬ್ಬರೇ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ, ದೇಶದಲ್ಲಿ ಎಲ್ಲಿಯೂ ಮಹಿಳಾ ಸಿಎಂ ಅಧಿಕಾರದಲ್ಲಿ ಇಲ್ಲ. ಟಿಎಂಸಿಗೆ ಮತ ನೀಡುವ ಮೂಲಕ ನಮ್ಮನ್ನು ಉಳಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದರು. ಆದರೆ ಮುಂದಿನ ಚುನಾವಣೆ ಮಮತಾ ಬ್ಯಾನರ್ಜಿ ಈ ಹೇಳಿಕೆ ನೀಡಲು ಸಾಧ್ಯವಾಗುವುದಿಲ್ಲ.
ಯಾರು ರೇಖಾ ಗುಪ್ತ ? :
1974ರಲ್ಲಿ ಹರಿಯಾಣದ ಜಿಂದ್ ಜಿಲ್ಲೆಯ ನಂದಗಢದಲ್ಲಿ ರೇಖಾ ಗುಪ್ತಾ ಅವರು ಜನಿಸಿದ್ದು, ರೇಖಾ ಅವರ ತಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಬಳಿಕ ರೇಖಾಗೆ ಎರಡು ವರ್ಷವಾದಾಗ ಇವರ ಕುಟುಂಬ ದೆಹಲಿಗೆ ಸ್ಥಳಾಂತರವಾಗಿತ್ತು. ಹೀಗಾಗಿ ದೆಹಲಿಯಲ್ಲೇ ತಮ್ಮ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣವನ್ನು ಮುಗಿಸಿದ್ದಾರೆ.
1992ರಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ರೇಖಾ ಎಬಿವಿಪಿ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದರು. ಕಾಲೇಜಿನ ದಿನಗಳಲ್ಲೇ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. 1996-97ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದು, ಕಳೆದ 30 ವರ್ಷಗಳಿಂದಲೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಮೊದಲ ಬಾರಿ 2007 ರಲ್ಲಿ ಉತ್ತರ ಪಿತಂಪುರದಿಂದ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದ ರೇಖಾ, ಮೂರು ಬಾರಿ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಬನಿಯಾ ಸಮುದಾಯಕ್ಕೆ ಸೇರಿದ ರೇಖಾ ಗುಪ್ತಾ ದೆಹಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಊಹೆಗೂ ನಿಲುಕದ ರೀತಿಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಆಯ್ಕೆ ಮಾಡಿದೆ. 27 ವರ್ಷಗಳ ಸತತ ಯತ್ನಗಳ ಬಳಿಕ ದೆಹಲಿಯಲ್ಲಿ ಗದ್ದು ಏರಿರುವ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ನಾರಿಶಕ್ತಿಯ ಕೈಗೆ ಆಡಳಿತ ಚುಕ್ಕಾಣಿ ನೀಡಿದೆ.
ಸವಾಲುಗಳೇನು? :
ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುವುದೇ ಬಿಜೆಪಿ ಸರ್ಕಾರದ ಮುಂದಿರುವ ಪ್ರಮುಖ ಸವಾಲು. ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾ.8ರೊಳಗೆ ಅರ್ಹ ಮಹಿಳಾ ಫಲಾನುಭವಿಗಳಿಗೆ 2,500 ರೂ.ಗಳ ಆರ್ಥಿಕ ನೆರವು ನೀಡುವುದು ಬಿಜೆಪಿಯ ಚುನಾವಣಾ ಪ್ರಚಾರದ ಪ್ರಮುಖ ಭರವಸೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ರ್ಯಾಲಿಗಳಲ್ಲಿ ಈ ಭರವಸೆ ನೀಡಿದ್ದರು. ಇದನ್ನು ತಕ್ಷಣವೇ ಜಾರಿಗೊಳಿಸಬೇಕಾದ ಅನಿವಾರ್ಯತೆ ಇದೆ.
