Sunday, February 23, 2025
Homeರಾಜ್ಯಮತ್ತೊಂದು ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ : ಲೋಕಾಯುಕ್ತಕ್ಕೆ ದೂರು

ಮತ್ತೊಂದು ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ : ಲೋಕಾಯುಕ್ತಕ್ಕೆ ದೂರು

CM Siddaramaiah in another Muda scam: Complaint to Lokayukta

ಬೆಂಗಳೂರು, ಫೆ.20– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಫಲಾನುಭವಿಯಾಗಿದ್ದಾರೆ ಎನ್ನಲಾದ ಮತ್ತೊಂದು ಮೂಡಾ ಹಗರಣವನ್ನು ಬಹಿರಂಗಪಡಿಸಿರುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಈ ಕುರಿತಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಮೂಡಾ ನಿರ್ಮಾಣ ಮಾಡಿದ್ದ ಬಡಾವಣೆಯಲ್ಲಿ ನಿಯಮಾನುಸಾರ ಎಲ್ಲ ಅರ್ಜಿದಾರರಿಗೆ ನಿವೇಶನಗಳನ್ನು ಹಂಚಿಕೆ ಮಾಡಿ ನಕ್ಷೆ ಮಂಜೂರಾತಿಗಳನ್ನು ನೀಡಿ ಹಲವಾರು ಮಂದಿ ಮನೆಗಳನ್ನು ನಿರ್ಮಿಸಿಕೊಂಡಿದ್ದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮ ಸ್ವಾರ್ಥಕ್ಕಾಗಿ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಿಯಮ ಬಾಹಿರವಾಗಿ ತಮ್ಮ ಆಪ್ತ ಸ್ನೇಹಿತ ಹಾಗೂ ಮೂಡಾದ ಮಾಜಿ ಅಧ್ಯಕ್ಷ ಸಿ. ಬಸವೇಗೌಡರಿಂದ ಅಕ್ರಮವಾಗಿ ಡಿ ನೋಟಿಫಿಕೇಷನ್ ಮಾಡಿಸಿದ್ದಾರೆ ಎಂದು ಅವರು ಆರೋಪಿಸಿ ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

ವಿಜಯನಗರ 2ನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು ಕಾನೂನು ರೀತ್ಯಾ ಭೂಸ್ವಾಧೀನಪಡಿಸಿಕೊಂಡಿದ್ದ ಸದರಿ ಸರ್ವೆ ನಂ: 70/4 ಜಮೀನಿನಲ್ಲಿ ನಿವೇಶನಗಳ ಸಂಖ್ಯೆ 3160, 3161, 3162 ಮತ್ತು 3163 ಗಳನ್ನಾಗಿ ವಿಂಗಡಿಸಿ ನಿಯಮಾನುಸಾರ ಅರ್ಜಿದಾರರಿಗೆ ಸದರಿ ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಈ ಪೈಕಿ, 3161 ರ ಸಂಖ್ಯೆಯ ನಿವೇಶನವನ್ನು ಸುಂದ‌ರ್ ರಾಜ್ ಎಂಬುವವರಿಗೆ ಹಂಚಿಕೆ ಮಾಡಿತ್ತು ಹಾಗೂ ತಮಗೆ ದಿಂದ ಹಂಚಿಕೆಯಾಗಿದ್ದ 3161 ಸಂಖ್ಯೆಯ ನಿವೇಶನದಲ್ಲಿ ದಿಂದಲೇ ನಕ್ಷೆ ಮಂಜೂರಾತಿ ಪಡೆದುಕೊಂಡು ಮನೆಯನ್ನು ನಿರ್ಮಿಸಿಕೊಂಡಿದ್ದರು.

ಇದಾದ ನಂತರ ಇದೇ ವಿಜಯನಗರ 2ನೇ ಹಂತದ ಬಡಾವಣೆಗೆಂದು ಭೂಸ್ವಾಧೀನಪಡಿಸಿಕೊಳ್ಳಲಾಗಿದ್ದ ಸದರಿ ಜಮೀನಿನ ಮಾಲೀಕರು ತಮ್ಮ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವಂತೆ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಅಂದಿನ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸದರಿ ಹಿನಕಲ್ ಗ್ರಾಮದ ಸರ್ವೆ ನಂ: 70/4 ಸೇರಿದಂತೆ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳಲ್ಲಿ ಬಡಾವಣೆ ನಿರ್ಮಾಣ ಮಾಡಿ ಎಲ್ಲ ನಿವೇಶನಗಳನ್ನು ನಿಯಮಾನುಸಾರ ಅರ್ಜಿದಾರರಿಗೆ ಹಂಚಿಕೆ ಮಾಡಲಾಗಿದ್ದು, ಡಿ ನೋಟಿಫಿಕೇಷನ್ ಮಾಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಎಂದು ಅತ್ಯಂತ ಸ್ಪಷ್ಟವಾಗಿ ಆದೇಶಿಸಿದ್ದರು.

