ಮೈಸೂರು,ಜ.29- ಚಾಮರಾಜೇಂದ್ರ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಸುಮಾರು 25 ವರ್ಷದ ಗಂಡು ಜಿರಾಫೆ ಯುವರಾಜ ನಿಧನ ಹೊಂದಿದೆ.1987 ರಲ್ಲಿ ಜರ್ಮನಿಯಿಂದ ತಂದಿದ್ದ ಹೆನ್ರಿ ಮತ್ತು ಹನಿ ಜಿರಾಫೆಗೆ 9ನೇ ಮರಿಯಾಗಿ 2001ರಲ್ಲಿ ಯುವರಾಜ ಜಿರಾಫೆ ಜನಿಸಿತ್ತು.
ನಂತರ ಪ್ರಾಣಿಪಾಲಕರ ಆರೈಕೆಯಲ್ಲಿ ಬೆಳೆದ ಈ ಜಿರಾಫೆಗೆ ಕಳೆದ ಡಿ.7 ರಂದು 25ನೇ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಮೃಗಾಲಯದಲ್ಲಿ ಹೆಚ್ಚು ವರ್ಷ ಅಂದರೆ 25 ವರ್ಷಗಳ ಕಾಲ ಬದುಕಿದ ಜಿರಾಫೆ ಇದಾಗಿದೆ.
ಸಾಮಾನ್ಯವಾಗಿ ಜಿರಾಫೆಗಳು 15 ರಿಂದ 20 ವರ್ಷ ಬದುಕುತ್ತವೆ. ಆದರೆ ಈ ಯುವರಾಜ 25 ವರ್ಷ ಬದುಕಿದ್ದು, ಮೃಗಾಲಯದ ಪ್ರಮುಖ ಆಕರ್ಷಣೆಯಾಗಿತ್ತು.ಜಿರಾಫೆಯ ಸಾವಿನಿಂದ ಮೃಗಾಲಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