ವಾಯು ಮಾಲಿನ್ಯ ಬಿಕ್ಕಟ್ಟು :
ತೀರಾ ಹದಗೆಟ್ಟು ಅಪಾಯಕಾರಿಯಾಗಿ ದಿಲ್ಲಿಯ ಗಾಳಿಯ ಗುಣಮಟ್ಟ ಕುಸಿದಿದ್ದು, ಇದನ್ನು ಸರಿಪಡಿಸುವ ಗುರುತರ ಜವಾಬ್ದಾರಿ ಹೊಸ ಸರ್ಕಾರದ ಮೇಲಿದೆ. ವಿಶೇಷವಾಗಿ ಚಳಿಗಾಲದಲ್ಲಿ ಕಸ ಸುಡುವುದು, ವಾಹನಗಳ ಸಂಖ್ಯೆ ಹೆಚ್ಚಳ ಮತ್ತು ಕೈಗಾರಿಕಾ ಮಾಲಿನ್ಯ ಪರಿಸ್ಥಿತಿಯನ್ನು ಗಂಭೀರವಾಗಿಸಿದೆ. ಗಿಡ ನೆಡುವುದು, ಎಲೆಕ್ನಿಕ್ ವಾಹನಗಳ ಬಳಕೆ ಉತ್ತೇಜಿಸುವುದು ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವುದು ಸೇರಿದಂತೆ ಸುಸ್ಥಿರ ಪರಿಹಾರಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಬೇಕಿದೆ.
ನೀರು ಮತ್ತು ವಿದ್ಯುತ್ ಸರಬರಾಜು :
ನೀರಿನ ಕೊರತೆ ಮತ್ತು ಅನೇಕ ಪ್ರದೇಶಗಳಲ್ಲಿ ಅನಿಯಮಿತ ಪೂರೈಕೆಯಿಂದ ದಿಲ್ಲಿ ಸಮಸ್ಯೆ ಎದುರಿಸುತ್ತಿದೆ. ಯಮುನಾ ನದಿಯ ಮಾಲಿನ್ಯದಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ವಿಧಾನಸಭಾ ಚುನಾವಣೆಗೆ ಮೊದಲು ಬಿಜೆಪಿ ನೀಡಿದ ಭರವಸೆಗಳ ಪಟ್ಟಿಯಲ್ಲಿ ಶುದ್ಧ ಕುಡಿಯುವ ನೀರು ಮತ್ತು ನಿರಂತರ ವಿದ್ಯುತ್ ಸರಬರಾಜು ಕೂಡ ಸೇರಿದೆ.
ಕಾನೂನು ಮತ್ತು ಸುವ್ಯವಸ್ಥೆ :
ಮಹಿಳೆಯರ ಸುರಕ್ಷತೆ ಮತ್ತು ಹೆಚ್ಚುತ್ತಿರುವ ಅಪರಾಧಗಳು ಕೂಡ ಹೊಸ ಸರ್ಕಾರಕ್ಕೆ ಕಠಿಣ ಸವಾಲು ತಂದೊಡ್ಡಲಿದೆ. ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ದಿಲ್ಲಿ ಪೊಲೀಸರೊಂದಿಗೆ ಸಮನ್ವಯವನ್ನು ಸುಧಾರಿಸುವುದು ಕೂಡ ತುರ್ತು ಅಗತ್ಯ.
ಕಲ್ಯಾಣ ಯೋಜನೆಗಳ ಜಾರಿ :
ಕಳೆದ 2 ಚುನಾವಣೆಗಳಲ್ಲಿ ಅರವಿಂದ್ ಕೇಜ್ರವಾಲ್ ನೇತೃತ್ವದ ಆಪ್ ಅಧಿಕಾರಕ್ಕೆ ಏರಲು ಉಚಿತ ನೀರು, ವಿದ್ಯುತ್ ಮತ್ತು ಸರ್ಕಾರಿ ಶಾಲೆಗಳಲ್ಲಿ ಸುಧಾರಿತ ಶಿಕ್ಷಣ ಸೇರಿದಂತೆ ಹಲವು ಕಲ್ಯಾಣ ಯೋಜನೆಗಳು ಕಾರಣವಾಗಿದ್ದವು. ಈ ಬಾರಿ ಬಿಜೆಪಿ ತನ್ನ ಸಂಕಲ್ಪ ಪತ್ರದಲ್ಲಿ (ಪ್ರಣಾಳಿಕೆ) ಇದೇ ರೀತಿಯ ಕಲ್ಯಾಣ ಯೋಜನೆಗಳನ್ನು ಘೋಷಿಸಿರುವುದರಿಂದ ಇದರ ಅನುಷ್ಠಾನವನ್ನು ಯಾವ ರೀತಿ ಜಾರಿಗೊಳಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.