ನಂತರ, ಸಿದ್ದರಾಮಯ್ಯನವರು ರಾಜ್ಯದ ಉಪ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸದರಿ ನಿವೇಶನವನ್ನು ಖರೀದಿ ಮಾಡುವ 27 ದಿನಗಳ ಮುಂಚೆಯಷ್ಟೇ ಆಗಿನ ಮೂಡಾ ಅಧ್ಯಕ್ಷರಾಗಿದ್ದ ಸಿ. ಬಸವೇಗೌಡರು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸರ್ವೆ ನಂ: 70/4 ಜಮೀನನ್ನು ಡಿನೋಟಿಫಿಕೇಷನ್ ಮಾಡಿ ಆದೇಶಿಸಿದ್ದರು.

ನಂತರ ಸದರಿ ನಿವೇಶನವನ್ನು ಖರೀದಿಸಿದ ಕೆಲವೇ ದಿನಗಳಲ್ಲಿ ಆ ನಿವೇಶನದಲ್ಲಿ ಸುಂದರ್ ರಾಜ್ ಅವರಿಗೆ ಮೂಡಾದಿಂದ ಹಂಚಿಕೆಯಾಗಿ ನಿಯಮಾನುಸಾರ ನಕ್ಷೆ ಮಂಜೂರಾತಿ ಪಡೆದು ಹಲವು ವರ್ಷಗಳ ಹಿಂದೆಯೇ ಅವರು ನಿರ್ಮಿಸಿಕೊಂಡಿದ್ದ ಮನೆಯನ್ನು ನಿರ್ದಾಕ್ಷಿಣ್ಯವಾಗಿ ಕೆಡವಿ ಹಾಕಿ ತಾವು ಒಂದು ಬಂಗಲೆಯನ್ನು ನಿರ್ಮಿಸಿಕೊಂಡಿದ್ದರು.

ಆ ನಿವೇಶನವನ್ನು 06 ವರ್ಷಗಳ ನಂತರ ಒಂದು ಕೋಟಿ ರೂಪಾಯಿಗಳಿಗೆ ಬೇರೆಯವರಿಗೆ ಸಿದ್ದರಾಮಯ್ಯನವರು ಮಾರಾಟ ಮಾಡಿದ್ದರು. ಕಾನೂನಿನ ಸ್ಪಷ್ಟ ಅರಿವಿರುವ ಸಿದ್ದರಾಮಯ್ಯನವರು ತಾವು ರಾಜ್ಯದ ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಮಂತ್ರಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ತಮ್ಮ ಅತ್ಯಾಪ್ತ ಸಿ. ಬಸವೇಗೌಡರಿಗೆ ಒತ್ತಡ ತಂದು ಅದಾಗಲೇ ಕಾನೂನು ರೀತ್ಯಾ ಬಡಾವಣೆ ನಿರ್ಮಾಣಕ್ಕೆಂದು ಪರಿಹಾರ ಧನವನ್ನು ನೀಡಿ ಭೂಸ್ವಾಧೀನಪಡಿಸಿಕೊಂಡಿದ್ದ ಸ್ವತ್ತನ್ನು ಆಯುಕ್ತರ ಆದೇಶಕ್ಕೆ ವಿರುದ್ಧವಾಗಿ ಮತ್ತು ನಿಯಮಾನುಸಾರ ರಾಜ್ಯ ಸರ್ಕಾರದ ಅನುಮೋದನೆಯನ್ನು ಪಡೆದುಕೊಳ್ಳದೆಯೇ ಡಿ ನೋಟಿಫಿಕೇಷನ್ ಮಾಡಿಕೊಂಡು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಮಹಾ ವಂಚನೆಯನ್ನು ಮಾಡಿರುತ್ತಾರೆ.

ಸಿದ್ದರಾಮಯ್ಯ ನವರ ವಿರುದ್ಧ ಮತ್ತು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಕಾನೂನು ಬಾಹಿರವಾಗಿ ಮಾಡಿರುವ ಅಂದಿನ ಮುಡಾದ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಸೇರಿದಂತೆ ಈ ಹಗರಣದಲ್ಲಿ ಭಾಗಿಯಾಗಿರುವ ಎಲ್ಲ ಭ್ರಷ್ಟ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ, ವಂಚನೆ ಮತ್ತು ಸರ್ಕಾರಿ ಭೂ ಕಬಳಿಕೆಗೆ ಸಂಚು ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಲೋಕಾಯುಕ್ತ ಹಾಗೂ ಲೋಕಾಯುಕ್ತ ಅವರಿಗೆ ಸಂಪೂರ್ಣ ದಾಖಲೆಗಳ ಸಹಿತ ದೂರು ಸಲ್ಲಿಸಿದ್ದಾರೆ.

RELATED ARTICLES

Latest News