Monday, February 24, 2025
Homeರಾಜಕೀಯ | Politicsದೆಹಲಿ ದಂಡಯಾತ್ರೆ ನಡೆಸಿದ್ದ ಸಿದ್ದು ಬಣಕ್ಕೆ 'ಕೈ'ಕಮಾಂಡ್ ವಾರ್ನಿಂಗ್

ದೆಹಲಿ ದಂಡಯಾತ್ರೆ ನಡೆಸಿದ್ದ ಸಿದ್ದು ಬಣಕ್ಕೆ ‘ಕೈ’ಕಮಾಂಡ್ ವಾರ್ನಿಂಗ್

Congress High Command warn Siddaramaiah Suppoters

ಬೆಂಗಳೂರು, ಫೆ.20- ರಾಜ್ಯ ರಾಜಕಾರಣದಲ್ಲಿ ತಮ್ಮ ಅಸ್ತಿತ್ವ ಸ್ಥಾಪನೆಗಾಗಿ ದೆಹಲಿ ಯಾತ್ರೆ ನಡೆಸಿದ್ದ ಸಚಿವರ ಉತ್ಸಾಹಕ್ಕೆ ಹೈಕಮಾಂಡ್ ತಣ್ಣೀರೆರಚಿದೆ. ಗೃಹಸಚಿವ ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಸೇರಿದಂತೆ ಹಲವಾರು ಮಂದಿ ಸಚಿವರು ಡಿ.ಕೆ.ಶಿವಕುಮಾರ್‌ರವರ ವಿರುದ್ದ ತೆರೆಮರೆಯ ಕಸರತ್ತು ನಡೆಸಲು ದೆಹಲಿ ದಂಡಯಾತ್ರೆ ನಡೆಸಿದರು.

ಆದರೆ ಇದ್ಯಾವುದಕ್ಕೂ ಹೈಕಮಾಂಡ್ ಸೊಪ್ಪು ಹಾಕದೇ ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ಪಕ್ಷದ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸಿ ಮುಜುಗರ ಉಂಟು ಮಾಡಬೇಡಿ. ಒಂದು ವೇಳೆ ಇದೇ ಪ್ರವೃತ್ತಿಯನ್ನು ಮುಂದುವರೆಸಿದರೆ ಹೈಕಮಾಂಡ್ ಮಧ್ಯಪ್ರವೇಶ ಅನಿವಾರ್ಯವಾಗಬಹುದು ಎಂದು ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ.

ಹೀಗಾಗಿ ದೆಹಲಿಯಿಂದ ಮರಳುತ್ತಿದ್ದಂತೆ ಸತೀಶ್ ಜಾರಕಿಹೊಳಿ ಹಾಗೂ ಪರಮೇಶ್ವರ್ ತಣ್ಣಗಾಗಿದ್ದಾರೆ. ರಾಜಣ್ಣ ಒಳಗೊಳಗೇ ಸಿಟ್ಟಿದ್ದರೂ ಬಹಿರಂಗವಾಗಿ ಹೇಳಲಾಗದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ.ಮೂಲಗಳ ಪ್ರಕಾರ, ಮುಡಾ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣಹಾಗೂ ಇತರರಿಗೆ ಕಾಂಗ್ರೆಸ್‌ನ ಪ್ರಭಾವಿ ನಾಯಕರೇ ದಾಖಲೆಗಳನ್ನು ಒದಗಿಸುತ್ತಿದ್ದಾರೆ ಹಾಗೂ ಹಣಕಾಸಿನ ನೆರವೂ ಕೂಡ ರವಾನೆಯಾಗುತ್ತಿದೆ ಎಂಬ ಸಂಶಯ ಸಿದ್ದರಾಮಯ್ಯನವರ ಬಣದ ನಾಯಕರಿಗಿದೆ.

ಹೀಗಾಗಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಕಾಂಗ್ರೆಸ್‌ನಲ್ಲಿ ಮತ್ತೊಬ್ಬರನ್ನು ಕಾಲೆಳೆಯುವ ಸಂಚುಗಳಿಗೆ ಅವಕಾಶ ನೀಡದಂತೆ ಪ್ರಭಾವಿ ನಾಯಕರಿಗೆ ಕಠಿಣ ಸೂಚನೆ ನೀಡಬೇಕು ಎಂದು ಸಿದ್ದು ಬಣದ ಸಚಿವರು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ರೀತಿಯ ಅನುಮಾನಗಳಿಗೆ ಸೂಕ್ತ ದಾಖಲೆಗಳಿವೆಯೇ? ಎಂದು ಹೈಕಮಾಂಡ್ ನಾಯಕರು ಸಿದ್ದರಾಮಯ್ಯನವರ ಬಣದ ಪ್ರಭಾವಿ ಸಚಿವರುಗಳನ್ನು ಪ್ರಶ್ನಿಸಿದೆ. ಅಧಿಕೃತವಾದ ದಾಖಲೆಗಳಿಲ್ಲ. ಆದರೆ ಸಂಚಿನ ಹಿಂದೆ ಸ್ವಪಕ್ಷೀಯರ ಕೈವಾಡ ಇರುವುದಂತೂ ನಿಜ ಎಂದು ಹೈಕಮಾಂಡ್‌ಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಪುರಾವೆಗಳಿಲ್ಲದೆ ಯಾವುದೇ ವಿಚಾರಗಳನ್ನೂ ಹೈಕಮಾಂಡ್‌ವರೆಗೂ ತರಬೇಡಿ. ಅದರಿಂದ ಪ್ರಯೋಜನವಾಗುವುದಿಲ್ಲ ಎಂದು ಕೆ.ಸಿ.ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮೂವರೂ ಸಚಿವರು ಬರಿಗೈಲಿ ವಾಪಸ್ ಬಂದಿದ್ದಾರೆ. ಶೋಷಿತ ಸಮುದಾಯಗಳ ಶಾಸಕರು, ಸಚಿವರುಗಳ ಪ್ರತ್ಯೇಕ ಸಭೆ ನಡೆಸಿ ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆಗೆ ಹಕ್ಕೊತ್ತಾಯ ಮಂಡಿಸಲು ಮುಂದಾಗಿದ್ದರು. ಅದಕ್ಕೆ ಹೈಕಮಾಂಡ್ ಕಡಿವಾಣ ಹಾಕಿತ್ತು. ನಂತರ ಬೇರೆ ದಾರಿ ಹಿಡಿದ ಸಚಿವರು ಒಬ್ಬರಿಗೆ ಒಂದೇ ಹುದ್ದೆ ಎಂಬ ರಾಜಸ್ಥಾನದ ಘೋಷಣೆಯನ್ನು ಮುಂದಿಟ್ಟುಕೊಂಡು ಉಪಮುಖ್ಯಮಂತ್ರಿ ಹುದ್ದೆ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡರಲ್ಲಿ ಒಂದನ್ನು ಮಾತ್ರ ಡಿ.ಕೆ.ಶಿವಕುಮಾರ್ ಮುಂದುವರೆಸಬೇಕೆಂದು ಪಟ್ಟು ಹಿಡಿದರು.

ಇದ್ಯಾವುದಕ್ಕೂ ಸೊಪ್ಪು ಹಾಕದ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಸ್ವ ಇಚ್ಛೆಯಿಂದ ಅಧ್ಯಕ್ಷ ಸ್ಥಾನ ತೊರೆದರೆ ಮಾತ್ರ ಬೇರೆಯವರನ್ನು ನೇಮಿಸಲಾಗುತ್ತದೆ. ಇಲ್ಲವಾದರೆ ಎರಡೂ ಹುದ್ದೆಗಳಲ್ಲಿ ಡಿ.ಕೆ.ಶಿವಕುಮಾರ್ ಮುಂದುವರೆಯುತ್ತಾರೆ. ಬದಲಾವಣೆಯಾಗಲೇಬೇಕು ಎಂದಾದರೆ ಮುಖ್ಯಮಂತ್ರಿ ಸ್ಥಾನವೂ ಕೂಡ ಅಧಿಕಾರ ಹಂಚಿಕೆಯ ಸೂತ್ರದ ವ್ಯಾಪ್ತಿಗೊಳಪಡಲಿದೆ ಎಂಬ ಸಂದೇಶವನ್ನು ಹೈಕಮಾಂಡ್ ನೀಡಿದೆ.
ಹೀಗಾಗಿ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ ಬಣದ ನಾಯಕರು ಬೆಂಗಳೂರಿಗೆ ವಾಪಸ್ ಬಂದ ನಂತರ ವರಸೆ ಬದಲಿಸುತ್ತಿದ್ದಾರೆ.

RELATED ARTICLES

Latest News